
- ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ನಡೆಸಿರುವುದು ಸರಿಯಲ್ಲ
- ಕಾರ್ಯಕ್ರಮಕ್ಕೆ ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಆಹ್ವಾನಿಸಬೇಕಿತ್ತು
ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ನಡೆದ ರೀತಿ ಬಗ್ಗೆ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, “ಬೆಂಗಳೂರು ವಿಮಾನ ನಿಲ್ದಾಣದ ಮುಂದೆ ನಿರ್ಮಿಸಲಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವು ಪಕ್ಷದ ಕಾರ್ಯಕ್ರಮದಂತಿದೆ” ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
“ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿರುವುದು ಸಂತಸದ ಸಂಗತಿ. ಆದರೆ, ಈ ಕಾರ್ಯಕ್ರಮ ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಆಗಬೇಕಿತ್ತು. ಆದರೆ, ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ನಡೆಸಿರುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಕೈ ಹಾಕಿದ ಸಚಿವ ಅಶೋಕ; ಜಾಲತಾಣಗಳಲ್ಲಿ ಸಚಿವರ ನಡೆಗೆ ವ್ಯಾಪಕ ಟೀಕೆ
ಮುಂದುವರಿದು, "ಸರ್ಕಾರದ ಕಾರ್ಯಕ್ರಮ ಎಂದು ಹೆಸರಿಟ್ಟುಕೊಂಡು, ಶಿಷ್ಟಾಚಾರ ಪ್ರಕಾರ ಬೇರೆಯವರಿಗೆ ಅವಕಾಶವೇ ನೀಡಿಲ್ಲ. ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರನ್ನು ಕರೆಯಬೇಕಿತ್ತು. ಹಾಗೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿಲ್ಲ. ಸರ್ಕಾರ ಇಂತಹ ತಪ್ಪುಗಳನ್ನು ತಕ್ಷಣವೇ ಸರಿಪಡಿಸಬೇಕಿತ್ತು” ಎಂದು ಹೇಳಿದ್ದಾರೆ.