ಸರ್ಕಾರಿ ಅಧಿಕಾರಿಗಳ ಕಾರು ಖರೀದಿ ಆರ್ಥಿಕ ಮಿತಿ ಏರಿಕೆ; ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

  • 'ಸಿಎಂ ಬೊಮ್ಮಾಯಿ ಅಧಿಕಾರಿಗಳ ಕೈಗೊಂಬೆಯಾದರೆ?' ಎಂದು ಕಾಂಗ್ರೆಸ್ ವ್ಯಂಗ್ಯ
  • 'ಅನಗತ್ಯ ವೆಚ್ಚ ಕಡಿತ ಎಂದಿದ್ದ ಸಿಎಂ ಅಸಲಿ ಮುಖ ಇದು' ಎಂದು ಟೀಕೆ

ರಾಜ್ಯ ಸರ್ಕಾರವು ಅಧಿಕಾರಿಗಳ ಕಾರು ಖರೀದಿಗೆ ಇದ್ದ ಆರ್ಥಿಕ ಮಿತಿಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದ್ದು, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೂ ಕೈಗೊಂಬೆಯಾದರೇ?” ಎಂದು ವ್ಯಂಗ್ಯವಾಡಿದೆ.

“ನೆರೆ ಪರಿಹಾರವಿಲ್ಲ, ಜನಪರ ಯೋಜನೆಗಳಿಗೆ ಅನುದಾನವಿಲ್ಲ, ಶೈಕ್ಷಣಿಕ ಕ್ಷೇತ್ರಕ್ಕೆ ಹಣವಿಲ್ಲ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಏರಿಕೆಗೆ ಹಣವಿಲ್ಲ. ಆದರೆ, ಸರ್ಕಾರಿ ಅಧಿಕಾರಿಗಳ ಕಾರು ಖರೀದಿಯ ಹಣದಲ್ಲಿ ಮಾತ್ರ ಭರ್ಜರಿ ಏರಿಕೆ ಮಾಡಲಾಗಿದೆ. 'ಅನಗತ್ಯ ವೆಚ್ಚ ಕಡಿತ' ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಸಲಿ ಮುಖ ಇದು! ಮುಖ್ಯಮಂತ್ರಿ ಅಧಿಕಾರಿಗಳಿಗೂ ಕೈಗೊಂಬೆಯಾದ್ರಾ?” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Image

ಅಧಿಕಾರಿಗಳ ಕಾರು ಖರೀದಿ ಆರ್ಥಿಕ ಮಿತಿ ಏರಿಕೆ

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು ಸೇರಿ ವಿವಿಧ ಹಂತಗಳ ಅಧಿಕಾರಿಗಳ ಹೊಸ ಕಾರುಗಳ ಖರೀದಿಗೆ ಇದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಚಿವರು ಮತ್ತು ಸಂಸದರು ಕಾರು ಖರೀದಿಸುವ ಆರ್ಥಿಕ ಮಿತಿಯನ್ನು 22 ಲಕ್ಷ ರೂ.ನಿಂದ 23 ಲಕ್ಷ ರೂಪಾಯಿಗೆ (ಎಕ್ಸ್ ಷೋ ರೂಂ ದರ) ಏರಿಸಿ ಫೆಬ್ರುವರಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಅಧಿಕಾರಿಗಳ ಕಾರು ಖರೀದಿ ಮಿತಿಯನ್ನು ಈಗ ಹೆಚ್ಚಳ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾರುಗಳ ಬೆಲೆ ಏರಿಕೆ ಆಗಿರುವುದರಿಂದ ಈ ದರವನ್ನು ಪರಿಷ್ಕರಿಸಲಾಗಿದೆ. ಹಳೆಯ ದರಕ್ಕೆ ಈಗ ಕಾರು ಸಿಗುವುದು ಕಷ್ಟ ಎಂದು ಹಣಕಾಸು ಇಲಾಖೆ ಸಮಜಾಯಿಷಿ ನೀಡಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ವಾಹನ ಖರೀದಿಸುವ ಆರ್ಥಿಕ ಮಿತಿ ರೂ. 14 ಲಕ್ಷ ದಿಂದ 20 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೆ ರೀತಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ರೂ. 9 ಲಕ್ಷ ದಿಂದ 18 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. 
ಜಿಲ್ಲಾ ಹಂತದ ಇತರ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿಗಳಿಗೆ ರೂ. 6.50 ಲಕ್ಷ ದಿಂದ 12.50 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ತಹಸೀಲ್ದಾರ್ ಮತ್ತು ಇತರ ಅರ್ಹ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ರೂ. 9 ಲಕ್ಷ ಆರ್ಥಿಕ ಮಿತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾರ್ಕಿಂಗ್ ಮಾಫಿಯಾ ತಡೆಯಲು ಯೋಜನೆ: ಪೇ-ಪಾರ್ಕಿಂಗ್ ವ್ಯವಸ್ಥೆ ವಿಸ್ತರಿಸಲು ಚಿಂತನೆ

ಅಧಿಕಾರಿಗಳು ಹೊಸ ವಾಹನ ಖರೀದಿಸಬೇಕು ಎಂದರೆ, ಈಗ ಬಳಸುತ್ತಿರುವ ವಾಹನ ಬಳಕೆಗೆ ಯೋಗ್ಯವಲ್ಲ ಎಂದು ಆರ್‌ಟಿಒಗಳಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಜತೆಗೆ ಆರ್ಥಿಕ ಇಲಾಖೆಯ ಅನುಮತಿಯೂ ಬೇಕು. ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಇಂಧನ ಮಿತ ವ್ಯಯ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ವಾಹನಗಳನ್ನು ಖರೀದಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್