ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ | ಲೀಟರ್‌ಗೆ 5 ರೂ. ಹೆಚ್ಚಿಸುವಂತೆ ಬಮೂಲ್‌ ಒತ್ತಾಯ

  • ಹಾಲಿನ ದರ ಲೀ. ₹5 ಹೆಚ್ಚಿಸುವಂತೆ ಬಮೂಲ್‌ ಪ್ರಸ್ತಾವನೆ
  • ದರ ಹೆಚ್ಚಳದಿಂದ ನಿಜವಾಗಿ ರೈತರಿಗೆ ಲಾಭ ಆಗಲಿದೆಯಾ?

ರಾಜ್ಯದಲ್ಲಿ ಹಾಲಿನ ಹೆಚ್ಚಳ ಮಾಡಬೇಕೆಂಬ ಚರ್ಚೆ ಶುರುವಾಗಿದೆ. ವ್ಯವಸಾಯದೊಂದಿಗೆ ಹೈನುಗಾರಿಕೆ ಮಾಡುವ ರೈತನಿಗೆ ಹಸು, ಎಮ್ಮೆಗಳ ನಿರ್ವಹಣೆ ಹೊರೆಯಾಗಿದೆ. ಫೀಡ್ ಸಬ್ಸಿಡಿ ಕಡಿತ ಮಾಡಿರುವುದಲ್ಲದೆ, ಹತ್ತಿ ಬೀಜ, ಧಾನ್ಯಗಳ ಹೊಟ್ಟು, ಬೂಸಾ ತಿಂಡಿ ಪದಾರ್ಥಗಳಲ್ಲದೆ, ಪಶುವೈದ್ಯರ ಖರ್ಚು, ಮೇವು ಎಲ್ಲದರ ದರವೂ ಹೆಚ್ಚೇ ಇದೆ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಂಡಳಿ (ಕೆಎಂಎಫ್‌) ಸರ್ಕಾರದ ಮುಂದಿಟ್ಟಿದೆ. 

ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹ 5 ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಸರ್ಕಾರಕ್ಕೆ ಮನವಿ ಮಾಡಿದ್ದು, ದರ ಹೆಚ್ಚಳ ಸಲುವಾಗಿ ಸೆ.22 ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

Eedina App

ಬೆಂಗಳೂರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಂಡಳಿ, ಬೆಂಗಳೂರು, ಕೋಲಾರ, ತುಮಕೂರು ಮತ್ತು ಮಂಡ್ಯ ಹಾಲು ಒಕ್ಕೂಟಗಳು ಹಾಲು ದರ ಹೆಚ್ಚಳಕ್ಕಾಗಿ ಪ್ರತಿಭಟನೆ ಆಯೋಜಿಸಲು ತೀರ್ಮಾನಿಸಿವೆ ಎಂದು ತಿಳಿಸಿದೆ.

ಈ ಬಗ್ಗೆ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಅವರು ಮಾತನಾಡಿದ್ದು, "ಹೈನುಗಾರಿಕೆ ಲಾಭದಾಯಕವಲ್ಲ ಎಂದು ರೈತರು ಅದರಿಂದ ದೂರ ಉಳಿಯುತ್ತಿದ್ದಾರೆ. ಇದರಿಂದಾಗಿ ಪ್ರತಿ ದಿನದ ಹಾಲು ಉತ್ಪಾದನೆಯು 3 ಲಕ್ಷ ಲೀಟರ್‌ಗೆ ಕುಸಿದಿದೆ. ಸರ್ಕಾರ ಜಾನುವಾರುಗಳಿಗೆ ಕೊಡುತ್ತಿದ್ದ ಫೀಡ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿದ್ದು, ಒಂದು ಚೀಲಕ್ಕೆ ₹ 1,040 ಹೆಚ್ಚಿನ ದರ ಇರುವುದರಿಂದ ರೈತರಿಗೆ ಹೊರೆಯಾಗಿದೆ" ಎಂದರು.

AV Eye Hospital ad

ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಪ್ರತಿಕ್ರಿಯೆ ಕೇಳಿ, ಕೆಎಮ್‌ಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಕೆಎಂಎಫ್‌ ವ್ಯಪಸ್ಥಾಪಕ ನಿರ್ದೇಶಕ ಸತೀಶ್‌ ಅವರಿಗೆ ಈ ದಿನ.ಕಾಮ್‌ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಿಲ್ಲ.

"ಲೀಟರ್‌ ಹಾಲಿಗೆ ರೈತರಿಗೆ ಎಸ್‌ಎನ್‌ಆಫ್ ಆಧರಿಸಿ 29 ರೂಪಾಯಿವರೆಗೆ ದರ ನೀಡಲಾಗುತ್ತಿದೆ. ಜೊತೆಗೆ ಲೀಟರ್‌ಗೆ ಎರಡು ರೂಪಾಯಿ ಪ್ರೋತ್ಸಾಹ ಧನ ಸಿಗುತ್ತಿದೆ. ಹಾಲಿನ ದರವನ್ನು ಒಂದೆರಡು ರೂಪಾಯಿ ಹೆಚ್ಚಿಸಿದ ಮಾತ್ರಕ್ಕೆ ರೈತನಿಲ್ಲ ಲಾಭವಾಗುವುದಿಲ್ಲ. ಹಾಲು ಎರಡು ರೂ. ಹೆಚ್ಚಳವಾದ್ರೆ, ಫೀಡ್‌, ಹಿಂಡಿ, ಬೂಸಾ ಮುಂತಾದ ಪಶು ಆಹಾರ ಪದಾರ್ಥಗಳ ದರ ದುಪ್ಪಟ್ಟು ಹೆಚ್ಚಳ ಮಾಡ್ತಾರೆ. ಹಸಿರು ಮೇವು, ಜೋಳದ ಕಡ್ಡಿ ದರವೂ ಹೆಚ್ಚಾಗಿದ್ದು, ಲಾಭಕ್ಕಿಂದ ಖರ್ಚು ಹೆಚ್ಚಿದೆ. ಬಾಂಬೆ, ಮಹಾರಾಷ್ಟ್ರಗಳಲ್ಲಿ ರೈತರಿಗೆ ಲೀ ಹಾಲಿಗೆ ₹ 45 ಕೊಡುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಹಾಲಿನ ದರ ₹40-₹45 ಹೆಚ್ಚಿದರೆ ರೈತನಿಗೆ ಹೈನುಗಾರಿಕೆಯಲ್ಲಿ ಕನಿಷ್ಠ ಲಾಭ ಸಿಗಲಿದೆ" ಎಂದು ಮಂಡ್ಯದ ರೈತ ಮಹೇಶ್‌ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದರು.

ಈ ಸುದ್ದಿ ಓದಿದ್ದೀರಾ? ಅನ್ನ ಕಸಿದ ಅತಿವೃಷ್ಟಿ-4| ಕೃಷಿ ಸಚಿವರು ಕ್ಷೇತ್ರಕ್ಕಷ್ಟೇ ಸೀಮಿತ, ಉಸ್ತುವಾರಿ ಸಚಿವರು ನಾಪತ್ತೆ; ಬೆಳೆ ಪರಿಹಾರ ಕನಸಿನ ಮಾತು..

ಈ ಬಗ್ಗೆ ಮತ್ತೊಬ್ಬ ರೈತ ಶಂಬು ಅವರು ಈದಿನ.ಕಾಮ್‌ಗೆ ಮಾತನಾಡಿದ್ದು, "ಸಹಾಯಧನ ಸೇರಿ ಕೆಎಂಎಫ್‌ ನಿಗದಿಪಡಿಸಿರುವ ದರ ಲೀ. ₹31 ಸಿಗುತ್ತಿದೆ. ಒಂದು ಚೀಲ ಡೈರಿ ಫೀಡ್‌ ₹1020, ಕಡ್ಲೆ ಹಿಂಡಿ 25 ಕೆಜಿಗೆ ₹1400, ರವಾ ಬೂಸಾ ₹ 950 ದರ ಇದೆ. ಹಾಗಾಗಿ ₹3 ದರ ಹೆಚ್ಚಳ ಲಾಭದಾಯಕವಲ್ಲ. ಲೀ. ₹40-₹45 ಸಿಕ್ಕರಷ್ಟೇ ರೈತರಿಗೆ ಉಪಯೋಗ. ಇಂದಿನ ಸರ್ಕಾರ ಬೆಳೆ ಪರಿಹಾರ ಕೊಟ್ರೆ ದೊಡ್ಡದು ಎನ್ನುವ ಹಾಗಿದೆ. ಆದರೆ, ಸರ್ಕಾರ ಈ ಬಾರಿ ಹಾಲಿನ ದರ ಹೆಚ್ಚಳ ಮಾಡಲೇಬೇಕು" ಎಂದು ಒತ್ತಾಯಿಸಿದರು. 

"ಬೆಲೆ ಎಷ್ಟಾರದೂ ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ನಾವು ಖರೀದಿಸಿಯೇ ತಿನ್ನಬೇಕು. ಲೀ. ಹಾಲಿಗೆ ₹35-₹40 ಹಣ ಕೊಡಬೇಕೆಂದರೆ ಕಷ್ಟ ಆಗತ್ತೆ. ಸರ್ಕಾರ ಎಲ್ಲದರ ಬೆಲೆ ಹೆಚ್ಚಳ ಮಾಡಿದೆ, ಟ್ಯಾಕ್ಸ್‌ ಕೂಡ ಜಾಸ್ತಿ ಕಟ್ಟಿದ್ದೀವಿ, ಮಳೆ ನಡುವೆ ವ್ಯಾಪಾರ ಇಲ್ಲ ಇಂತಹ ಸನ್ನಿವೇಶದಲ್ಲಿ ಹಾಲಿನ ಬೆಲೆ ಹೆಚ್ಚಿಸಿ ಬಡವರ ಬದುಕಿಗೆ ಹೊರೆ ಮಾಡಲಾಗುತ್ತಿದೆ" ಎಂದು ಅಸಮಾಧಾನ ವ್ಯಕಪಡಿಸಿದ್ದಾರೆ ಬೆಂಗಳೂರಿನ ಮೂಡಲಪಾಳ್ಯ ನಿವಾಸಿ ತಮ್ಮೇಗೌಡ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app