ಹಾಲಿನ ದರ ಹೆಚ್ಚಳ | ಹಾಲು ಉತ್ಪಾದಕರಿಗೆ ಸಿಗುವುದೇ ದರ ಏರಿಕೆಯ ಫಲ; ರೈತ ಮುಖಂಡರು, ಗ್ರಾಹಕರು ಏನಂತಾರೆ?

Milk rate high-KMF
  • ರಾಜ್ಯದ ಹಾಲು ಒಕ್ಕೂಟದ ಲಾಭದಲ್ಲಿ ರೈತರಿಗೆ ಪಾಲು ಕೊಡಿ; ಬೇಡಿಕೆ
  • ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಳ್ಳದಿದ್ದರೆ ಸಾಕು ಎನ್ನುತ್ತಿರುವ ರೈತರು

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) 'ನಂದಿನಿ' ಬ್ರ್ಯಾಂಡ್‌ನ ಎಲ್ಲ ರೀತಿಯ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿದ್ದು, ಪರಿಷ್ಕೃತ ದರವನ್ನು ಗುರುವಾರದಿಂದಲೇ ಜಾರಿ ಮಾಡಿದೆ.

ನಂದಿನಿ ಹಾಲಿನಲ್ಲಿ ಬರುವ ಎಲ್ಲ ಬಗೆಯ ಹಾಲಿನ ಪ್ಯಾಕೆಟ್‌ಗಳ ದರವನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿದ್ದು, ಈ ತೀರ್ಮಾನದ ಹಿಂದೆ ಪ್ರಮುಖವಾಗಿ ರೈತರ ಹಿತಾಸಕ್ತಿಯನ್ನು ಪರಿಗಣಿಸಲಾಗಿದೆ ಎಂದು ಕೆಎಂಎಫ್‌ ಹೇಳಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಹಸು ಸಾಕಾಣಿಕೆ, ಅವುಗಳ ಬೆಲೆ, ನಿರ್ವಹಣಾ ವೆಚ್ಚ, ಪಶು ಆಹಾರವಾದ ಜೋಳದ ತೌಡು, ಮೆಕ್ಕೆ ಜೋಳ, ಹಿಂಡಿ, ಬೂಸಾ, ಹತ್ತಿ ಬೀಜದ ಹಿಂಡಿ ಮುಂತಾದವುಗಳ ದರ ಹೆಚ್ಚಳವಾಗಿದ್ದು, ರೈತರಿಗೆ ಹೊರೆಯಾಗುತ್ತಿದೆ. ಹಾಗಾಗಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು, ರೈತರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ದರ ಹೆಚ್ಚಿಸಲಾಗಿದೆ ಎಂದಿದ್ದಾರೆ.

ಈ ಬಗ್ಗೆ ಕರ್ನಾಟಕ ಹಾಲು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ ಸಿ ಸತೀಶ್‌ ಅವರು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, "ಗ್ರಾಹಕರಿಂದ ಸಿಗುವ ₹2 ಅನ್ನು ಸಂಪೂರ್ಣವಾಗಿ ರೈತರಿಗೆ ನೀಡುತ್ತೇವೆ. ಅಲ್ಲದೆ, ಹಾಲು ಒಕ್ಕೂಟದ ಒಟ್ಟಾರೆ ವಹಿವಾಟಿನ ಆದಾಯದ ಪ್ರತಿ ₹1ನಲ್ಲಿ ₹79 ಪೈಸೆಯನ್ನು ರೈತರಿಗೆ ಪ್ರೋತ್ಸಾಹಧನವಾಗಿ ನೀಡಲಾಗುವುದು ಎಂದಿದ್ದಾರೆ.

"ರಾಜ್ಯದ ರೈತರ ಅಭ್ಯುದಯಕ್ಕಾಗಿ ಸರ್ಕಾರದೊಂದಿಗೆ ಚರ್ಚಿಸಿ ಹಾಲು ಮತ್ತು ಮೊಸರಿನ ದರವನ್ನು ಮಾತ್ರ ₹2 ಹೆಚ್ಚಳ ಮಾಡಲಾಗಿದೆ. ಇನ್ನುಳಿದಂತೆ ನಂದಿನಿ ಹಾಲಿನ ಇತರೆ ಉತ್ಪನ್ನಗಳಾದ ನಂದಿನಿ ಪೇಡಾ, ಐಸ್‌ಕ್ರೀಂ, ತುಪ್ಪ, ಲಸ್ಸಿಯಂಥವುಗಳ ಬೆಲೆ ಹೆಚ್ಚಳ ಇಲ್ಲ. ಅದೇ ರೀತಿ ಪಶು ಆಹಾರದ ದರ ಕೂಡ ಹೆಚ್ಚಳ ಮಾಡುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಹಾಲು ಉತ್ಪಾದಕರು ವರ್ಷದ ಹಿಂದಿನಿಂದಲೂ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಒತ್ತಾಯಿಸುತ್ತಿದ್ದರು. ಕೆಎಂಎಫ್‌ ಕೂಡ ಪ್ರತಿ ಲೀಟರ್‌ ಹಾಲಿಗೆ ₹3 ದರ ಹೆಚ್ಚಳ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರು ಮತ್ತು ಹಾಲಿನ ಬಳಕೆದಾರರು ಈ ಇಬ್ಬರಿಗೂ ಹೊರೆಯಾಗದ ರೀತಿ ಬೆಲೆ ನಿಗದಿ ಮಾಡುವಂತೆ ಸೂಚನೆ ನೀಡಿದ್ದರು.

ಆದರೆ, ರೈತರು ಮತ್ತು ಗ್ರಾಹಕರು ಹಾಲಿನ ದರ ಹೆಚ್ಚಳದ ಬಗ್ಗೆ ಏನೆಂದಿದ್ದಾರೆ.. ತಿಳಿಯೋಣ ಬನ್ನಿ..

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಿವಾಸಿ ನಾಗಮ್ಮ, ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿ, "ಸತತ 30 ವರ್ಷಗಳ ಕಾಲ ಮನೆಯಲ್ಲಿ ಹಸು ಕಟ್ಟಿ ಹಾಲು ಕರೆದು ತುಂಬಿದ ಮನೆಮಂದಿಯೆಲ್ಲ ಬಳಸಿ ಉಳಿದ್ದದ್ದನ್ನು ಹೆಪ್ಪು ಕೊಟ್ಟು ಮೊಸರು, ಮಜ್ಜಿಗೆ, ಬೆಣ್ಣೆ ಮಾಡುತ್ತಿದ್ದೆವು. ಆಗ ಎಷ್ಟು ಹಾಲು ಬಳಸಿದರೂ ಗೊತ್ತಾಗುತ್ತಿರಲಿಲ್ಲ. ಮಕ್ಕಳನ್ನು ಓದಿಸುವ ಸಲುವಾಗಿ ನಗರ ಪ್ರದೇಶದಲ್ಲಿ ವಾಸ ಮಾಡಬೇಕಾಯಿತು. ಆದ್ದರಿಂದ 10 ವರ್ಷಗಳಿಂದ ಹೈನುಗಾರಿಕೆ ನಿಲ್ಲಿಸಿದ್ದು, ನಿತ್ಯ ನಂದಿನಿ ಪ್ಯಾಕೆಟ್‌ ಹಾಲು ತಂದು ಬಳಸುತ್ತಿದ್ದೇವೆ. ಮನೆಮಂದಿ ಅಲ್ಲದೆ, ಅತಿಥಿಗಳು ಬಂದರೆ ಹಾಲು, ಕಾಫಿ, ಟೀ ಎಂದು ಎರಡ್ಮೂರು ಪ್ಯಾಕೆಟ್‌ ಹಾಲಿಗೆ ನಿತ್ಯ ₹100ಕ್ಕಿಂತ ಹೆಚ್ಚಿನ ಹಣ ಬೇಕು. ಅಂಥದ್ದರಲ್ಲಿ ಹೀಗೆ ಬೆಲೆ ಏರಿಕೆ ಮಾಡಿದರೆ ಹಾಲು ತರುವುದೇ ಕಷ್ಟ" ಎಂದರು.

ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸೌಮ್ಯ ಪಾಟೀಲ್‌ ದರ ಏರಿಕೆ ಕುರಿತು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿ, "ಒಂದು ಪ್ಯಾಕೆಟ್‌ ಹಾಲಿನ ಮೂಲ ದರ ಏನಿರುತ್ತದೆಯೋ ಅದರಲ್ಲಿ ರೈತರಿಗೆ ಪಾಲು ಕೊಡಬೇಕು. ಬದಲಾಗಿ ಪ್ರತಿಬಾರಿ ದರ ಹೆಚ್ಚಿಸಿ ಗ್ರಾಹಕನಿಗೆ ಹೊರೆ ಮಾಡಿ, ಪ್ರಶ್ನಿಸುವವರ ಬಾಯಿ ಮುಚ್ಚಿಸಲು ರೈತರಿಗೆ ಕೊಡುತ್ತೇವೆ ಎನ್ನುತ್ತಾರೆ. ಅಲ್ಲದೆ, ಅಂಗನವಾಡಿ, ಶಾಲಾ ಮಕ್ಕಳಿಗೆ ಮೊಟ್ಟೆ, ಹಾಲು ಕೊಟ್ಟು ಪೌಷ್ಟಿಕಾಂಶ ಹೆಚ್ಚಿಸುತ್ತೇವೆ ಎನ್ನುವ ಸರ್ಕಾರ ಹೀಗೆ ದರ ಏರಿಕೆ ಮಾಡುವುದು ಸರಿಯಲ್ಲ. ಇತ್ತ ನಾವೇ ನಮ್ಮ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ, ಹಾಲು ತಂದು ತಿನ್ನಿಸುತ್ತೇವೆ ಎಂದರೆ ಹೆಜ್ಜೆಹೆಜ್ಜೆಗೂ ಎಲ್ಲದರ ದರ ಹೆಚ್ಚಳ ಮಾಡುತ್ತಲೇ ಇದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

ಚನ್ನರಾಯಪಟ್ಟಣ ತಾಲೂಕು ನಾಡನಹಳ್ಳಿ ಗ್ರಾಮದ ರೈತ ನಂಜೇಗೌಡ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಪ್ರಸ್ತುತ ₹4 ಸಹಾಯಧನ ಮತ್ತು ಲೀಟರ್‌ ಹಾಲಿನ ದರ ₹30 ಸೇರಿ ಒಟ್ಟು ₹34 ಸಿಗುತ್ತಿದೆ. ಈಗ ಏರಿಕೆಯಾಗಿರುವ ₹2 ದರವನ್ನು ರೈತರಿಗೆ ನೀಡುವುದಾರೆ ಒಟ್ಟು ಲೀಟರ್‌ ಹಾಲಿಗೆ ₹36 ಸಿಕ್ಕಂತಾಗುತ್ತದೆ. ಆದರೆ ಹಸುಗಳಿಗೆ ಹಾಕುವ ಫೀಡ್ಸ್‌, ಹಿಂಡಿ, ಬೂಸಾಗಳ ದರವನ್ನು ಹೆಚ್ಚಳ ಮಾಡದಿದ್ದಲ್ಲಿ ಮಾತ್ರ ಈ ದರ ಒಂದು ಹಂತಕ್ಕೆ ಹೈನುಗಾರಿಕೆ ಸಮಸ್ಯೆ ಸುಧಾರಿಸಲು ಸಹಕಾರಿಯಾಗುತ್ತದೆ. ಇಲ್ಲವಾದಲ್ಲಿ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಂತೆ" ಎಂದರು.

ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಮಧುಚಂದನ್‌ ಎಸ್‌ ಸಿ, ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, "ರೈತರು ಹಾಕುವ ಪ್ರತಿ ಲೀಟರ್‌ ಹಾಲಿಗೆ ₹40 ದರ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಕೆಎಂಎಫ್‌ನ ಬಹುತೇಕ ಒಕ್ಕೂಟಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ನಿಯಂತ್ರಣಕ್ಕೆ ತಂದು ಅನಗತ್ಯ ಹುದ್ದೆಗಳು, ಅನಗತ್ಯ ಯಂತ್ರಗಳನ್ನು ತೆಗೆದು ಅವುಗಳಿಗೆ ವ್ಯಯಿಸುವ ಹಣ ಉಳಿಸುವುದು ಮತ್ತು ಒಕ್ಕೂಟದ ಒಟ್ಟಾರೆ ಆದಾಯದಲ್ಲಿ ರೈತರಿಗೆ ನೀಡಿ ಎಂಬುದು ನಮ್ಮ ಆಗ್ರಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಾಗ್ಯೂ, "ಒಕ್ಕೂಟದ ಒಟ್ಟಾರೆ ವಹಿವಾಟಿನ ಪ್ರತಿ ₹1 ಆದಾಯದಲ್ಲಿ ₹79 ಪೈಸೆಯನ್ನು ಹಾಗೂ ಈಗ ಪ್ರತಿ ಲೀಟರ್‌ಗೆ ಹೆಚ್ಚಳ ಮಾಡಿರುವ ₹2 ಹಾಲಿನ ದರವನ್ನು ರೈತರಿಗೆ ಕೊಡುವ ಬಗ್ಗೆ ಹಾಲು ಉತ್ಪಾದಕರ ಹೋರಾಟ ಸಮಿತಿ ಸಭೆ ಸೇರಿ ತೀರ್ಮಾನಕ್ಕೆ ಬರುವುದಾಗಿ" ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180