ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಠಾಪನೆ ಸಂವಿಧಾನ ವಿರೋಧಿ: ದಲಿತ ಮುಖಂಡರ ಅರೋಪ

  • ಯಾವ ನಿಯಮಗಳ ಅಡಿ ಜಿಲ್ಲಾಡಳಿತ ಅವಕಾಶ ನೀಡಿದೆ ಎಂದು ಸ್ಪಷ್ಟಪಡಿಸಲಿ
  • ಕಲಾಭವನದಲ್ಲಿ ಹೋಮ ಹವನಗಳಿಗೆ ಅವಕಾಶ ನೀಡಿದರೆ ಪ್ರತಿಭಟನೆಯ ಎಚ್ಚರಿಕೆ

ಸರ್ಕಾರದ ಕಟ್ಟಡವಾದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹೋಮ ಹವನ ಮತ್ತಿತರೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದನ್ನು ಹಾಸನ ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.

ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಸನಾಂಬ ಕಲಾಕ್ಷೇತ್ರದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯು ಆಗಸ್ಟ್ 31 ರಂದು ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆ ಮಾಡಿ ಸೆಪ್ಟೆಂಬರ್ 5 ರವರೆಗೆ ಹೋಮ-ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗು ಶೋಭಾಯಾತ್ರೆ ನಡೆಸುತ್ತಿದ್ದಾರೆ.

“ಇದು ಸಂವಿಧಾನದ ಮತಧರ್ಮ ನಿರಪೇಕ್ಷ ತತ್ವದ ಉಲ್ಲಂಘನೆಯಾಗಿದೆ. ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳು ಯಾವುದೇ ಮತಧರ್ಮದ ಭಾಗವಾಗಿರಬಾರದು ಎನ್ನುವ ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ. ಸರ್ಕಾರದ ಕಟ್ಟಡದಲ್ಲಿ ನಿರ್ದಿಷ್ಟವಾಗಿ ಒಂದು ಧರ್ಮದ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಡಳಿತದ ಕ್ರಮವು ತೀವ್ರ ಖಂಡನೀಯ” ಎಂದು ಮುಖಂಡರು ಕಿಡಿಕಾರಿದ್ದಾರೆ.

“ಸರ್ಕಾರ ಮತ್ತು ಜಿಲ್ಲಾಡಳಿತವೇ ನಿರ್ದಿಷ್ಟವಾದ ಧರ್ಮದ ಓಲೈಕೆಗೆ ನಿಂತರೆ ಸಮಾಜದಲ್ಲಿ ಜಾತ್ಯಾತೀತ ವಾತಾವರಣ ಹಾಳಾಗಿ ಧಾರ್ಮಿಕ ಅಶಾಂತಿ ಸೃಷ್ಟಿಯಾಗುತ್ತದೆ. ಜಿಲ್ಲಾಡಳಿತ ಸರ್ಕಾರದ ಯಾವ ನಿಯಮಗಳ ಅಡಿಯಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯವರಿಗೆ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ ಎನ್ನುವುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸರ್ಕಾರದ ಕಟ್ಟಡವಾದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆ ಹಾಗೂ ಹೋಮ ಹವನಗಳಿಗೆ ಅವಕಾಶ ನೀಡಿದರೆ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಠಾಪನೆ ಮತ್ತು ಹೋಮ ಹವನಗಳಿಗೆ ಅವಕಾಶ ನೀಡಬಾರದು” ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಿಂಗಾಲೇಶ್ವರ ಸ್ವಾಮೀಜಿ ಪ್ರಕರಣ | ತನಿಖಾಧಿಕಾರಿ ಸಲ್ಲಿಸಿರುವ ಅಂತಿಮ ವರದಿ ಕಾನೂನು ಬಾಹಿರ: ಹೈಕೋರ್ಟ್

ಈ ಕುರಿತು ನಡೆದ ಮುಖಂಡರ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಎಚ್ ಕೆ ಸಂದೇಶ್, ಮುಖಂಡರಾದ ರಾಜಶೇಖರ್, ಎಂ ಸೋಮಶೇಖರ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್ ಎನ್ ಮಲ್ಲಪ್ಪ, ದ.ಸಂ.ಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ, ಅಂಬುಗ ಮಲ್ಲೇಶ್, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಟಿ ಆರ್ ವಿಜಯಕುಮಾರ್, ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಎಚ್ ಆರ್ ನವೀನ್ಕುಮಾರ್, ಡಿವೈಎಫ಼್ಐ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ, ದಸಂಸ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕರು ನಾಗರಾಜ್ ಹೆತ್ತೂರು, ಆರ್‌ಪಿಐ ಜಿಲ್ಲಾಧ್ಯಕ್ಷ ಸತೀಶ್ ಇದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್