ಶೇ.10 ಕಮಿಷನ್ ಬಗ್ಗೆ ಮಾತನಾಡಿದ್ದ ಮೋದಿ ಶೇ.40 ಕುರಿತು ತುಟಿ ಬಿಚ್ಚದಿರುವುದು ದುರಂತ : ಡಿ ಕೆಂಪಣ್ಣ ಆಕ್ರೋಶ

40% Commission
  • ಶೇ.40 ಕಮಿಷನ್ ಕುರಿತು ಪ್ರಧಾನಿಗೆ ಪತ್ರ ಬರೆದರೂ ಉತ್ತರವಿಲ್ಲ
  • ₹ 1 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ₹10 ಲಕ್ಷ ಲಂಚ
  • ಶೇ.40 ಕಮಿಷನ್ ದಂಧೆ ನಿಂತರೆ ಉಚಿತ ಶಿಕ್ಷಣ ವ್ಯವಸ್ಥೆಯನ್ನೇ ಜಾರಿಗೆ ತರಬಹುದು: ಕೆ ಸಿ ರಘು ಅಭಿಮತ
  • ಶೇ.40 ಕಮಿಷನ್ ವಿರುದ್ಧ ಹೋರಾಟಕ್ಕೆ ಕೆಂಪಣ್ಣ ಕರೆ

2018ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರವನ್ನು ಶೇ.10 ಕಮಿಷನ್ ಸರ್ಕಾರ ಎಂದು ಜರಿದಿದ್ದರು. ಆದರೆ, ಈಗ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವ ತಮ್ಮದೇ ಪಕ್ಷವು ʼಶೇ.40 ಕಮಿಷನ್ ಸರ್ಕಾರʼ ಎನ್ನುವ ಗಂಭೀರ ಆರೋಪ ಹೊತ್ತಾಗಲೂ ತುಟಿ ಬಿಚ್ಚದಿರುವುದು ದುರಂತ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಟೆಕ್ನಾಲಾಜಿಸ್ಟ್ (ಐಎಟಿ) ಯಲ್ಲಿ ಭಾನುವಾರ ʼಜಾಗೃತ ಕರ್ನಾಟಕ ವೇದಿಕೆʼ ಆಯೋಜಿಸಿದ್ದ ʼಶೇ.40 ಕಮಿಷನ್-ಯಾರಿಗೂ ಆಘಾತ ತರದ ಭಾರೀ ಹಗರಣ- ಕರ್ನಾಟಕ್ಕೇನು ಕಾದಿದೆ?ʼ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶೇ.10ರಷ್ಟಿದ್ದ ಕಮಿಷನ್ ಶೇ.40ಕ್ಕೆ ಏರಿದೆ. ಈ ಬಗ್ಗೆ ದಾಖಲೆ ಸಹಿತ ಪ್ರಧಾನಿಗೆ ಪತ್ರ ಬರೆದರೂ ಈವರೆಗೆ ಉತ್ತರಿಸಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಲ್ಲದೇ ಶೇ.40 ಕಮಿಷನ್ ಕುರಿತು ಯಡಿಯೂರಪ್ಪ ಅವರಿಗೂ ಮೂರು ಬಾರಿ ಪತ್ರ ಬರೆದಿದ್ದೇವೆ. ಅವರಿಂದಲೂ ಉತ್ತರವಿಲ್ಲ. ಕೊನೆಗೆ ರಾಜ್ಯಪಾಲರನ್ನು ಭೇಟಿ ಮಾಡಿದೆವು. ಅವರೂ ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾದರೆ ರಾಜ್ಯದ ಸ್ಥಿತಿ ಏನು? ಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ಗುತ್ತಿಗೆದಾರರಿದ್ದಾರೆ. ₹1 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ₹40 ಲಕ್ಷ ಲಂಚ ಕೊಡಬೇಕಾದ ಸ್ಥಿತಿ ಬಿಜೆಪಿ ಸರ್ಕಾರದಲ್ಲಿದೆ. ಇದು ಅಪಾಯಕಾರಿ ಬೆಳವಣಿಗೆ” ಎಂದು ಕೆಂಪಣ್ಣ ಕಳವಳ ವ್ಯಕ್ತಪಡಿಸಿದರು.  

ಮುಂದುವರಿದು, “ಸರ್ಕಾರ ಶೇ.10 ಕಮಿಷನ್ ಪಡೆಯುತ್ತಿದ್ದಾಗಲೇ ರಾಜ್ಯ ಅಭಿವೃದ್ಧಿ ಕಂಡಿಲ್ಲ. ಇನ್ನು, ಶೇ.40 ಕಮಿಷನ್ ಎಂದಾದರೆ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ? ಈ ಬಗ್ಗೆ ಜನತೆ ಗಂಭೀರವಾಗಿ ಆಲೋಚಿಸಬೇಕು. 20 ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಏಪ್ರಿಲ್‌ನಲ್ಲಿ ಶೇ.40 ಕಮಿಷನ್ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಜನತೆ ಈ ಹೋರಾಟಕ್ಕೆ ಕೈ ಜೋಡಿಸಬೇಕು,” ಎಂದು ಡಿ ಕೆಂಪಣ್ಣ ವಿನಂತಿಸಿಕೊಂಡರು.

Image
40% commission

ಲೋಕಾಯುಕ್ತಕ್ಕೂ ಸಲಹೆ

ಭಾರತ ಸರಕಾರ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಕ್ರಮಗಳ ಸಲಹೆಗಾರರಾದ ನಿವೃತ್ತ ಐಎಎಸ್ ಅಧಿಕಾರಿ ಟಿ ಆರ್ ರಘುನಂದನ್ ಸಂವಾದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವ್ಯವಸ್ಥೆಯ ಹೂರಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ, “ವಿಕೇಂದ್ರಿಕೃತ ಸರ್ಕಾರಕ್ಕಿಂತ ಕೇಂದ್ರೀಕೃತ ಸರ್ಕಾರದಲ್ಲೇ ಭ್ರಷ್ಟಾಚಾರ ಅಧಿಕ” ಎಂದರು.

ಲೋಕಾಯುಕ್ತ ಸಂಸ್ಥೆ ಬಗ್ಗೆಯೂ ಪ್ರಸ್ತಾಪಿಸಿದ ಅವರು, “ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಲೋಕಾಯುಕ್ತಕ್ಕೆ ಮಹತ್ತರ ಜವಾಬ್ದಾರಿ ಇದೆ. ಕೇವಲ ಭ್ರಷ್ಟಾಚಾರ ವಿಚಾರದಲ್ಲಿ ದಾಳಿ ಮಾಡುವುದೇ ದೊಡ್ಡ ಕೆಲಸವಲ್ಲ. ಸಚಿವಾಲಯದ ಪ್ರತಿ ಇಲಾಖೆ ಒಳಗಿನ ಕಮಿಷನ್ ದಂಧೆ ಕುರಿತು ಸರ್ವೆ ಮಾಡಿದರೆ ವ್ಯವಸ್ಥೆಯನ್ನು ಸುಧಾರಿಸಲು ದಾರಿ ಸಿಗುತ್ತದೆ,” ಎಂದು ಸಲಹೆ ನೀಡಿದರು.

“ರಾಮರಾಜ್ಯ ಎಂಬುದು ಕಪೋಲಕಲ್ಪಿತ.  ಭ್ರಷ್ಟ ವ್ಯವಸ್ಥೆ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ, ಸ್ವರೂಪಗಳು ಮಾತ್ರ ಕಾಲ ಕಾಲಕ್ಕೆ ಭಿನ್ನವಾಗಿವೆ. ಭ್ರಷ್ಟಾಚಾರ ನಿರ್ಮೂಲನೆಯ ಸಾಧಕ ಕಥೆಗಳು ನಮ್ಮಲ್ಲಿ ಹೇರಳವಾಗಿವೆ. ನೈತಿಕ ಶಿಕ್ಷಣದ ಮೂಲಕ ಅಂಥ ಕಥೆಗಳನ್ನು ಹೃದಯದಲ್ಲಿ ಬಿತ್ತುವುದು ಈ ಕಾಲದ ಅಗತ್ಯ,” ಎಂದು ಪ್ರತಿಪಾದಿಸಿದರು.

ವಾಜಪೇಯಿ ಪರಿಚಯಿಸಿದ ʼಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆʼ (ಪಿಎಂಜಿಎಸ್‌ವೈ) ಯಲ್ಲಿ ನಾನು ಕಂಡಂತೆ ಭ್ರಷ್ಟಾಚಾರ ನಡದೇ ಇಲ್ಲ. ಕಾರಣ ಆ ಯೋಜನೆಯ ಸ್ವರೂಪ ಭಿನ್ನವಾಗಿತ್ತು. ಆ ರೀತಿಯಲ್ಲೇ ರಾಜ್ಯದ ಯೋಜನೆಗಳನ್ನು ರೂಪಿಸಬೇಕು,” ಎಂದು ಟಿ ಆರ್ ರಘುನಂದನ್ ಒತ್ತಾಯಿಸಿದರು.

Image
40% commission

₹7 ಲಕ್ಷ ಕೋಟಿ ಭ್ರಷ್ಟ ವ್ಯವಸ್ಥೆಯ ಪಾಲು!

ಕಾರ್ಯನೀತಿ ವಿಶ್ಲೇಷಕ ಹಾಗೂ ಆಹಾರ ತಜ್ಞ ಕೆ ಸಿ ರಘು ಮಾತನಾಡಿ, “ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಲಸಿಕೆಯಲ್ಲೂ ಭ್ರಷ್ಟಾಚಾರ ಕಂಡುಬಂದಿದೆ. ಇದು ಹೀಗೆ ಮುಂದುವರಿದರೆ ಪ್ರತಿ ವರ್ಷ ₹1.40 ಲಕ್ಷ ಕೋಟಿ, ಅಂದರೆ ಪ್ರತಿ ವರ್ಷದ ಬಜೆಟ್ಟಿನ ಅರ್ಧದಷ್ಟು ಹಣ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಹರಿದು ಹೋಗುತ್ತಿದೆ. ಸರ್ಕಾರದ ಐದು ವರ್ಷದ ಅವಧಿಯಲ್ಲಿ ಹೀಗೆ ಕಮಿಷನ್ ದಂಧೆ ನಡೆದರೆ ₹7 ಲಕ್ಷ ಕೋಟಿ ಭ್ರಷ್ಟ ವ್ಯವಸ್ಥೆಯ ಪಾಲಾಗುತ್ತದೆ. ಈ ವ್ಯವಸ್ಥೆ ಸರಿಯಾದರೆ ರಾಜ್ಯದಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯನ್ನೇ ಜಾರಿಗೆ ತರಬಹುದು,” ಎಂದು ವಿವರಿಸಿದರು.

"ಪ್ರತಿ ವರ್ಷ ದೇಶದಲ್ಲಿ 1.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ, ಸುಮಾರು 8 ಲಕ್ಷ ಜನ ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ. ಇದಕ್ಕೆ ಕಳಪೆ ರಸ್ತೆ ಕಾಮಗಾರಿ ಕೂಡ ಕಾರಣ. ಲಂಚದ ಪರಿಣಾಮ ಹೆಚ್ಚಾದಷ್ಟು ಪರಿಸರ, ಕೃಷಿ ಭೂಮಿ ಹಾಗೂ ಸಾಮಾನ್ಯ ಜನರ ಜೀವದ ಮೇಲೆ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಾ ಹೋಗುತ್ತದೆ. ಶೇ.40 ಕಮಿಷನ್ ಬಗ್ಗೆ ಇನ್ನಾದರೂ ಗಂಭೀರವಾಗಿ ನಾವು ಯೋಚಿಸಬೇಕು” ಎಂದು ಎಚ್ಚರಿಸಿದರು.

ಮಾಧ್ಯಮಗಳ ಮೌನ ಭ್ರಷ್ಟಾಚಾರಕ್ಕೆ ಸಮ

ಜಾಗೃತ ಕರ್ನಾಟಕ ವೇದಿಕೆಯ ಮುಂದಿನ ರೂಪುರೇಷೆ ಕುರಿತು ಮಾಹಿತಿ ಹಂಚಿಕೊಂಡ ಡಾ. ಎಚ್ ವಿ ವಾಸು, “ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇ.40 ಕಮಿಷನ್ ಆರೋಪವನ್ನು ವಿರೋಧ ಪಕ್ಷ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇನ್ನು ಮಾಧ್ಯಮಗಳು ಈ ವಿಚಾರದಲ್ಲಿ ಮಲಗಿಕೊಂಡಿವೆ. ಮಾಧ್ಯಮಗಳ ಈ ಮೌನವೂ ಭ್ರಷ್ಟಾಚಾರಕ್ಕೆ ಸಮವಾಗಿದ್ದು, ಈಗ ಸಾಮಾನ್ಯ ಜನರೇ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದ ಚುನಾವಣೆ ಹತ್ತಿರವಾಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ಚರ್ಚೆಗಳು ನಡೆಯಬೇಕು,” ಎಂದು ಆಗ್ರಹಿಸಿದರು.

ಮುಂದುವರಿದು, “ಕೆಂಪಣ್ಣ ಅವರು ಕೈಗೊಂಡಿರುವ ಭ್ರಷ್ಟಾಚಾರ ಹೋರಾಟಕ್ಕೆ ನಾವು ಕೈ ಜೋಡಿಸಬೇಕಿದೆ. ಪ್ರತಿ ಜಿಲ್ಲೆಯಲ್ಲೂ ಶೇ.40 ಕಮಿಷನ್ ಬಗ್ಗೆ ಜಾಗೃತಿ ಅಭಿಯಾನ ನಡೆಯುತ್ತಿದೆ. ಇನ್ನು ಮುಂದೆ ಜನಸಾಮಾನ್ಯರೇ ಮುಂದೆ ಬಂದು, ರಾಜ್ಯದಲ್ಲಿ ಪತ್ರ ಚಳವಳಿ ನಡೆಸಬೇಕು. ತಮ್ಮ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ನಾವು ಪರಿಹಾರ ಕಂಡುಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು. 

ಪ್ರಯೋಜನವಿಲ್ಲದ ಎತ್ತಿನ ಹೊಳೆ ಯೋಜನೆ

ಅಧ್ಯಕ್ಷತೆ ವಹಿಸಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ, “ಬಿಜೆಪಿ ಸರ್ಕಾರದ ಶೇ.40 ಕಮಿಷನ್‌ನಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನಸಾಮಾನ್ಯರ ಮೇಲೆ ಇದು ತೀವ್ರ ಪರಿಣಾಮ ಬೀರಲು ಆರಂಭಿಸಿದೆ. ʼಎತ್ತಿನ ಹೊಳೆʼ ಯೋಜನೆಗೆ ₹25 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದರೆ, ಹನಿ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಕಾರಣ ಆ ನೀರಿನಲ್ಲಿ ಯೂರೇನಿಯಂ ಅಂಶ ಇದೆ ಎಂದು ಸರ್ವೇಗಳು ಹೇಳುತ್ತಿವೆ,” ಎಂದರು. 

ಜಾಗೃತ ಕರ್ನಾಟಕ ವೇದಿಕೆ ಸದಸ್ಯರಾದ ಬಿ ಸಿ ಬಸವರಾಜು ಪ್ರಸ್ತಾಪಿಸಿದರು. ರಾಜಶೇಖರ್ ಅಕ್ಕಿ ಸಂವಾದ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಎ ನಾರಾಯಣ, ಕುಸುಮಾ ಶಾಣಬೋಗ, ಮುತ್ತಪ್ಪ ಕೋಮಲ್, ಶಿವರಾಯಪ್ಪ ಜೋಗಿನ್ ಸೇರಿದಂತೆ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್