
- ನಾಗ್ಪುರ ಮತ್ತು ಕೇಶವ ಕೃಪ, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತಿವೆ
- ಭಾರತದ ಇತಿಹಾಸವನ್ನು ಬ್ರಾಹ್ಮಣರ ನೇತೃತ್ವದಲ್ಲಿ ಬದಲಿಸಲು ಹೊರಟಿದ್ದಾರೆ
“ಇಂದು ಎಲ್ಲ ವಿಶ್ವವಿದ್ಯಾನಿಲಯಗಳು ಆರ್ಎಸ್ಎಸ್ ಕೇಂದ್ರ ಸ್ಥಾನಗಳಾಗಿವೆ. ನೈಜ ಇತಿಹಾಸಕಾರರು ಕೂಡ ಧೈರ್ಯವಾಗಿ ಮಾತನಾಡುತ್ತಿಲ್ಲ. ಈ ರೀತಿ ಗುಲಾಮರಾಗಿರುವುದು ನಿಜಕ್ಕೂ ಬೇಸರದ ಸಂಗತಿ” ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಕೆಲವು ಇತಿಹಾಸಕಾರರು ಸತ್ಯ ಹೇಳುತ್ತಿದ್ದಾರೆ. ಆದರೆ, ಸುಳ್ಳನ್ನೇ ಸತ್ಯ ಎಂದು ಹೇಳುವವರು, ಸತ್ಯವನ್ನು ಸುಳ್ಳು ಮಾಡುವವರು ನಮ್ಮ ನಡುವೆ ಇದ್ದಾರೆ. ಅದಕ್ಕೆ ಮಾಧ್ಯಮಗಳೂ ಹೊರತಾಗಿಲ್ಲ. ಈ ದೇಶದ ಅನೇಕ ಸುದ್ದಿ ಮಾಧ್ಯಮಗಳು ತಮ್ಮ ನೈತಿಕತೆ ಕಳೆದುಕೊಂಡು ಕೋಮುವಾದಿಗಳು, ಬ್ರಾಹ್ಮಣವಾದಿಗಳ ಬಾಲಂಗೋಚಿಗಳಾಗಿ ಕೆಲಸ ಮಾಡುತ್ತಿವೆ” ಎಂದು ಕಿಡಿಕಾರಿದರು.
“ದೇಶದ ಚರಿತ್ರೆಯನ್ನು ವಿರೂಪಗೊಳಿಸಲಾಗಿದೆ. ಆದ್ದರಿಂದ ನಾವು ಮತ್ತೆ ಹೊಸ ಇತಿಹಾಸವನ್ನು ಬರೆಯಬೇಕಾಗಿದೆ ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಸುಮಾರು 15 ಸಾವಿರ ವರ್ಷಗಳ ಇತಿಹಾಸವನ್ನು ಮತ್ತೆ ರೂಪಿಸಬೇಕು ಎಂದು ಅವರು ಒಂದು ಸಮಿತಿ ಮಾಡಿದ್ದಾರೆ. ಆ ಸಮಿತಿಯಲ್ಲಿ ಶೇಕಡಾ 99ರಷ್ಟು ಬ್ರಾಹ್ಮಣರೇ ಇದ್ದಾರೆ. ಆ ಸಮಿತಿ ತರುವಂತಹ ಇತಿಹಾಸ ಹೇಗಿರಬಹುದು ಎಂದು ಊಹಿಸಬಹುದಾಗಿದೆ” ಎಂದರು.
“ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ದೇಶ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ, ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಕೇಂದ್ರ ಸರ್ಕಾರವನ್ನು ನಿಯಂತ್ರಣ ಮಾಡಲು ನಾಗ್ಪುರದಲ್ಲಿ ಒಂದು ಕ್ಯಾಬಿನೆಟ್ ಇದೆ, ಅದೇ ರೀತಿ ರಾಜ್ಯ ಸರ್ಕಾರವನ್ನು ನಿಯಂತ್ರಣ ಮಾಡಲು ‘ಕೇಶವ ಕೃಪ’ ಎಂಬ ಕ್ಯಾಬಿನೆಟ್ ಇದೆ. ಅವು ಸರ್ಕಾರವನ್ನು ನಿಯಂತ್ರಣ ಮಾಡುತ್ತಿವೆ. ಹಾಗಾದರೆ ವಿಧಾನಸೌಧದಲ್ಲಿ ಏನು ಕೆಲಸ ನಡೆಯುತ್ತಿವೆ ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ನ ನಿಯಂತ್ರಣದಲ್ಲಿ ಇಂದು ರಾಜ್ಯ ಮತ್ತು ಕೇಂದ್ರದಲ್ಲಿ ಎಲ್ಲ ರೀತಿಯ ಅಭಿಪ್ರಾಯಗಳು ರೂಪಿತ ಆಗುತ್ತಿವೆ. ಆರ್ಎಸ್ಎಸ್ ಏನು ಹೇಳುತ್ತದೆಯೋ, ಅದನ್ನು ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲರೂ ತಪ್ಪದೇ ಪಾಲಿಸುತ್ತಿದ್ದಾರೆ. ಹಾಗಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿದೆ ಎಂಬುದನ್ನು ನಾವು ಚಿಂತನೆ ಮಾಡಬೇಕಿದೆ” ಎಂದು ಮಾವಳ್ಳಿ ಶಂಕರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ದೇಶದ ಇತಿಹಾಸ ತಿದ್ದಿ ಬರೆಯುತ್ತೇವೆ; ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ
“ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇಲ್ಲದೇ ಹೋದರೆ ನಾವು ಒಪ್ಪಿಕೊಂಡ ಸಂವಿಧಾನ ಅಥವಾ ಪ್ರಜಾಪ್ರಭುತ್ವವನ್ನು ನಮ್ಮ ಮುಂದಿನ ಸಮುದಾಯಗಳು ಬುಡಮೇಲು ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದನ್ನು ನಾವು ಗಂಭೀರವಾಗಿ ಚಿಂತನೆ ಮಾಡಬೇಕು. ಸಂವಿಧಾನ ಜಾರಿಯಾದ ಮೇಲೆಯೂ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಧೂಳೀಪಟ ಮಾಡುವ ಕೆಲಸವನ್ನು ಸಂಘ ಪರಿವಾರದವರು ಮಾಡುತ್ತಾ ಬರುತ್ತಿದ್ದಾರೆ” ಎಂದು ಆರೋಪಿಸಿದರು.