ಕಲಬುರಗಿ | ಪ್ರಜಾಸತ್ತತೆಗೆ ದ್ರೋಹ ಬಗೆದ ಸಿಎಂ ಬೊಮ್ಮಾಯಿ: ಕೆ ನೀಲಾ

  • "ಮುಖ್ಯಮಂತ್ರಿ ಬದ್ಧರಾಗಿರಬೇಕಾದ್ದು ಸಂವಿಧಾನಕ್ಕೆ ಮಾತ್ರ"
  • "ಜಾಹೀರಾತಿನಲ್ಲಿ ನೆಹರು ಚಿತ್ರ ಕೈಬಿಟ್ಟಿರುವುದು ಅಕ್ಷಮ್ಯ ಅಪರಾಧ"

ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದ ಮತ್ತು ಭಾರತದ ಸಂವಿಧಾನವನ್ನು ಅಪ್ಪಿಕೊಳ್ಳದ ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ತಲೆ ಬಾಗಿದ್ದೇನೆಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಜಾಸತ್ತತೆಗೆ ದ್ರೋಹ ಬಗೆದಿದ್ದಾರೆ ಎಂದು ಭಾರತೀಯ ಕಮ್ಯೂನಿಷ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಅವರು ಬದ್ಧರಾಗಿರಬೇಕಾದದ್ದು ಭಾರತದ ಸಂವಿಧಾನಕ್ಕೆ. ಆದರೆ, ಈ ಜ್ಞಾನವಿಲ್ಲದ ಬೊಮ್ಮಾಯಿ ನಡೆ ತೀವ್ರ ಖಂಡನಾರ್ಹವಾಗಿದೆ" ಎಂದು ಕಿಡಿಕಾರಿದ್ದಾರೆ. 

"75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೊರಡಿಸಿದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿರುವುದು ತೀವ್ರ ಖಂಡನೀಯ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?; ಚಾಮರಾಜನಗರ | ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ: ನಿರಂತರ ಧರಣಿ ನಡೆಸುತ್ತಿರುವ ರೈತರು

"ಆರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ಪತ್ರ ಬರೆದಿದ್ದ ವಿ.ಡಿ ಸಾವರ್ಕರ್ ಹೆಸರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯ ಮೊದಲ ಸಾಲಿನಲ್ಲಿ ಸೇರಿಸಿ ನೆಹರು, ಟಿಪ್ಪು ಸುಲ್ತಾನ್, ಸುಭಾಷ್ ಚಂದ್ರ ಬೋಸ್‌, ಮಹಿಳಾ ರೆಜಿಮೆಂಟ್‌ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ಕಮ್ಯುನಿಸ್ಟ್ ಚಳುವಳಿ ಹಿನ್ನಲೆಯ ಸ್ವಾತಂತ್ರ್ಯ ಹೋರಾಟಗಾರರನ್ನೂ ಕೈಬಿಟ್ಟಿದ್ದು, ಬಾಬಾ ಸಾಹೇಬರನ್ನು ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯ ಅಪರಾಧ" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

"ಸತ್ಯವನ್ನು ಮುಚ್ಚಿಟ್ಟು, ಸುಳ್ಳನ್ನು ಮುನ್ನಲೆಗೆ ತರುವ ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿ ಇತಿಹಾಸ ತಿರುಚುವ ಕೆಲಸವನ್ನು ಮಾಡುತ್ತಿದೆ. ಬಿಜೆಪಿಯ ಈ ನಡೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಘನತೆಗೆ ಕುಂದುಂಟು ಮಾಡುತ್ತಿವೆ. ಜನತೆಯು ಬಹಳ ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದ ಮಕ್ಕಳಿಗೆ ಸುಳ್ಳು ಚರಿತ್ರೆಯನ್ನೇ ಕೊಡುವ ಅಪಾಯವಿದ್ದು ಇದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ" ಎಂದರು.

ಮಾಸ್ ಮೀಡಿಯಾ ಯಾದಗಿರಿ ಜಿಲ್ಲಾ ಸಂಯೋಜಕಿ ಗೀತಾ ಹೊಸಮನಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್