ಕಲಬುರಗಿ | ತೊಗರಿ ಬೆಳೆಗಾರರ ಸಾವಿಗಿಲ್ಲ ಕೊನೆ; ನೆಟೆರೋಗ, ಸಾಲಬಾಧೆಗೆ ಮತ್ತೊಂದು ಜೀವ ಬಲಿ

Suicide
  • ಏಳು ತಿಂಗಳಲ್ಲಿ ತೊಗರಿ ಬೆಳೆ ನಷ್ಟಕ್ಕೆ ಒಟ್ಟು 61 ರೈತರ ಆತ್ಮಹತ್ಯೆ
  • ತೊಗರಿ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವರೇ ಸಿಎಂ ಬೊಮ್ಮಾಯಿ?

ತೊಗರಿ ಬೆಳೆಯಿಂದ ನಷ್ಟಕ್ಕೊಳಗಾಗಿದ್ದರಿಂದ ವಿಷ ಸೇವಿಸಿದ್ದ ಆಳಂದ ತಾಲೂಕಿನ ಸಾಕಿನ್ ಮುನ್ನಳ್ಳಿ ಎಂಬ ಗ್ರಾಮದ ರೈತ ಶ್ರೀಪತಿ ತಂದೆ ಗುಂಡಪ್ಪ ಮುದ್ದಡಗಿ (35) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ.

ರೈತ ಶ್ರೀಪತಿ ತಂದೆ ಗುಂಡಪ್ಪ ಮುದ್ದಡಗಿ ಸುಮಾರು ಎಂಟು ಎಕರೆಯಲ್ಲಿ ಬೆಳದಿದ್ದ ತೊಗರಿ ಸಂಪೂರ್ಣವಾಗಿ ನೆಟೆ ರೋಗಕ್ಕೆ ತುತ್ತಾಗಿದ್ದರಿಂದ ರೈತ ಕಂಗಾಲಾಗಿದ್ದರು. ಒಣಗಿದ ತೊಗರಿ ತೆಗೆದು ಮತ್ತೆ ಬೆಲೆ ಮಾಡಲು ಆಳಂದ ತಾಲೂಕಿನ ಎಸ್‌ಬಿಐ ಬ್ಯಾಂಕಿನಲ್ಲಿದ್ದ ಸಾಲವನ್ನು ತೀರಿಸಿ ಮತ್ತೆ ಬೆಳೆ ಸಾಲಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ, ಬ್ಯಾಂಕಿನಿಂದ ಬೆಳೆಸಾಲ ಸಿಗದಿದ್ದರಿಂದ ಮನನೊಂದು ಮೂರು ದಿನಗಳ ಹಿಂದೆ ಜಮೀನಿನಲ್ಲಿಯೇ ವಿಷ ಸೇವಿಸಿದ್ದಾರೆ. ಅವರನ್ನು ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಯದೇವ ಆಸ್ಪತೆಗೆ ರವಾನಿಸಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ರೈತ ಅಸು ನೀಗಿದ್ದಾರೆ.

ಈ ಕುರಿತು ಗ್ರಾಮಸ್ಥ ಹಾಗೂ ರೈತ ಮುಖಂಡ ಪ್ರಕಾಶ ಜಾನೆ ಅವರು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿ, "ರೈತ ಶ್ರೀಪತಿ ತಂದೆ ಗುಂಡಪ್ಪ ಮುದ್ದಡಗಿ ಅವರು ಸ್ವಂತದ್ದು ಎರಡು ಎಕರೆ ಹಾಗೂ ಗುತ್ತಿಗೆಗೆ ಆರು ಎಕರೆ ಭೂಮಿಯಲ್ಲಿ ಕೃಷಿ ಮಾಡಿದ್ದರು. ಸುಮಾರು ಆರೇಳು ಲಕ್ಷದವರೆಗೂ ಬ್ಯಾಂಕ್‌ ಸಾಲವಿತ್ತು. ನೆಟೆ ರೋಗದಿಂದ ತೊಗರಿ ಕೈಕೊಟ್ಟ ಹಿನ್ನಲೆಯಲ್ಲಿ ಮತ್ತೆ ಸಾಲ ಪಡೆದು ಉಳುಮೆ ಮಾಡುವ ಸಲುವಾಗಿ ಬಡ್ಡಿ ಸಾಲ ಮಾಡಿ ಎಸ್‌ಬಿಐನಲ್ಲಿದ್ದ ಸಾಲ ತೀರಿಸಿದ್ದರು. ಮೂಲ ಮುನ್ನಳ್ಳಿ ಆದರೆ ಅವರದ್ದು ಜಮೀನು ಹೊಳ್ಳಿ ಗ್ರಾಮದ ಬಳಿ ಇತ್ತು. ಹಾಗಾಗಿ ಎರಡೂ ಕಡೆಯೂ ಸಹಕಾರಿ ಸಂಘಗಳು, ಎಸ್‌ಬಿಐ ಬ್ಯಾಂಕುಗಳು ಸಾಲ ಕೊಡಲು ನಿರಾಕರಿಸಿದ್ದವು" ಎಂದು ಹೇಳಿದರು.

"ಘಟನೆ ಕುರಿತು ನರೋಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತರಿಗೆ ಪತ್ನಿ, ವೃದ್ಧ ಪೋಷಕರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ ಯಾವುದೇ ಅಧಿಕಾರಿ ಬಂದು ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ. ಮೃತರ ಅಂತ್ಯಸಂಸ್ಕಾರದ ಕಾರ್ಯಗಳನ್ನು ನಡೆಸಲಾಗುತ್ತಿದೆ. ಆದರೆ, ಜಿಲ್ಲೆಯೊಳಗೆ ತೊಗರಿ ಬೆಳೆದ ಎಲ್ಲ ರೈತರ ಪರಿಸ್ಥಿತಿ ಇದೇ ರೀತಿಯಾಗಿದ್ದು, ಯಾವಾಗ ಯಾವ ರೈತ ಸಾಯುತ್ತಾನೋ ಎಂಬ ಆತಂಕದಲ್ಲಿಯೇ ಇದ್ದೇವೆ. ಸರ್ಕಾರದಿಂದ ಯಾವ ಬೆಳೆ ವಿಮೆಯೂ ಸಿಕ್ಕಿಲ್ಲ, ಪರಿಹಾರವೂ, ಮರು ಬೆಳೆ ತೆಗೆಯಲು ಸಾಲಸೌಲಭ್ಯವೂ ಇಲ್ಲದ್ದರಿಂದ ಮನನೊಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು" ಎಂದು ಅವರು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಭಾಗಗಳಲ್ಲಿ ಬಹುತೇಕ ತೊಗರಿ ನೆಟೆರೋಗಕ್ಕೆ ಹಾನಿಯಾಗಿದೆ. ಅಲ್ಲದೆ, ಅತಿವೃಷ್ಟಿಯಿಂದ ಬೆಳೆ ನಷ್ಟ, ನೆಟೆ ರೋಗ, ಉತ್ಪನ್ನಗಳ ದರ ಕುಸಿತ, ಸಾಲಭಾದೆ, ಸಾಲಗಾರರ ಕಿರುಕುಳ, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಮನನೊಂದು ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಕಲಬುರಗಿ ಜಿಲ್ಲಾ ಅಪರಾಧ ದಾಖಲೆ ಬ್ಯೂರೊ (ಡಿಸಿಆರ್‌ಬಿ) ಪ್ರಕಾರ, 2022ರ ಜೂನ್‌ನಿಂದ 2023ರ ಜನವರಿ 15ರವರೆಗೆ ಬೆಳೆ ನಷ್ಟ ಕಾರಣದಿಂದಲೇ ಜಿಲ್ಲೆಯಲ್ಲಿ ಒಟ್ಟು 61 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊನೆಗೂ ತೊಗರಿ ಬೆಳೆಗಾರರ ಸಂಕಷ್ಟ ಬಗೆಹರಿಸಲು ಮುಂದಾದ ಸರ್ಕಾರ: ಸಂಜೆ ಪರಿಹಾರದ ಮೊತ್ತ ಘೋಷಿಸಲಿರುವ ಸಿಎಂ

"ನೆಟೆ ರೋಗಕ್ಕೆ ತುತ್ತಾಗಿರುವ ತೊಗರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ತೊಗರಿ ಮಾತ್ರವಲ್ಲದೆ, ವಿವಿಧ ಬೆಳೆಗಳೂ ಅತಿವೃಷ್ಟಿಯಿಂದ ಹಾನಿಯಾಗಿವೆ. ಹಾನಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹಲವು ರೈತ ಸಂಘಟನೆಗಳು ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಂದ್‌ ಕೂಡ ಮಾಡಲಾಗಿತ್ತು. ಆದರೆ ಸರ್ಕಾರ ಇದುವರೆಗೂ ರೈತರಿಗೆ ಸ್ಪಂದಿಸಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೆಲ್ಲ ಬೆಳೆವಣಿಗೆಗಳ ಮಧ್ಯೆ ಮಂಗಳವಾರ ಕಲಬುರಗಿ ಜಿಲ್ಲೆಗೆ ತೆರಳಿರುವ ಸಿಎಂ ಬೊಮ್ಮಾಯಿ ಅವರು, ಸಂಜೆಯೊಳಗೆ ತೊಗರಿ ಬೆಳೆಗಾರರಿಗೆ ಬೆಳೆಹಾನಿ ಪರಿಹಾರ ಮೊತ್ತ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ತೊಗರಿ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವಂಥ ಪರಿಹಾರ ಘೋಷಿಸುವರೇ ಎಂಬ ಅನುಮಾನ ರೈತರಲ್ಲಿ ಮೂಡಿದೆ.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app