ಕಲಬುರಗಿ | ಮರು ಪರಿಷ್ಕೃತ ಪಠ್ಯ ಕೈಬಿಡದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ: ದಲಿತ ಸಂಘಟನೆಗಳ ಎಚ್ಚರಿಕೆ

  • "ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಬಿಜೆಪಿ ಸರ್ಕಾರ ಯತ್ನ"
  • "ಆರ್‌ಎಸ್‌ಎಸ್‌ ಕೈಗೊಂಬೆಯಂತೆ ಸರ್ಕಾರ ಕೆಲಸ ಮಾಡುತ್ತಿದೆ"

ಶಿಕ್ಷಣ ತಜ್ಞನಲ್ಲದ ರೋಹಿತ್ ಚಕ್ರತೀರ್ಥ ನೇತೃತ್ವದ ಮರು ಪರಿಷ್ಕರಣಾ ಸಮಿತಿ ಸಿದ್ದಪಡಿಸಿದ ಪಠ್ಯಪುಸ್ತಕಗಳನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ತಹಸೀಲ್ದಾರ್ ಕಾರ್ಯಾಲಯ ಎದುರು ಒಕ್ಕೂಟವು ಪ್ರತಿಭಟನಾ ಧರಣಿ ನಡೆಸಿದೆ. "ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವ ಸರ್ಕಾರ, ಆರ್‌ಎಸ್‌ಎಸ್‌ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ರಾಜ್ಯದ ಪ್ರಗತಿಪರ ವಿಚಾರಧಾರೆಯುಳ್ಳ 176 ಜನರನ್ನು ಒಳಗೊಂಡಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿದ್ದ ಪಠ್ಯವನ್ನು ಕಡೆಗಣಿಸುತ್ತಿದೆ. ಸರ್ಕಾರದ ಈ ನಡೆ ಅಪಾಯಕಾರಿ" ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. 

"ಒಂದು ದೇಶ ಹಾಳಾಗಲು ಯುದ್ಧವೇ ಮಾಡಬೇಕಾಗಿಲ್ಲ. ಆ ದೇಶದ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದರೆ ಸಾಕು, ದೇಶ ಸರ್ವನಾಶವಾಗುತ್ತದೆ. ಬಿಜೆಪಿ ಮತ್ತು ಸರ್ಕಾರಕ್ಕೆ ಶಿಕ್ಷಣದ ಮಹತ್ವ ಗೊತ್ತಿಲ್ಲ. ಕೋಮುವಾದದ ವಿಷ ಬೀಜ ಬಿತ್ತುವುದೇ ಅವರ ಬಹುದೊಡ್ಡ ಸಾಧನೆಯಾಗಿದೆ" ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ನಾಗೇಂದ್ರ ಅಂಕನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ 7 ಜನ ಬ್ರಾಹ್ಮಣ ಸಮುದಾಯದವರೇ ಇದ್ದಾರೆ. ಇತರ ಸಮುದಾಯಗಳಿಗೆ ಸಮಿತಿಯಲ್ಲಿ ಅವಕಾಶ ನೀಡದೇ ಇರುವುದು ಅಸಾಂವಿಧಾನಿಕ ನಡೆಯಾಗಿದೆ. ಆರ್‌ಎಸ್‌ಎಸ್ ಅಜೆಂಡಾವನ್ನು ಪಠ್ಯದಲ್ಲಿ ತುಂಬಿ, ಮುಗ್ಧ ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ದೇಶದ ಬಹುತ್ವ ಪರಂಪರೆಯನ್ನು ಬುಡಮೇಲು ಮಾಡಲು ಹೊರಟಿದೆ" ಎಂದು ಶಿವಕುಮಾರ್ ಕಲಗೂರ್ತಿ ಕಿಡಿಕಾರಿದ್ದಾರೆ.

"ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಿಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಮನುವಾದ ಬಿತ್ತಲು ಪ್ರಯತ್ನಿಸುತ್ತಿದೆ. ಡಾ. ಬಿ.ಆರ್ ಅಂಬೇಡ್ಕರ್, ಬಸವಣ್ಣ, ಸಾವಿತ್ರಿಬಾಯಿ ಫುಲೆ, ಟಿಪ್ಪು ಸುಲ್ತಾನ್, ನಾರಾಯಣ ಗುರು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಚರಿತ್ರೆಯನ್ನು ತಿರುಚುವುದು, ಅವರಿಗೆ ಅಪಮಾನ ಮಾಡಿರುವುದು ಚಕ್ರತೀರ್ಥ ಸಮಿತಿಯ ಪಿತೂರಿಯಾಗಿದೆ" ಎಂದು ದಲಿತ ಸೇನೆಯ ಮುಖಂಡ ನಾಗರಾಜ್ ಬೇವಿನಕರ್ ಆರೋಪಿಸಿದ್ದಾರೆ.

"ಕೋಮುವಾದಿ ಪಠ್ಯಗಳನ್ನು ಮಕ್ಕಳಿಗೆ ಕಲಿಸಲು ಬಿಡಬಾರದು. ಹಳೇ ಪಠ್ಯವನ್ನೇ ಮಕ್ಕಳಿಗೆ ಒದಗಿಸಬೇಕು. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಜಾಗೊಳಿಸುವುದು ಮಾತ್ರವಲ್ಲದೆ, ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಮತ್ತೊಮ್ಮೆ ನಡೆಸಬೇಕು" ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

"ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಪಠ್ಯಪುಸ್ತಕದಲ್ಲಿ ರಾಷ್ಟ್ರನಾಯಕರ ಪಠ್ಯವಸ್ತು ಸಮಗ್ರವಾಗಿ ಸೇರಿಸಬೇಕು. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಟಿಪ್ಪು ಸುಲ್ತಾನ್, ನಾರಾಯಣ ಗುರು, ಕುವೆಂಪು ಸೇರಿದಂತೆ ಹಲವು ಮಹಾನ್‌ ವ್ಯಕ್ತಿಗಳ ಚರಿತ್ರೆಯನ್ನು ಮಕ್ಕಳಿಗೆ ಕಲಿಸಬೇಕು. ತಿರುಚಲಾಗಿರುವ ಪಠ್ಯಗಳನ್ನು ಸರಿಪಡಿಸಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು" ಎಂದು ಭಾರತೀಯ ದಲಿತ ಪ್ಯಾಂಥರ್ಸ್ ಮುಖಂಡ ಕಾಶಿನಾಥ ಶೆಳ್ಳಗಿ ಎಚ್ಚರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: 'ಮಕ್ಕಳ ಭವಿಷ್ಯ ಕಸಿದ ಸಚಿವ ನಾಗೇಶ್‌' ರಾಜೀನಾಮೆಗೆ ಆಗ್ರಹಿಸಿ ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದ ಬಹುತ್ವ ಕರ್ನಾಟಕ

ಪ್ರತಿಭಟನೆಯಲ್ಲಿ ದಲಿತ ಸೇನೆಯ ಖತಲಪ್ಪ ಅಂಕನ್, ದಸಂಸ ಮುಖಂಡ ಮಲ್ಲಿಕಾರ್ಜುನ ಗವಾರ್, ಅವಿನಾಶ್ ಕೊಡದೂರ, ರಮೇಶ್ ದೇವನಕರ್, ಮಾರುತಿ ಕಣಸೂರ್, ರಾಮಲ್ಲು ಇಟಗಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮಾಸ್‌ ಮೀಡಿಯಾ ಕಲಬುರಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180