ಕಲಬುರಗಿ | ಬೃಹತ್ ರಾಷ್ಟ್ರಧ್ವಜ ನಿರ್ಮಿಸಿ ದೇಶಪ್ರೇಮ ಮೆರೆದ ಕುಟುಂಬ

  • ಧ್ವಜಾರೋಹಣಕ್ಕೆ ಶರಣ ಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಚಾಲನೆ 
  • ರೈತನ ಭೂಮಿಯಲ್ಲಿ ಅನಾವರಣಗೊಂಡ ಪ್ರಪ್ರಥಮ ರಾಷ್ಟ್ರಧ್ವಜ 

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯೋತ್ಸವದ ಸಡಗರವನ್ನು ಸಂಭ್ರಮದಿಂದ ಆಚರಿಸಲು ಕೋಟ್ಯಾಂತರ ಜನರು ಸಿದ್ದಗೊಂಡಿದ್ದಾರೆ.

ಇದರ ಅಂಗವಾಗಿ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಹೃದಯ ಭಾಗದಲ್ಲಿರುವ ಕುದುರೆಮುಖ ಪರ್ವತ ಬಳಿ ಕಲ್ಯಾಣ ಕರ್ನಾಟಕ ಭಾಗದ ಅತಿ ದೊಡ್ಡ ಧ್ವಜಾರೋಹಣ ಅನಾವರಣ ಮಾಡಿದೆ.

ಕಲಬುರಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರು ನೆರೆದಿದ್ದ ನೂರಾರು ಜನರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 15ರ ಬಾಚನಾಳ ಸಮೀಪದಲ್ಲಿ ಕುದುರೆಮುಖ ಪರ್ವತವಿದೆ. ಈ ಪ್ರದೇಶದ 23 ಎಕರೆ ಪ್ರದೇಶದ ವಿಶಾಲ ಜಾಗದಲ್ಲಿ ಧ್ವಜಾರೋಹಣ ಮಾಡಲಾಗಿದೆ.

ಒಮ್ಮಣ ಪರಿವಾರದ ಕುಟುಂಬ ಸದಸ್ಯರೊಬ್ಬರು ಮಾತನಾಡಿ, “75ನೇ ಸ್ವಾತಂತ್ರ್ಯೋತ್ಸವಕ್ಕೆ ಯುವಜನರಿಗೆ ಸ್ಪೂರ್ತಿ ತುಂಬಲು ನಮ್ಮ ಕುಟುಂಬದಿಂದ ಏನಾದರೂ ಕೊಡುಗೆ ನೀಡಬೇಕೆಂದು ಚಿಂತಿಸುತ್ತಿದ್ದಾಗ, ಬೃಹತ್ ರಾಷ್ಟ್ರಧ್ವಜ ನಿರ್ಮಿಸುವ ಆಲೋಚನೆ ಮೂಡಿತ್ತು. ಇದನ್ನು ಸಾಕಾರಮಾಡಿದೆವು” ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಈ ಸುದ್ದಿ ಓದಿದ್ದೀರಾ? : ಮೈಸೂರು|ರಾಷ್ಟ್ರಧ್ವಜವನ್ನು ಫ್ಲೆಕ್ಸ್‌ನಂತೆ ಮುದ್ರಿಸಿ ಗೌರವ ಕಳೆಯುತ್ತಿದ್ದಾರೆ- ಜಸ್ಪಿಸ್‌ ನಾಗಮೋಹನ್ ದಾಸ್

“ಇಡೀ ದೇಶದ ಇತಿಹಾಸದಲ್ಲಿಯೇ, ಅನ್ನದಾತನ ಭೂಮಿಯಲ್ಲಿ ಪ್ರಪ್ರಥಮ ಬಾರಿಗೆ ಅನಾವರಣಗೊಂಡ ರಾಷ್ಟ್ರಧ್ವಜ ಇದಾಗಿದ್ದು, 75 ಅಡಿ ಉದ್ದ, 50 ಅಡಿ ಅಗಲ ಹಾಗೂ ಅಂದಾಜು 140 ಕೆಜಿ ತೂಕವಿದೆ” ಎಂದು ಅವರು ಹೇಳಿದರು. 

“ಧ್ವಜವನ್ನು ತಯಾರಿಸುವ ಸಲುವಾಗಿ ಧಾರವಾಡ ಜಿಲ್ಲೆಯ ಗರಗ ಗ್ರಾಮದ ರಾಷ್ಟ್ರಧ್ವಜ ತಯಾರಿಸುವ 300 ಮಂದಿ ಮಹಿಳೆಯರು ಇಲ್ಲಿಗೆ ಆಗಮಿಸಿ ಒಂದುವರೆ ತಿಂಗಳು ಕಠಿಣ ಶ್ರಮ ಪಟ್ಟು, ಕೇಂದ್ರ ಸರ್ಕಾರದ ‘ಧ್ವಜ ಸಂಹಿತೆ’ಯ ನಿಯಮಗಳನ್ನು ಪಾಲಿಸಿ ಧ್ವಜವನ್ನು ತಯಾರಿಸಿದ್ದಾರೆ” ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಜಮ್ಮುವಿನ ಲಡಾಖ್ ಪ್ರದೇಶದಲ್ಲಿ ಗಾಂಧಿ ಜಯಂತಿಯ ಅಂಗವಾಗಿ, ಭಾರತೀಯ ಸೈನ್ಯದ ವತಿಯಿಂದ 150 ಅಡಿ ಎತ್ತರದ ಧ್ವಜವನ್ನು ಹಾರಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್