ಕಲಬುರಗಿ | ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ; ಭೀಮನಗೌಡ ಆರೋಪ

  • "ಕಲ್ಯಾಣ ಕರ್ನಾಟಕಕ್ಕೆ 374 (ಜೆ) ಕಲಂನಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ"
  • "2018ರ ನಂತರದ ಸರ್ಕಾರಗಳು ಕಲ್ಯಾಣ ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿವೆ"

ಕಲ್ಯಾಣ ಕರ್ನಾಟಕ ಭಾಗಕ್ಕೆ 374 (ಜೆ) ಕಲಂ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇದ್ದರೂ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ವಕೀಲ ಭೀಮನಗೌಡ ಪರಗೊಂಡ ಆರೋಪಿಸಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯದ 44 ಇಲಾಖೆಗಳಲ್ಲಿನ ಒಟ್ಟು ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾದ 34,639 ಹುದ್ದೆಗಳಿವೆ. ಆದರೆ, ಕೇವಲ 14,809 ಹುದ್ದೆಗಳಿಗೆ ಭರ್ತಿ ಮಾಡಲಾಗಿದೆ. ನೇರ ಮುಂಬಡ್ತಿಯಿಂದ ತುಂಬಬೇಕಾಗಿರುವ 24,131 ಹುದ್ದೆಗಳಿದ್ದು, ಕೇವಲ 14,334 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದ್ದಾರೆ. ಕೆಪಿಎಸ್‌ಪಿ ಮತ್ತು ಕೆಇಎ ಇತರೆ ಸಂಸ್ಥೆಗಳ ಮೂಲಕ 5,129 ಹುದ್ದೆಗಳ ನೇಮಕಾರಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೂ ಹೊಸದಾಗಿ 12,366 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕಿದೆ" ಎಂದು ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?; ರಾಯಚೂರು | ಏಮ್ಸ್‌ ಸ್ಥಾಪನೆಗಾಗಿ ಅನಿರ್ಧಿಷ್ಟಾವಧಿ ಧರಣಿ: ಆಗಸ್ಟ್‌ 20ಕ್ಕೆ ಬೃಹತ್ ಸಮಾವೇಶ

"2012 ಏಪ್ರಿಲ್ 1 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಯುವಜನರ ನಿರುದ್ಯೋಗ ನಿವಾರಣೆಗಾಗಿ ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಯುವ ನಿಯಮಗಳನ್ನು ಸಹ ರೂಪಿಸಿಲ್ಲ" ಎಂದು ಆರೋಪಿಸಿದ್ದಾರೆ.

"ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಯುವಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೂಡಲೇ 371 (ಜೆ) ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಭಾಗಕ್ಕೆ 371 (ಜೆ) ಅನ್ವಯ ಹೆಚ್ಚಿನ ಅನುದಾನ ನೀಡಿ, ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿತ್ತು. ಆದರೆ, 2018ರ ನಂತರ ಬಂದ ಸರ್ಕಾರಗಳು ಕಲ್ಯಾಣ ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿವೆ" ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮಲ್ಲಿನಾಥ ಖಣದಾಳ, ಕಾರ್ಮಿಕ ಮುಖಂಡ ರಾಜಕುಮಾರ ಮಂಗಲಗಿ ಹಾಗೂ ಎಂ ಡಿ ಅಮನ್ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್