ಕಲಬುರಗಿ | ಕಬ್ಬಿಗೆ ₹3,500 ಬೆಂಬಲ ಬೆಲೆ ನೀಡುವಂತೆ ಶೋಷಿತ ಸಮಾಜ ವೇದಿಕೆ ಆಗ್ರಹ

kalaburgi
  • ಜೇವರ್ಗಿಯ ತಾಲೂಕು ಕಚೇರಿ ಎದುರು ಪ್ರತಿಭಟನೆ
  • ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಆಗ್ರಹ

ಬಗರ್ ಹುಕುಂ ಸಾಗುವಳಿ ಹಕ್ಕು ಪತ್ರ ವಿತರಣೆ, ಕಬ್ಬಿನ ಬೆಂಬಲ ಬೆಲೆ ಹೆಚ್ಚಳ ಮತ್ತು ಮಳೆಯಿಂದ ಹಾನಿಗೊಳಗಾದ ಬೆಳೆ ಮತ್ತು ಮನೆಗಳಿಗೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶೋಷಿತ ಸಮಾಜ ವೇದಿಕೆಯು ಪ್ರತಿಭಟನೆ ನಡೆಸಿದೆ. 

ಕಲಬುರಗಿ ಜಿಲ್ಲೆಯ ಜೇವರ್ಗಿಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. "ಕಳೆದ ಎರಡು-ಮೂರು ದಶಕಗಳಿಂದ ಭೂಮಿಯಿಲ್ಲದ ಎಷ್ಟೋ ಬಡವರು, ಕಾರ್ಮಿಕರು ಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡುತ್ತಿದ್ದಾರೆ. ಜಮೀನಿನ ಸಕ್ರಮಕ್ಕಾಗಿ ಕಳೆದ 10 ವರ್ಷಗಳಿಂದ ನಮೂನೆ 50, 53ಸಿ, 57 ಸಿಸಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರು. ಇಲ್ಲಿಯವರೆಗೂ ಅಂತಹ ರೈತರಿಗೆ ಹಕ್ಕುಪತ್ರ ಸಿಕ್ಕಿಲ್ಲ" ಎಂದು ಆಕ್ರೋಶ ಹೊರಹಾಕಿದರು.

ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆ ನೀಡಬೇಕು. ಹಲವೆಡೆ ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿದ್ದರೂ, ಕಲಬುರಗಿ ಭಾಗದಲ್ಲಿ ಬೆಲೆ ಹೆಚ್ಚಳ ಮಾಡಿಲ್ಲ. ಕೂಡಲೇ ಈ ಭಾಗದ ರೈತರು ಬೆಳೆದ ಕಬ್ಬಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. 

ಇತ್ತೀಚೆಗೆ ಸುರಿದ ಮಳೆಗೆ ಬೆಳೆ ಹಾನಿಯಾಗಿದ್ದು, ಎಷ್ಟೋ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಹಾಗೂ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಮನೆ ಕಳೆದುಕೊಂಡ ಸಂತ್ರಸ್ಥರಿಗೆ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅಕ್ರಮ ಲೂಟಿ, ಅವ್ಯವಹಾರ ನಡೆಯುತ್ತಿದೆ. ಪಂಚಾಯತಿಗಳಲ್ಲಿ ನಡೆಯುವ ಅವ್ಯವಹಾರ, ಲೂಟಿ ತಡೆಯಬೇಕು. ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಧಾರವಾಡ | ಕೂಲಿಕಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯಗಳು ಫಲಾನುಭವಿಗಳಿಗೆ ದೊರಕುತ್ತಿಲ್ಲ. ಇದರಲ್ಲಿ ಬಹಳಷ್ಟು ಅವ್ಯವಹಾರ, ಲೂಟಿ ನಡೆಯುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶೋಷಿತ ಸಮಾಜ ವೇದಿಕೆಯಿಂದ ಬೃಹತ್‌ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಕೊನೆಯಲ್ಲಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಪ್ರತಿಭಟನಕಾರರು ನೀಡಿದರು. ಪ್ರತಿಭಟನೆಯಲ್ಲಿ ಬಲಭೀಮ ಎಂ. ಜಗಲಗೊಂಡ, ಹರಿಶ್ಚಂದ್ರ ಎಂ. ಮದನಕರ್, ಮಲ್ಲಿಕಾರ್ಜುನ ಬಿ. ನೆಲೋಗಿ, ನಾಗು ಬೇಲೂರ, ಮೋಹಿಯುದ್ದಿನ ಇನಾಂದಾರ, ಮಂಜುನಾಥ ಗುಡೂರ, ಶಿವಶಂಕರ ಮ್ಯಾಗೇರಿ, ಮಲ್ಲು ನೇದಲಗಿ, ಸಿದ್ದು ಗುಡೂರ ಮುತ್ತಿತ್ತರು ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ಕಲಬುರಗಿ ಜಿಲ್ಲಾ ಸಂಯೋಜಕಿ ಗೀತಾ ಹೊಸಮನಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app