
- ಅಲ್ಪ ಪ್ರಮಾಣದ ಮಳೆ ಬಂದರೂ ಶಾಲೆಯ ಕೊಠಡಿಗೆ ನೀರು ನುಗ್ಗುತ್ತದೆ
- ಗ್ರಾಮದ ಸರ್ಕಾರಿ ಶಾಲೆಯಲ್ಲಿ 145 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ಕಲಬುರಗಿ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಹಲವಾರು ಗ್ರಾಮಗಳು ತತ್ತರಿಸಿಹೋಗಿವೆ. ಕಾಳಗಿ ತಾಲೂಕಿನ ಹಲಚೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಹಾಳಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಕೂರಲಾಗದ ಪರಿಸ್ಥಿತಿ ಉಂಟಾಗಿದೆ.
ಹಲಚೇರಾ ಗ್ರಾಮದ ಶಾಲೆಯಲ್ಲಿ 145 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ. ಮೇಲ್ಚಾವಣಿಗಳು ಹಾಳಾಗಿವೆ. ಹೀಗಾಗಿ, ಅಲ್ಪ ಪ್ರಮಾಣದ ಮಳೆ ಬಂದರೆ ಸಾಕು ಶಾಲೆಯ ಕೊಠಡಿಯೊಳಗೆ ನೀರು ನುಗ್ಗುತ್ತಿದ್ದು, ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತರಗತಿಗಳು ನಡೆಯುವ ಸಮಯದಲ್ಲಿ ಮಳೆ ಬಂದರೆ, ಕೊಠಡಿಗಳಿಗೆ ನೀರು ಸೋರುತ್ತದೆ. ಮೇಲ್ಚಾವಣಿ ಕುಸಿದು ಬೀಳುವ ಆತಂಕವೂ ಇರುತ್ತದೆ. ಆದರೆ, ಮಳೆಯಿಂದಾಗಿ ಹೊರಗೂ ಹೋಗಲಾಗದ ಪರಿಸ್ಥಿತಿಯಿಂದಾಗಿ ಭಯದ ನಡುವೆಯೂ ಮಕ್ಕಳು ಕೊಠಡಿಯಲ್ಲಿಯೇ ಇರಬೇಕು.
ಶಾಲಾ ಕಟ್ಟಡ ಮತ್ತು ಮೇಲ್ಛಾವಣಿ ಶಿಥಿಲಗೊಂಡಿವೆ. ದುರಸ್ಥಿ ಮಾಡಿಸಬೇಕೆಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿ ಎನ್ನುತ್ತಾರೆ ಗ್ರಾಮಸ್ಥರು.
ಈ ಸುದ್ದಿ ಓದಿದ್ದೀರಾ?: ಪಾಟಿ ಚೀಲ | ನಾನೆಂದೂ ಕಂಡಿರದ ಆ ಹುಡುಗ ಆಗಾಗ ನನ್ನ ಕ್ಲಾಸಿಗೆ ಬರುತ್ತಾನೆ
ಇದೀಗ, ಮಳೆಯ ಅಬ್ಬರ ಹೆಚ್ಚಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಕ್ಕಳ ಹಿತದೃಷ್ಠಿಯಿಂದ ಶಾಲಾ ಕಟ್ಟಡವನ್ನು ದುರಸ್ಥಿಗೊಳಿಸಬೇಕು. ಇಲ್ಲದಿದ್ದರೆ, ವಿದ್ಯಾರ್ಥಿಗಳ ಜೊತೆಗೂಡಿ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡ ಮಾರುತಿ ಗಂಜಗಿರಿ ಎಚ್ಚರಿಕೆ ನೀಡಿದ್ದಾರೆ.