ಕಲಬುರಗಿ | ಸಿನಿಮಾವನ್ನು ಜನರ ಕಷ್ಟ ಅರ್ಥ ಮಾಡಿಕೊಳ್ಳಲು ಬಳಸಿ: ಚೆರಿಯನ್

Kalaburagi
  • ಮನುಜಮತ ಸಿನಿಯಾನ ಮತ್ತು ಜನರಂಗ ಆಯೋಜಿಸಿದ್ದ ಎರಡು ದಿನದ ಸಿನಿ ಹಬ್ಬ
  • 'ಅಡಾಲ್ಫ್‌ ಹಿಟ್ಲರ್ ಸಹ ಸಿನಿಮಾ ಮಾಧ್ಯಮವನ್ನು ತನಗೆ ತಕ್ಕಂತೆ ದುರ್ಬಳಕೆ ಮಾಡಿದ'

ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮ ಮಾಡಿದ ಅಡಾಲ್ಫ್‌ ಹಿಟ್ಲರ್ ಸಿನಿಮಾ ಮಾಧ್ಯಮವನ್ನು ತನ್ನ ಅನೂಕಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿದ. ಸಿನಿಮಾ ಸಶಕ್ತ ಮಾಧ್ಯಮವಾಗಿದ್ದು, ಅದನ್ನು ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಬಳಸಿಕೊಳ್ಳಬೇಕಾಗಿದೆ ಎಂದು ಕೇರಳದ ಚಲನಚಿತ್ರ ನಿರ್ದೇಶಕ ಜಯಂತ್ ಚೆರಿಯನ್ ಹೇಳಿದರು.

"ವರ್ತಮಾನದ ಸಿನಿಮಾ; ದಲಿತ ಮತ್ತು ಕಪ್ಪುಜನರ ಪ್ರತಿರೋಧ" ಎಂಬ ಶೀರ್ಷಿಕೆಯಡಿ ಮನುಜಮತ ಸಿನಿಯಾನ ಮತ್ತು ಜನರಂಗ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಲಬುರಗಿ ಸಿನಿ ಹಬ್ಬದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ಸುಮಾರು 15 ವರ್ಷಗಳ ಹಿಂದೆ ಸಮಾನ ಮನಸ್ಕರೆಲ್ಲ ಒಂದೆಡೆ ಸೇರಿಕೊಂಡು ಸಿನಿಮಾ ನೋಡಿ ಚರ್ಚೆ ನಡೆಸುತ್ತಿದ್ದೆವು. ನಂತರ ಇದನ್ನು ಬೇರೆ-ಬೇರೆ ಜಿಲ್ಲೆಗಳಲ್ಲಿ ಮಾಡಬೇಕು ಎನ್ನುವ ಚಿಂತನೆ ಮೂಡಿತು. ಆಮೇಲೆ ನಾನಾ ಜಿಲ್ಲೆಗಳಲ್ಲಿ ಸಿನಿ ಹಬ್ಬಗಳನ್ನು ಮಾಡಿದ್ದೇವೆ. ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಮಾಡಿದ್ದು, ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ" ಎಂದು ಮನುಜಮತ ಸಿನಿಯಾನದ ಐವಾನ್ ಡಿಸಿಲ್ವ ಹೇಳಿದರು. 

ಉದ್ಘಾಟನಾ ಸಮಾರಂಭದಲ್ಲಿ ಜನರಂಗದ ಅಧ್ಯಕ್ಷ, ರಂಗಕರ್ಮಿ ಶಂಕ್ರಯ್ಯ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ,, ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಗಾಜನೂರ, ಡಾ. ಅಪ್ಪಗೆರೆ ಸೋಮಶೇಖರ್, ಫಣಿರಾಜ್ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ?; ಸುದ್ದಿ ನೋಟ | ಏನಿದು ಬಾಯ್ಕಾಟ್‌ ಬಾಲಿವುಡ್ ಟ್ವಿಟರ್ ಅಭಿಯಾನ?

ಶುಕ್ರವಾರ (ಆಗಸ್ಟ್‌ 27)  ಮೋಹಿತ್ ಪ್ರಿಯದರ್ಶಿ ನಿರ್ದೇಶನದ ಕೋಸ್ (ಹಿಂದಿ), ಸುಷ್ಮಿತ್ ಘೋಷ್, ರಿಂಟು ಥಾಮಸ್ ಅವರ ದಿ ರೈಟಿಂಗ್ ವಿತ್ ಫೈರ್ (ಹಿಂದಿ), ಪಾ. ರಂಜಿತ್ ನಿರ್ದೇಶನದ ದಿ ಪಿಗ್ ಸೇತುಮಾನ್ (ತಮಿಳು) ಸಿನಿಮಾ ಪ್ರದರ್ಶನವಾದವು. 

ಭಾನುವಾರ (ಆಗಸ್ಟ್‌ 28)  ವಿಕಾಸ್ ರಂಜನ್ ಮಿಶ್ರಾ ಅವರ ಚೌರಾಂಗ್ (ಹಿಂದಿ), ಸೆರಾಲ್ ಮುರ್ಮು ನಿರ್ದೇಶನದ ಸೋಂಧ್ಯಾನಿ, ರಾಜೇಶ್ ರಾಜಮಣಿ ಅವರ ದಿ ಡಿಸ್ಕ್ರೀಟ್ ಚಾರ್ಮ್ ಆಫ್ ಸವರ್ಣ (ಇಂಗ್ಲಿಷ್), ಪಾ ರಂಜಿತ್ ನಿರ್ದೇಶನದ ಧಮ್ಮಂ (ತಮಿಳು) ಸಿನಿಮಾಗಳು ಪ್ರದರ್ಶನಗೊಂಡವು. 

ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ನಾನಾ ಸಂಘಟನೆಗಳ  ಸುಮಾರು 50ಕ್ಕೂ ಅಧಿಕ ಪ್ರತಿನಿಧಿಗಳು ಎರಡು ದಿನಗಳ ಸಿನಿಮಾ ಉತ್ಸವದಲ್ಲಿ ಭಾಗವಹಿಸಿದ್ದರು. ಭಾನುವಾರು ಸಿನಿಮಾ ಉತ್ಸವ ಮುಕ್ತವಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್