ಕಲಬುರಗಿ | ತೀಸ್ತಾ ಸೆಟಲ್ವಾಡ್ ಬಿಡುಗಡೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

  • ನ್ಯಾಯ, ಹಕ್ಕುಗಳ ಪರ ಪ್ರತಿಭಟಿಸಿದವರ ಬಂಧನ
  • ಆರ್‌ಎಸ್‌ಎಸ್‌ನವರ ಪ್ರಚೋದನೆಯಲ್ಲಿ ಆಡಳಿತ

ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ ಗುಜರಾತ್ ಪೊಲೀಸರ ಕ್ರಮವನ್ನು ವಿರೋಧಿಸಿ ಪ್ರಗತಿಪರ  ಸಂಘಟನೆಗಳ ಒಕ್ಕೂಟದಿಂದ ಕಲಬುರಗಿಯ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸೇಡು ಸಂಸ್ಕೃತಿಯ ರಾಜಕೀಯ ಕೊನೆಗೊಳಿಸಲು, ಮಾನವ ಹಕ್ಕು  ಉಳಿಸಿಕೊಳ್ಳಲು ಬೃಹತ್ ಹೋರಾಟ ಮಾಡಬೇಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

"ತೀಸ್ತಾ ಸೆಟಲ್ವಾಡ್, ಸಂಜೀವ್ ಭಟ್ ಹಾಗೂ  ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಆರ್ ಬಿ ಶ್ರೀಕುಮಾರ್‌ ಅವರನ್ನು ಬಂಧಿಸಿದ್ದೀರಿ.  ಆರ್ ಎಸ್‌ಎಸ್‌ನವರ ಮಾತು ಕೇಳಿಕೊಂಡು ವ್ಯಕ್ತಿಗಳನ್ನು ಬಂಧಿಸುತ್ತಿರುವ ಅಮಿತ್‌ ಶಾ ಮತ್ತು  ಪ್ರಧಾನಿ ಮೋದಿಯವರೇ, ಬಿ.ಆರ್ ಅಂಬೇಡ್ಕರ್ ಅವರು ಕಟ್ಟಿದ ಸಂವಿಧಾನ ನಿಯಮಗಳ ಉಲ್ಲಂಘಿಸಬೇಡಿ. ದೇಶದ ಪ್ರಜಾಪ್ರಭುತ್ವ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.  ಸರ್ವಾಧಿಕಾರ ನಡೆಸಿ, ಹಿಟ್ಲರ್ ಶಾಹಿ ನೀತಿ ಜಾರಿಗೆ ತರುತ್ತಿದ್ದೀರಿ. ತೀಸ್ತಾ ಸೆಟಲ್ವಾಡ್ ಅವರನ್ನು ಬಿಡುಗಡೆ ಮಾಡಿ, ನಿಮ್ಮ ಕ್ರೂರ ಸೇಡಿನ ಸಂಸ್ಕೃತಿಯು ಹೀಗೆ ಮುಂದುವರೆದರೆ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಾರೆ. ಹಿಟ್ಲರ್‌ಗೆ ಬಂದ ಪರಿಸ್ಥಿತಿ ಏನು ಎಂಬುದು ನಿಮಗೆ ನೆನಪಲ್ಲಿರಲಿ" ಎಂದು ಕೆ ನೀಲಾ ಹೇಳಿದರು.

ಈ ಸುದ್ದಿ ಓದಿದ್ದೀರಾ ? ರಾಮನಗರ | ಫೆಬ್ರಿನ್‌ ಸೋಂಕು ನಿರ್ಮೂಲನೆಯಾಗದಿದ್ದರೆ ರೇಷ್ಮೆ ಉದ್ಯಮ ನಾಶ 

'ಭಾರತ ಪ್ರಜಾಪ್ರಭುತ್ವ ದೇಶ ಎಂದು ಕರೆಯುತ್ತಾರೆ. ಆದರೆ ಮಾನವ ಹಕ್ಕುಗಳ ವಿರುದ್ಧ ಸಿಡಿದರೆ ಹೋರಾಟ ಮಾಡುವ ಹಕ್ಕು  ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ.  ನಮ್ಮ ಸ್ವಾತಂತ್ರ್ಯ, ಸಂವಿಧಾನ ಉಳಿಸಿಕೊಳ್ಳುವುದಕ್ಕಾಗಿ ನಾವು ದೊಡ್ಡ ಹೋರಾಟ ಮಾಡಬೇಕಿದೆ. ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಹಕ್ಕು. ನಮ್ಮ ಈ ಪ್ರತಿಭಟನೆ ನಿರಂತರವಾಗಿರುತ್ತದೆ' ಎಂದು ನಟರಾಜ್ ಬುದ್ಯಾಳ ಮಾತಾಡಿದರು.

ಸಂವಿಧಾನವು ಪ್ರಶ್ನಿಸುವ ಹಕ್ಕು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಆದರೆ ಪ್ರಯೋಜನವೇನು. ಫೆಬ್ರವರಿ 2002ರಲ್ಲಿ ನಡೆದ ನರಮೇಧ ಹತ್ಯಾಖಂಡದ  ಹಿಂಸಾಚಾರದಲ್ಲಿ, ಅಪರಾಧಿಗಳು ಈ ಹಕ್ಕುಗಳನ್ನು ಮರೆತು ಕೃತ್ಯ ಎಸಗಿದರು. ಈ ಘಟನೆಯ ವಿರುದ್ಧ ಸೆಟೆದು ನಿಂತವರನ್ನು ಜೂನ್ 26 ರಂದು ಬಂಧಿಸಿದ್ದರು. 

"ಗುಲ್ಬರ್ಗ ಸೊಸೈಟಿಯ ಸಂಸದ ಐಸನ್ ಜಾಫ್ರಿ ಜೀವಂತ ಕೊಲೆ ಮಾಡಿದ್ದನ್ನು ಪ್ರಶ್ನಿಸಿ ಅವರ ಪತ್ನಿ ಝಕಿಯಾ ಜಾಫ್ರಿ, ಇನ್ನಿತರ ಅಮಾಯಕರ ಹತ್ಯೆಯನ್ನು ಖಂಡಿಸಿ ಕೋರ್ಟಿಗೆ ಹೋಗುತ್ತಾರೆ. ಆದರೆ ಸುಪ್ರೀಂಕೋರ್ಟ್‌ ಗುಜರಾತ್‌ ಗಲಭೆಯಲ್ಲಿ  ಭಾಗಿಯಾದ ದುಷ್ಕರ್ಮಿಗಳ ಅನ್ಯಾಯ ಪರಿಶೀಲಿಸದೆ ತಪಿತಸ್ಥರನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದು, ಇದೀಗ ಮತ್ತೆ ಅಪರಾಧಿಗಳ ಪರ ನಿಂತಿದೆ. ಜನ ಪರ ನಿಂತ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ್ದಾರೆ.  ಆರ್‌ಎಸ್‌ಎಸ್‌ನವರ ಪ್ರಚೋದನೆಯಲ್ಲಿ ಆಡಳಿತ ಮಾಡುತ್ತಿದೆ ಈಗಿನ ಸರ್ಕಾರ. ನಮ್ಮ ದೇಶಕ್ಕೆ ಬ್ರಿಟಿಷರನ್ನು ಓದ್ದೋಡಿಸಿದ ಚರಿತ್ರೆ ಇದೆ. ನಾಲ್ಕು ವ್ಯಕ್ತಿಗಳನ್ನು ಬಂಧಿಸಬಹುದು. ಹತ್ತು ಜನರನ್ನು ಕೊಲೆ ಮಾಡಬಹುದು. ಕೆಲವು ಜನರನ್ನ ಜೈಲಿಗೂ ಕಳಿಸಬಹುದು. ಆದರೆ ಸಂವಿಧಾನದಲ್ಲಿಯೇ ಬಲವಾದ ನಂಬಿಕೆ ಇರುವ ನಾವು ನಮ್ಮ ಜೀವದ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇವೆ" ಎಂದು  ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ ಎಸ್ ವಿಮಲಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರಭು ಖಾನಾಪುರೆ, ಸುಧಾಮ ಧನ್ನಿ, ಅರ್ಜುನ್ ಭದ್ರೆ ಡಿಎಸ್ಎಸ್, ಪಾಂಡುರಂಗ, ರೇವಣಸಿದ್ದ ಕಲಬುರ್ಗಿ, ಪದ್ಮಿನಿ ಶಿರಸಗಿ ರವಿ ಶಿರಸಗಿ ಇನ್ನಿತರ  ಪ್ರಗತಿಪರ ಸಂಘಟನೆಯ  ಹೋರಾಟಗಾರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್