ನೀರಾವರಿ ಹೋರಾಟಗಾರ ವಿಜಯ ಕುಲಕರ್ಣಿ ಸಂದರ್ಶನ: ಕಳಸ ಬಂಡೂರಿ ಯೋಜನೆ, ಮಹದಾಯಿ ಯೋಜನೆ ಬೇರೆ ಬೇರೆ

ಮಹದಾಯಿಯ ನೀರು ಕುಡಿಯಲು ಮತ್ತು ಕಳಸ ಬಂಡೂರಿಯ ನೀರಿನಿಂದ ಬೇಸಾಯ ಮಾಡಲು ಜನ ದಶಕಗಳಿಂದ ಕಾಯುತ್ತಲೇ ಇದ್ದಾರೆ. ಆದರೆ, ರಾಜಕಾರಣಿಗಳ ಧನದಾಹದ ಮುಂದೆ ಜನರ ನೀರಿನ ದಾಹ ಲೆಕ್ಕವೇ ಇಲ್ಲದಂತಾಗಿದೆ. ಇದರ ಸುದೀರ್ಘ ಚರಿತ್ರೆಯ ವಾಸ್ತವ ಸಂಗತಿಗಳನ್ನು ಅರಿಯಲು ಕಳಸ-ಬಂಡೂರಿ ಹೋರಾಟ ಸಮಿತಿಯನ್ನು ಸಂಘಟಿಸಿ, ನಿರಂತರ 25 ವರ್ಷಗಳಿಂದ ಹೋರಾಡುತ್ತಿರುವ ವಿಜಯ ಕುಲಕರ್ಣಿ ಅವರನ್ನು 'ಈ ದಿನ.ಕಾಮ್' ಮಾತನಾಡಿಸಿತು. ಅವರ ದೀರ್ಘ ಅನುಭವದ ನೇರ, ನಿಷ್ಠುರ, ಖಡಕ್ ಮಾತುಗಳು ಇಲ್ಲಿವೆ.
Kalasa-Banduri project, Mahadayi are different issues, says senior activist

“ಕಳಸ ಹಳ್ಳ ಮತ್ತು ಬಂಡೂರಿ ಹಳ್ಳಗಳು ಪಶ್ಚಿಮಾಭಿಮುಖವಾಗಿ ಹರಿದು ಮಹದಾಯಿ ಸೇರುತ್ತವೆ. ಈ ಹಳ್ಳಗಳಿಗೆ ಅಡ್ಡಗಟ್ಟೆ ಹಾಕಿ ಬೇಸಾಯಕ್ಕೆ ನೀರು ಕೊಡುವುದೇ ಕಳಸ ಬಂಡೂರಿ ಯೋಜನೆ. ವಿದ್ಯುತ್ ಉತ್ಪಾದನೆ ಜೊತೆಗೆ ಮೂರು ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮಹದಾಯಿ ಯೋಜನೆ. ಈ ಎರಡೂ ಯೋಜನೆಗಳ ನಡುವೆ ಯಾವುದೇ ಸಂಬಂಧ ಇಲ್ಲ. ರಾಜಕಾರಣಿಗಳು ಇದನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ, ಹೋರಾಟಗಾರರು ದುಡ್ಡು ಮಾಡುತ್ತಾರೆ; ಕೊನೆಗೆ ಜನರನ್ನು ಮಂಗ ಮಾಡುತ್ತಿದ್ದಾರೆ” ಎಂದು ಮಾತುಕತೆಗೆ ಪೀಠಿಕೆ ಹಾಕಿದರು ಕಳಸಾ-ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ ಕುಲಕರ್ಣಿ.

ಈ ದಿನ.ಕಾಮ್: ಇತ್ತೀಚೆಗೆ ನಿಮ್ಮ ಕರ ನಿರಾಕರಣೆ ಕರೆಯ ನಂತರ ಸರ್ಕಾರ ಮಹದಾಯಿ ಯೋಜನೆ ಆರಂಭಿಸುತ್ತೇವೆ ಎಂದು ಹೇಳಿದೆಯಲ್ಲ?

ವಿಜಯ ಕುಲಕರ್ಣಿ: ಹಾಂ… ಹೇಳಿದೆ. ತಾತ್ಕಾಲಿಕವಾಗಿ ಏತ ನೀರಾವರಿ ಮೂಲಕ ಮಹದಾಯಿ ನೀರನ್ನು ತರ್ತೇವೆ ಅಂತ ಹೇಳಿದ್ದಾರೆ. ಈ ರಾಜಕಾರಣಿಗಳು ಎಷ್ಟು ಅಪ್ರಬುದ್ಧರಿದ್ದಾರೆ ಅಂದರ, ಕಳಸ ಬಂಡೂರೀನೆ ಬ್ಯಾರೆ, ಮಹದಾಯಿನೇ ಬ್ಯಾರೆ. ಈ ಹಳ್ಳಗಳು 300 ಅಡಿ ಮೇಲಿಂದ ಹರಿದು ಕೆಳಗಿರೋ ಮಹದಾಯಿ ಸೇರ್ತವೆ. ಈಗ ಮಹದಾಯಿಯಿಂದ ಮತ್ತೆ ರಿವರ್ಸ್ ಗೇರಲ್ಲಿ ನೀರು ತರ್ತೀವಂತ ಹೇಳ್ತಿದ್ದಾರೆ. ಇವರಿಗೇನು ಪ್ರಬುದ್ಧತೆ ಐತೆ ಹೇಳ್ರಲಾ? ಮೊನ್ನೆ ನಾನೇನು ಸ್ಟೇಟ್ಮೆಂಟಿನಾಗೆ ಹೇಳಿದ್ದೆ ಈಗ ಅದು ನಿಜ ಅನ್ಸಕ್ಕೆ ಹತ್ತೈತ!

ಈ ದಿನ.ಕಾಮ್: ನಿಮ್ಮ ಸ್ಟೇಟ್‌ಮೆಂಟ್‌ನಲ್ಲಿ ಏನಂತ ಹೇಳಿದ್ದಿರಿ?

ವಿಜಯ ಕುಲಕರ್ಣಿ: “ಈ ರಾಜಕಾರಣಿಗಳು ಅಪ್ರಬುದ್ಧರು” ಅಂತ ಹೇಳಿದ್ದೆ. ಹಂಗಂತ ಹೇಳಿದಾಗ ನನಗೆ ಸ್ವಲ್ಪ ಅಳುಕಿತ್ತು. ಅವರ ಈ ಹೇಳಿಕೆ ಕೇಳಿದ ಮ್ಯಾಲ ಆ ಅಳುಕು ಮಾಯಾ ಆಯ್ತು ನೋಡ್ರಲ.

ಈ ದಿನ.ಕಾಮ್: ನೀವು ಈ ಕಳಸ-ಬಂಡೂರೀನೇ ಬೇರೆ, ಮಹದಾಯಿ ಯೋಜನೇನೆ ಬೇರೆ ಅಂದ್ರಿ! ಅದು ಹೇಗೆ? ಇದರ ಚರಿತ್ರೆ ಏನು? 

ವಿಜಯ ಕುಲಕರ್ಣಿ: 1962ರಲ್ಲಿ ಸರೋಜಿನಿ ಮಹಿಷಿ ಕಮಿಟಿ ಇಡೀ ಯೋಜನಾ ಪ್ರದೇಶವನ್ನ ಎರಡು ವರ್ಷ ಅಧ್ಯಯನ ಮಾಡಿತು. ಮೊದಲಿಗೆ ಕಳಸ ಯೋಜನೆ ಸಿದ್ಧ ಆಯ್ತು. ಅಂದಿಗೆ ಅದರ ಯೋಜನಾ ವೆಚ್ಚ 45.5 ಕೋಟಿ ರೂಪಾಯಿ. ನೀರು ಸಿಗ್ತಾ ಇದ್ದದ್ದು 3.33 ಟಿಎಂಸಿ. ಬಂಡೂರಿಗೆ ಅಣೆಕಟ್ಟೆ ಹಾಕಿದರೆ ಅಲ್ಲಿಂದ 4 ಟಿಎಂಸಿ ನೀರು ಸಿಗ್ತಿತ್ತು. ಇದರ ಯೋಜನಾ ವೆಚ್ಚ 49.5 ಕೋಟಿ ರೂಪಾಯಿ. ಎರಡೂ ಕೂಡಿ 95 ಕೋಟಿ ರೂಪಾಯಿ; ಒಂದು ಕೋಟಿಗಿಂತ ಕಡಿಮೆ.

ಈ ದಿನ.ಕಾಮ್: ₹45.5 ಕೋಟಿ, ₹49.5 ಕೋಟಿ; ಒಟ್ಟು ಒಂದು ಕೋಟಿಗಿಂತ ಕಡಿಮೆ. ಏನಿದರ ಉದ್ದೇಶ?

ವಿಜಯ ಕುಲಕರ್ಣಿ: ಏನಿಲ್ಲ. ಯಾವುದೇ ಯೋಜನಾ ವೆಚ್ಚ 50 ಕೋಟಿ ದಾಟಿದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿತ್ತು. ನಮ್ಮ ರಾಜ್ಯದ್ದೇ ನೀರು, ನಮ್ಮದೇ ನೆಲ, ನಮ್ಮದೇ ಬಂಡವಾಳ. ಯೋಜನಾ ವೆಚ್ಚ ₹50 ಕೋಟಿ ಒಳಗೆ ಇದ್ದರೆ ಯೋಜನೆ ಬೇಗ ಮುಗಿಸಬಹುದು ಎಂಬ ಉದ್ದೇಶ.

ಈ ದಿನ.ಕಾಮ್: ಆನಂತರ? 

ವಿಜಯ ಕುಲಕರ್ಣಿ: 1977ರಲ್ಲಿ ಅಗ್ರಿಮೆಂಟ್ ಅಮೆಂಡ್‌ಮೆಂಟ್ ಆಯಿತು. ಅಷ್ಟರಲ್ಲಿ ಹುಬ್ಬಳ್ಳಿ-ಧಾರವಾಡದ ಜನ ಈ ಯೋಜನೆಯ ಜಾಡು ಹಿಡಿದು “ನೀವು ಕಳಸ ಬಂಡೂರಿಗೆ ಕಟ್ಟೆ ಕಟ್ಟಿದರೆ ನಮಗೆ ಕುಡಿಯುವ ನೀರಿನ ತೊಂದರೆ ಆಗುತ್ತೆ. ಆದ್ದರಿಂದ ನಮಗೆ ಕುಡಿಯುವ ನೀರಿನ ಯೋಜನೆಯನ್ನೂ ಇದರಲ್ಲಿ ಸೇರಿಸಿ ಎಂಬ ಬೇಡಿಕೆ ಇಟ್ಟರು. ಅಷ್ಟರಲ್ಲಿ ಚುನಾವಣೆ ಆಯಿತು. ಡಿ.ಕೆ. ನಾಯ್ಕರ್ ಸಂಸದರಾಗಿ ಚುನಾಯಿತರಾಗಿ ಬಂದರು. ಅವರು ಚುನಾವಣಾ ಭರವಸೆಯಾಗಿ “ನಾನು ಗೆದ್ದು ಬಂದರೆ ಹುಬ್ಬಳ್ಳಿ ಧಾರವಾಡಕ್ಕೆ ಕುಡಿಯುವ ನೀರು ಕೊಡುತ್ತೇನೆ” ಎಂದು ಹೇಳಿದ್ದರು. ಅವರು ಆರಿಸಿ ಬಂದ ಮೇಲೆ ಒಂದು ಪೈಪ್ ಹಾಕ್ಕೊಂಡು ತಗೊಂಡು ಹೋಗ್ಬಿಟ್ರು. ನಾವ್ಯಾರೂ ವಿರೋಧ ಮಾಡ್ಲಿಲ್ಲ.

ಈ ದಿನ.ಕಾಮ್: ಆದ್ರೂ ಮುಂದಿನ ಬಾರಿ ಗೆದ್ದಿದ್ದು ಬಾಬಾಗೌಡ ಪಾಟೀಲರಲ್ವ?

ವಿಜಯ ಕುಲಕರ್ಣಿ: ಹೌದ್ರ. “ನಾನು ಅದ್ ಮಾಡ್ತೀನಿ ಇದ ಮಾಡ್ತೀನ” ಅಂತ ಹೇಳಿ ಬಾಬಾಗೌಡ ಪಾಟೀಲ್ರು ಗೆದ್ದು ಬಂದ್ರು. ಅವರು ಬಂದಿದ್ದೇ ನಮ್ಮ ತಿಗಡಿ ಹಳ್ಳಕ್ಕ ಡ್ಯಾಂ ಕಟ್ಟಿ; ಅಲ್ಲಿ ಎರಡೂವರೆ ಟಿಎಂಸಿ ನೀರನ್ನ ಕೊಂದುಬಿಟ್ರು. ಇವ್ರು ಯಾವಾಗ ಈ ಡ್ಯಾಂ ಕಟ್ಟಿದ್ರೋ, ಆಗ ನಮಗೆ ಬರಗಾಲ ಆರಂಭ ಆಯ್ತು. ಅಲ್ಲಿಮಟ ನಮಗ ಬರಗಾಲ ಇರ್ಲಿಲ್ಲ!

ಇನ್ನೊಂದು ನಿಮ್ಮ ಗಮನಕ್ಕೆ ಹೇಳೋದಂದ್ರ, ಈ “ಮಲಪ್ರಭ” ಅನ್ನೋದು ಇದು ನದೀನೂ ಅಲ್ಲ, ಹಳ್ಳನೂ ಅಲ್ಲ! ಈ ಮಲಪ್ರಭ ಕ್ಯಾಚ್ಮೆಂಟ್ ಏರಿಯಾದಲ್ಲಿ ಮಳೆಯಾದ್ರೆ ಮಾತ್ರ ಇದಕ್ಕೆ ನೀರು! ಇಲ್ಲ ಅಂದ್ರ ನೀರಾ ಇಲ್ಲ ಇದಕ್ಕ! ಈ ಮಾತ್ನ ಸರ್. ಎಂ. ವಿಶ್ವೇಶ್ವರಯ್ಯ ಮೊದಲೇ ಹೇಳಿದ್ರ: “ಇದಕ್ಕೆ ಅಗತ್ಯ ಇರೋವಷ್ಟು ಕ್ಯಾಚ್ಮೆಂಟ್ ಏರಿಯಾ ಇಲ್ಲ. ಇಲ್ಲಿ ಡ್ಯಾಂ ಕಟ್ಟಬ್ಯಾಡ್ರಿ ಅಂತ”. ಅಂಗೊಂದ್ ಪಕ್ಷ ಕಟ್ಟಬೇಕು ಅಂದ್ರ, ಏನು ಇಲ್ಲಿ ಆರು ಹಳ್ಳ ಅವೆ, ಅವನ್ನೆಲ್ಲಾ ಮೊದಲು ಒಂದಕ್ಕೊಂದು ಕೂಡಿಸ್ರಿ ಅಂತ. ಅವರ ಮಾತ ಕೇಳಲಿಲ್ಲ. ಗಡಬಡ ಅಂತಾ ಡ್ಯಾಂ ಕಟ್ಟಿದ್ರು. ಆವಾಗ ಮಳೆಗಾಲ ಚಲೋ ಇತ್ತು. ಎಂಗೋ ನಡೆದು ಹೋಯ್ತು. ಇದಾದ ಮ್ಯಾಲ ಬಾಬಾಗೌಡ ಪಾಟೀಲ ತಿಗಡಿ ಹಳ್ಳಕ್ಕ ಯಾವಾಗ ಡ್ಯಾಂ ಕಟ್ಟಿದ್ರೋ, ನಮಗೆ ಬರಗಾಲ ಚಾಲೂ ಆಯ್ತು! 2001ರಲ್ಲಿ ನಮ್ಮ ಹೋರಾಟಾನೂ ಚಾಲೂ ಆಯ್ತು.

ಈ ದಿನ.ಕಾಮ್: ಸರಿ, ಈಗ ಸರ್ಕಾರ ಹೇಳುತ್ತಿರುವ ಸುಧಾರಿತ ಯೋಜನೆಗೂ, ಮೂಲ ಯೋಜನೆಗೂ ಏನಾದ್ರೂ ವ್ಯತ್ಯಾಸ ಇದೆಯಾ?

ವಿಜಯ ಕುಲಕರ್ಣಿ: ಹೌದ್ರ, ಭಾಳಾ ವ್ಯತ್ಯಾಸ ಐತ. ಈಗ ನೋಡ್ರ, ನಮಗೆ ಕಳಸ ಹಳ್ಳ ಪ್ರಾಜೆಕ್ಟ್‌ನಿಂದ ಬರಬೇಕಾಗಿರೋ ನೀರು 3.33 ಟಿಎಂಸಿ. ಅದರಲ್ಲಿ ಪೋಟೆ ಹಳ್ಳದಿಂದ ಬರಬೇಕಾಗಿರೋದು 1.25 ಟಿಎಂಸಿ. ಈಗ ಕಳಸ ಪ್ರಾಜೆಕ್ಟ್ ಮುಗುದ್ರ ನಮಗ 4 ಟಿಎಂಸಿ ನೀರು ಸರಾಗವಾಗಿ ಬರ್ತಾವ. ಈಗ ಇವರ ಹೊಸಾ ಯೋಜನೆ ಪ್ರಕಾರ ನಮಗೆ ಈ ನಾಲ್ಕು ಟಿಎಂಸಿ ನೀರು ಸಿಗೋದಿಲ್ಲ. ಹೆಚ್ಚಂದ್ರ ಒಂದೂವರೆ-ಎರಡು ಟಿಎಂಸಿ ನೀರು ಜಗ್ಗಬಹುದು, ಅಷ್ಟೇ! ಅಲ್ಲದೇ ಮೋಟರ್ನಾಗೆ ಎತ್ತೋದಾದ್ರೆ ಅದರ ವೆಚ್ಚ ಎಷ್ಟಾಗ್ತದ ಹೇಳ್ರ?

ಇದಕ್ಕೂ ಒಂದು ಚರಿತ್ರೆ ಐತಾ. ಅದನ್ನೂ ಮೊದಲು ನಿಮ್ಮ ಗಮನಕ್ಕೆ ತರ್ತೀನಿ. ನಮ್ಮ ಹೆಚ್.ಕೆ. ಪಾಟೀಲ್ರು ನೀರಾವರಿ ಸಚಿವರಿದ್ದಾಗ, 2003 ಆಗಸ್ಟ್ 3ನೇ ತಾರೀಕಿನಾಗ ಗೋನಾಳ ಭೀಮಪ್ಪನೋರು ಡಿಸಿ ಇದ್ರು. ಅವ್ರು ಗದಗಿನಾಗ ಒಂದು ಮೀಟಿಂಗ್ ಕರದ್ರು. ಅದ್ರಾಗ ಆ ನಮ್ಮ ಪಾಟೀಲ್ರೂ ಇದ್ದರು. ಅವ್ರು ಹೇಳಿದ್ರು “ಇದಕ್ಕೆ ನಾವೇನಾರೂ ಒಂದು ಪರ್ಯಾಯ ವ್ಯವಸ್ಥೆ ಮಾಡಿಕೊಂಡು “ಲಿಫ್ಟ್ ಸಿಸ್ಟಂ” ಮಾಡಿ ನೀರು ತಂದ್ರ ಏನಾರ ಒಂದು ವ್ಯವಸ್ಥೆ ಆಗತೈತೆ" ಅಂದ್ರು. 

ಅವಾಗ ನಾನಾ ಹೂಂ ಅಂದ್ಬಿಟ್ಟಿದ್ದೀನಂದ್ರ ಅವಾಗ್ಲೇ ಫಾರಿನೊಳಗಿಂದ ಮಷಿನ್ ತರಿಸಾಕ, ಇನ್ಸ್ಟ್ರುಮೆಂಟ್ ತರ್ಸಾಕ ರೆಡಿ ಇದ್ರು! ಅವಾಗ ನಾನು ಅದನ್ನ ವಿರೋಧ ಮಾಡ್ದೆ. ಯಾಕಂದ್ರ ಈಗ ನೀರಾವರಿ ಶುಲ್ಕ ಅಂತ 50 ರೂಪಾಯಿ ಹಾಕ್ತಾ ಇದ್ದೀರಿ. ಇನ್ನು ನೀರು ಲಿಫ್ಟ್ ಮಾಡೋ ಕರಂಟಿನ ವೆಚ್ಚ ಅಂತ 100 ರೂಪಾಯಿ ಸೇರುಸ್ತೀರಿ! ಅವಾಗ ರೈತನೇ ಅದನ್ನೂ ಭರಿಸ್ಬೇಕಾಗ್ತದ. ಅಲ್ದೇ ನಮ್ಮಲ್ಲಿ ಅಷ್ಟು ಕರಂಟ್ ತಾನೆ ಅವತ್ತು ಎಲ್ಲಿತ್ತು? ಇವತ್ತು ಮಾಡಿದ್ರೂ ಕರೆಂಟ್ ಚಾರ್ಜ್ ಯಾರ ಮೇಲೆ ಬೀಳ್ತದ? ನಮಗೆ ನೀರು ಸರಾಗವಾಗಿ ಬರಂಗೆ ಮಾಡ್ರಲಾ? ಕರಂಟಿದ್ರೆ ಲಿಫ್ಟ್, ಕರಂಟಿಲ್ಲಂದ್ರೆ ಲಿಫ್ಟ್ ಎಲ್ಲಿಂದ ಆದತ್ರಲಾ!

ಈ ದಿನ.ಕಾಮ್: ನಿಮಗೆ ಅಲ್ಲಿ ಇನ್ನೇನು ಸಮಸ್ಯೆಗಳು ಕಾಣುತ್ತಿವೆ?!

ವಿಜಯ ಕುಲಕರ್ಣಿ: ಅಲ್ಲೇನೂ ಸಮಸ್ಯೇನೇ ಇಲ್ಲ! ಇನ್ನು ನಾಲ್ಕೂವರೆ ನೂರು ಮೀಟರ್ ನಾಲಾ ಆದ್ರ ಕಳಸ-ಬಂಡೂರಿ ಯೋಜನೇನೆ ಮುಗಿದು ಹೋಗ್ತದ. ಇದ್ರಾಗ ಅರಣ್ಯ ಪ್ರದೇಶ ಇರೋದ್ರಿಂದ ಅರಣ್ಯದೋರು ಪರವಾನಗಿ ಕೊಡೋದಿಲ್ಲಾಂತ ಹೇಳಿದ್ದಾರೆ ಇವ್ರು. ಇದು 2003ರಲ್ಲಿ ಗೋನಾಳ್ ಭೀಮಪ್ಪನೋರ ಮುಂದ ಮೀಟಿಂಗ್ ನಡೆದಾಗಲೇ ಈ ಅರಣ್ಯದ ಬಗ್ಗೆ ಚಿಂತನ ನಡೆದೈತಿ. ಈಗ 7.5 ಸಾವಿರ ಹೆಕ್ಟೇರ್ ಅರಣ್ಯ ನಾಶ ಆಗ್ತದ, ಅದಕ್ಕೇನಾದ್ರೂ ಒಂದು ಪರ್ಯಾಯ ವ್ಯವಸ್ಥೆ ಮಾಡಬೇಕು ಅಂದಾಗ ನಾನು ಹೇಳಿದ್ದೆ: “ನಮ್ಮ ಗದಗಿನೊಳಗ ಕಪ್ಪತಗುಡ್ಡ, ನರಗುಂದದೊಳಗ ನರಗುಂದಗುಡ್ಡ, ಚಿಕನೂರು ಗುಡ್ಡ ಅವೆ. ನಮಗೆ ಸಾಕಾಗೋವಷ್ಟು ನೀರು ಕೊಟ್ರಂದ್ರ ಅಲ್ಲಿ ಇದರ ನಾಲ್ಕರಷ್ಟು ಫಾರೆಸ್ಟ್ ಬೆಳಸಿ ತೋರಸ್ತೀವಿ ನಾವು”.

ನಿಮ್ಮ 7.5 ಸಾವಿರ ಹೆಕ್ಟೇರ್ ಫಾರೆಸ್ಟ್‌ಗೆ ಬದಲಾಗಿ 17-18 ಸಾವಿರ ಹೆಕ್ಟೇರ್ ಫಾರೆಸ್ಟ್ ಬೆಳೆಸಿ ತೋರುಸ್ತೀವಿ ನಾವು ಎಂತಲೂ ಮಾತುಕತೆ ಆಗಿತ್ತು. ಈ ಮಾತುಕತೆ ಸಾರಾಂಶನ ದಾಖಲೆ ಮಾಡಿ, ಅವ್ರು ಕೇಂದ್ರಕ್ಕೆ ಕಳಿಸಿದ್ದರು. ಅದಕ್ಕಿಂತ ಹಿಂದ ಒಂದು ಮಾತದ. ಈ ಫಾರೆಸ್ಟ್ ಕ್ಲಿಯರೆನ್ಸಿಗೆ ಆಗಲೇ ಪರ್ಮಿಷನ್ ಕೊಟ್ಟಾರ. ಆದ್ರೆ, ಅವಾಗ ಏನಾಗೈತೆ, ಈ ಸರ್ಕಾರ ನಡಸೋರು, ಸಕಾಲದಲ್ಲಿ ಯೋಜನೆ ಕಾರ್ಯಗತ ಮಾಡ್ದೆ, ಆ ಪರ್ಮಿಷನ್ ಲ್ಯಾಪ್ಸ್ ಆಗದ. ಈಗ ಅದಾ ಆರ್ಡರ್‌ನ ರೀಕಾಲ್ ಮಾಡಿದ್ರ ಇವರಾರ ತಕರಾರೂ ಅವಶ್ಯಕತೆ ಇಲ್ಲ ಅದಕ್ಕ. ಯಾಕಂದ್ರ ಇದಕ್ಕೆ ಬೇಕಾದ ಎಲ್ಲಾ ಕಾರ್ಯಗಳೂ ಅವತ್ತೇ ಮುಗ್ದವ. ಅದರಿಂದ ಪರಿಸರಕ್ಕ ಯಾವ ಹಾನೀನೂ ಆಗಲ್ಲ. ಅವತ್ತೇ ರಿಪೋರ್ಟ್ ಆಗದ.

ಈ ದಿನ.ಕಾಮ್: ಒಟ್ಟಾರೆ, ಮುಂದೇನು?

ವಿಜಯ ಕುಲಕರ್ಣಿ: ಏನೂ ಇಲ್ಲ! ಸ್ವಲ್ಪ ಕೆಲಸ ಬಾಕಿ ಇದೆ. ಈಗ ನೋಡ್ರಲ, ಮಹದಾಯಿ ಒಂದು ಅಂತರರಾಜ್ಯ ವಿವಾದ. ಅದೊಂದು ನದಿ. ಅದನ್ನ ತಿರುಗಿಸೋಕೆ ಅನುಮತಿ ಸಿಗೋಂಗಿಲ್ಲ. ಅಲ್ಲದ, ಅದು ನಮ್ಮಿಂದ 300 ಫೂಟು ಕೆಳಗದ. ಅಲ್ಲಿಂದ ನೀರು ಮೇಲಕ್ಕೆ ತರಬೇಕಂದ್ರ ಮಧ್ಯದಲ್ಲಿ ಬರೋ ಭೀಮಗಡ ಕಾಡಿನ ಪ್ರದೇಶನ ಅಷ್ಟು ಎತ್ರ ಮಾಡಬೇಕಾಗ್ತದ! ಅದು ಇಕೋ ಸೆನ್ಸಿಟೀವ್ ಜ಼ೋನ್. ಈ ಯೋಜನೆ ಕಾರಣ ಅಲ್ಲಿ 7500 ಹೆಕ್ಟೇರ್ ಅರಣ್ಯ ನಾಶ ಆಗ್ತದ ಅಂದ್ರ ಅದೆಂಗೆ ಪರ್ಮಿಷನ್ ಕೊಡ್ತಾರ ಹೇಳ್ರಲಾ? ಹಂಗೆ ಮಾಡೋಕ್ಕೆ ಬರೋಲ್ಲ. ಮತ್ತ ಲಿಫ್ಟ್ ಮಾಡೋಕ ಅನಗತ್ಯವಾಗಿ ಕರಂಟ್ ವೇಸ್ಟ್ ಆಗ್ತದ. ಅಲ್ದೇ, ರೈತರ ಮೇಲೆ ಹೊರೆ ಬೀಳ್ತದ. ಇಂತ ಹುಟ್ಟಾ ಡಿಸ್ಪ್ಯೂಟ್ ವಿಷಯನ ಕಳಸ-ಬಂಡೂರಿ ಒಳಗ ಸೇರ್ಸಿ ಇಡೀ ಯೋಜನೆ ಹಾಳಾಗಿ ಹೋಗೈತೆ.

ಆದರೆ, ಈ ವಿಷಯದ ಮೇಲೆ ವಿಚಾರಣೆ ಮಾಡ್ತಿರೋ ನ್ಯಾಯಾಧಿಕರಣ ಚಲೋ ಹೇಳೈತಿ: “ಕಳಸ-ಬಂಡೂರಿಯಿಂದ ನೀವು 7.5 ಟಿಎಂಸಿ ನೀರು ತಗೋರಿ. ಮತ್ತ ಮಹದಾಯಿಯಿಂದ 20 ಟಿಎಂಸಿ ತಗೋರಿ. ಅದ್ರಾಗ ನೀವು ಕರಂಟ್ ಉತ್ಪಾದನೆ ಮಾಡಿಕೊಂಡು ಆ ನೀರನ್ನ ಮತ್ತೆ ಮಹದಾಯಿಗೆ ಬಿಡ್ರಿ”. ಇದು ಸರಿ ಇಲ್ಲೇನ? ಅಲ್ಲದೆ, ಈ ನ್ಯಾಯಾಧಿಕರಣ ಎಷ್ಟು ವರ್ಷ ಅಂತಾ ಮಾಡ್ತೀರಿ? ಯೋಜನೆ ಆರಂಭವಾದ 2-3 ವರ್ಷದೊಳಗ ಅದು ತೀರ್ಪು ಕೊಟ್ಟು ಮುಕ್ತಾಯ ಆಗಬೇಕು. ಅದ ಬಿಟ್ಟು ಇದ್ಯಾವ್ದಲ 50 ವರ್ಷದಿಂದ ಮುಂದುವರೆಸಿಕೊಂಡು ಕೂತಿದ್ದೀರಿ? 

ಇದನ್ನೇ ನಾನು ನಮ್ಮ ಪ್ರಧಾನಿ ಮನಮೋಹನ ಸಿಂಗರಿಗೆ ಪತ್ರ ಬರೆದು ಹೇಳಿದ್ದೆ. ಜೊತೆಯಲ್ಲಿ ಹೇಳಿದ್ದೆ, “ ನೀವು ನ್ಯಾಯಾಧಿಕರಣ ಮಾಡ್ಕೊಳ್ಳಿ. ಆದ್ರೆ, ಅದು ಮಹದಾಯಿಗೆ ಮಾತ್ರ ಸೀಮಿತ ಆಗಿರಲಿ. ಕಳಸ-ಬಂಡೂರಿ ರಾಜ್ಯಕ್ಕೆ ಸೇರಿದವು. ಅವನ್ನ ಹೊರಗಿಟ್ಟು ನ್ಯಾಯಾಧಿಕರಣ ಮಾಡ್ರಿ” ಅಂತ.

ಅಲ್ಲದೇ, ಎಲ್ಲ ಕಡೆ ಹೇಳ್ತಾರ, “ನ್ಯಾಯಾಧಿಕರಣದ ತೀರ್ಪು ಅಂತಿಮ. ಅದರ ಮೇಲೆ ಯಾರೂ ಮಾತನಾಡುವಂತಿಲ್ಲ" ಅಂತ. ನ್ಯಾಯಾಧಿಕರಣ ತೀರ್ಪು ಕೊಟ್ಟ ಮೇಲೂ ಕೆಲವ್ರು ಕೋರ್ಟಿಗೆ ಹೋಗ್ತಾರೆ ಅಂದ್ರೆ? ಹೇಳ್ರಲಾ, ಇದೇನು ಅಂತ? ನಮ್ಮ ದೇಶದ ವ್ಯವಸ್ಥೆ ಎಷ್ಟು ಹದಗೆಟ್ಟೈತೆ ಯೋಚುಸ್ರಲಾ!?

ಈ ಸುದ್ದಿ ಓದಿದ್ದೀರಾ?: ಅಪ್ರಬುದ್ಧ ರಾಜಕಾರಣ: ಮುಗಿಯದ ಮಹದಾಯಿ ರಗಳೆ; ಕೈಗೂಡದ ಕಳಸ-ಬಂಡೂರಿ ಕನಸು

ಇನೊಂದು ಮಾತೈತ್ರ; 1960ರಲ್ಲಿ ಈ ವಿದ್ಯುತ್ ಯೋಜನೆಗೆ ಚಿಂತನೆ ಮಾಡಿದ್ದಾಗ ನಮ್ಮಲ್ಲಿ ಕರಂಟಿನ ಬರ ಇತ್ತು. ಇವತ್ತೇನ್ರಲ, ಸೋಲಾರ ವಿದ್ಯುತ್, ಪವನ ವಿದ್ಯುತ್ ಅಂತಾ ನಮಗೆ ಸ್ಟಾಕ್ ಮಾಡಕ್ಕಾಗದೇ ಇರೋವಷ್ಟು ಕರಂಟ್ ಉತ್ಪಾದನೆ ಆಗ್ತಾ ಐತೆ. ಈಗ್ಯಾಕ ಬೇಕು ನಮಗೆ ಮಹದಾಯಿ ವಿದ್ಯುತ್? ನೂರು ಪಟ್ಟು ಹೆಚ್ಚು ವೆಚ್ಚ ಮಾಡಿ, ಇಡೀ ಯೋಜನೆ, ರೈತರು, ನೀರಾವರಿ, ಕೃಷಿ ಎಲ್ಲನೂ ಹಾಳು ಮಾಡಿ, ಬೇಕಿಲ್ಲದ ವಿವಾದ ತಲೆಮೇಲೆ ಹಾಕ್ಕೊಂಡು ರಾಜ್ಯನೇ ಹಾಳು ಮಾಡೋಕೆ ಹೊಂಟ್ರ, ನಾವು ನೀವು ಏನು ಮಾಡಬೇಕು ಹೇಳ್ರಲ?

ಈಗ ನಮ್ಮುಂದೆ ಇರೋದು ಒಂದೇ ದಾರಿ: ಈ ಅಪ್ರಬುದ್ಧ ರಾಜಕಾರಣಿಗಳಿಗೆ, ದುಡ್ಡು, ಅಧಿಕಾರ ಬಯಸೋ ಹೋರಾಟಗಾರಿಗೆ ಬುದ್ಧಿ ಕಲಿಸಬೇಕು ಅಂದ್ರ “ಮಾಡ್ರಲ ಇಲ್ಲಾ ಮಡೀರಲಾ” ಅನ್ನೋದೊಂದೇ. ಜನ ಅದಕ್ಕೆ ಸಿದ್ಧ ಆಗಬೇಕು ಅಷ್ಟೇ!

ನಿಮಗೆ ಏನು ಅನ್ನಿಸ್ತು?
0 ವೋಟ್