ಪಿಎಸ್‌ಐ ನೇಮಕಾತಿ ಹಗರಣ | ಆರೋಪಿಗಳಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ

  • 50 ಅಭ್ಯರ್ಥಿಗಳಿಗೆ ಪೊಲೀಸ್‌ ನೋಟಿಸ್‌ ಜಾರಿ
  • ನಿರೀಕ್ಷಣಾ ಜಾಮೀಜಿಗೆ ದಿವ್ಯಾ ಹಾಗರಿಗಿ ಅರ್ಜಿ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಿಗಿ ಸೇರಿದಂತೆ ಮೂವರು ಆರೋಪಿಗಳು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. 

545 ಪಿಎಸ್‌ಐ ಹುದ್ದೆಗಳಿಗೆ ನಡೆಸಲಾಗಿದ್ದ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡೆ, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯ ಹಾಗರಗಿ ನಾಪತ್ತೆಯಾಗಿದ್ದಾರೆ. ಅವರು ನಿರೀಕ್ಷಣಾ ಜಾಮೀನು ಕೋರಿ ಕಲಬುರ್ಗಿ ಜೆಎಫ್‌ಎಂಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಇತರ ಆರೋಪಿಗಳಾದ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಸಹಶಿಕ್ಷಕಿ ಅರ್ಚನಾ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಲ್ಬುರ್ಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಈ ವೇಳೆ, ಕೆಲವು ಅಭ್ಯರ್ಥಿಗಳಿಂದ ಲಕ್ಷಗಟ್ಟಲೆ ಲಂಚ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

ಪ್ರಕರಣದಲ್ಲಿ ದಿವ್ಯ ಹಾಗರಗಿ ಪತಿ ರಾಜೇಶ್‌, ಅಭ್ಯರ್ಥಿಗಳಾದ ಕಲಬುರ್ಗಿಯ ವೀರೇಶ್ ನಿಡಗುಂದಿ, ಅರುಣ್ ಪಾಟೀಲ, ರಾಯಚೂರಿನ ಪ್ರವೀಣ್ ಕುಮಾರ್, ಚೇತನ್ ನಂದಗಾಂವ ಹಾಗೂ ಪರೀಕ್ಷಾ ಮೇಲ್ವಿಚಾರಣೆಯಲ್ಲಿದ್ದ ಸುಮಾ, ಸಿದ್ದಮ್ಮ ಹಾಗೂ ಸಾವಿತ್ರಿ ಎಂಬುವವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆದರೆ, ದಿವ್ಯ ಹಾಗರಗಿ ಮಾತ್ರ ಇದುವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ.

ರಾಜೇಶ್ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲು ಕೋರ್ಟ್‌ ಆದೇಶಿಸಿದೆ.

ಇದನ್ನು ಓದಿದ್ದೀರಾ?: ಪಿಎಸ್‌ಐ ನೇಮಕಾತಿ ಅಕ್ರಮ | ನಿಷ್ಪಕ್ಷಪಾತ ತನಿಖೆ ಸಾಧ್ಯವೇ? ಪ್ರತಿಪಕ್ಷ ಮುಖಂಡರ ವಾದವೇನು?

50 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್:

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷೆಯಲ್ಲಿ ʼಟಾಪ್‌ 50ʼ ಹಂತದಲ್ಲಿರುವ ಐವತ್ತು ಮಂದಿ ಅಭ್ಯರ್ಥಿಗಳಿಗೆ ಸಿಐಡಿ ಪೊಲೀಸರು ನೋಟಿಸ್‌ ನೀಡಿದ್ದರು. ಏಪ್ರೀಲ್‌ 20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಬುಧವಾರ ಅಭ್ಯರ್ಥಿಗಳು ಪೊಲೀಸರ ಮುಂದೆ ಹಾಜರಾಗಿದ್ದರು. 

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಘವೇಂದ್ರ ಹೆಗಡೆ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಪ್ರಕಾಶ್ ರಾಥೋಡ್ ನೇತೃತ್ವದ ತಂಡ ಅಕ್ರಮದ ತನಿಖೆ ನಡೆಸುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್