ಆಹಾರ ಭದ್ರತೆ, ಸುರಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕ 10ನೇ ಸ್ಥಾನಕ್ಕೆ ಕುಸಿತ: ಬಿ ಕೆ ಹರಿಪ್ರಸಾದ್ ಆತಂಕ

  • 116 ದೇಶಗಳ ಪಟ್ಟಿಯಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ
  • 20 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ 10ನೇ ಸ್ಥಾನಕ್ಕೆ ಕುಸಿದಿದೆ

“ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ ಮುಂಚೂಣಿಯ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ, ಕರ್ನಾಟಕ 6ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿರುವುದು ಆತಂಕಕಾರಿ ವಿಷಯ” ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ.

“ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ (ಜಿಎಸ್ಐ) ಪ್ರಕಾರ 2020ರಲ್ಲಿ ಭಾರತ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿತ್ತು. ಈಗ ಈ ಪಟ್ಟಿಯಲ್ಲಿ 116 ದೇಶಗಳಿದ್ದರೆ, ಭಾರತ 101ನೇ ಸ್ಥಾನಕ್ಕೆ ಕುಸಿದಿದೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  

“ಕೈಗೆಟಕುವ ದರದಲ್ಲಿ ಆಹಾರ ಲಭ್ಯತೆ, ಗುಣಮಟ್ಟ, ಸುರಕ್ಷತೆ, ಗ್ರಾಹಕರ ಸಬಲೀಕರಣ, ಆಹಾರದ ತರಬೇತಿ ಮತ್ತು ಸಾಮರ್ಥ್ಯದ  ಮಾನದಂಡಗಳ ಆಧಾರದಲ್ಲಿ ರಾಜ್ಯಗಳಿಗೆ ಅಂಕ ನೀಡಲಾಗಿದೆ. ಆ ಪಟ್ಟಿಯ 20 ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ 10ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಇದ್ದ 6ನೇ ಸ್ಥಾನಕ್ಕಿಂತ ಈ ಬಾರಿ 10ನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ಇದು ರಾಜ್ಯದ ಭವಿಷ್ಯತ್ತಿನಲ್ಲಿ ಆಹಾರದ ಕೊರತೆಯ ಬಗ್ಗೆ ನೀಡುತ್ತಿರುವ ಸ್ಪಷ್ಟ ಎಚ್ಚರಿಕೆ ಸಂದೇಶ” ಎಂದು ಹೇಳಿದ್ದಾರೆ.

“ಜಾಗತಿಕವಾಗಿ ದೇಶದ ಹಸಿವು, ಆಹಾರದ ಕೊರತೆಯ ಪ್ರಮಾಣ ದಿನದಿಂದ ದಿನಕ್ಕೆ ಕಳಪೆಯಾಗುತ್ತಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಸಾಬೀತು ಮಾಡುತ್ತಿವೆ. ಕೈಗೆಟಕುವ ದರದಲ್ಲಿ ಆಹಾರ ವಿಚಾರದಲ್ಲಿ ಪಾಕಿಸ್ತಾನವು (52.6 ಅಂಕ) ಭಾರತಕ್ಕಿಂತ (50.2 ಅಂಕ) ಹೆಚ್ಚಿನ ಅಂಕ ಪಡೆದಿರುವುದು ನಿಜಕ್ಕೂ ಕೇಂದ್ರ ಸರ್ಕಾರದ ಅಸೆಡ್ಡೆತನಕ್ಕೆ ಹಿಡಿದ ಕೈಗನ್ನಡಿ” ಎಂದು ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ತಲೆ ಮೇಲೆ ಚಡ್ಡಿ ಹೊತ್ತ ಘಟನೆ| ಛಲವಾದಿ ನಾರಾಯಣಸ್ವಾಮಿ ವಿರುದ್ಧ ವ್ಯಾಪಕ ಖಂಡನೆ

“ರಾಜ್ಯ ಸರ್ಕಾರವೂ ಹಿರಿಯಣ್ಣನ ಚಾಳಿ ಎಂಬಂತೆ ಅಗತ್ಯ ಕ್ಷೇತ್ರಗಳ ಕಡೆಗೆ ಗಮನ ಹರಿಸದೇ ನಿರಂತರವಾಗಿ ಆಹಾರ ಸುರಕ್ಷತೆ ಹಾಗೂ ಭದ್ರತೆಯನ್ನು ನಿರ್ಲಕ್ಷ ಮಾಡಿರುವ ಕಾರಣಕ್ಕೆ ದೇಶದಲ್ಲಿ ಅತ್ಯಂತ ಕಳಪೆಮಟ್ಟಕ್ಕೆ ಇಳಿದಿದೆ” ಎಂದು ಕಿಡಿಕಾರಿದ್ದಾರೆ.

“ರಾಜ್ಯ  ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾದೀತು. ನಾಗರಿಕರ ಆಹಾರ ಕ್ರಮ ಆರೋಗ್ಯಕರವಾಗಿಲ್ಲ ಮತ್ತು ದೇಶದಲ್ಲಿ ಪೌಷ್ಟಿಕತೆಯ ಮಟ್ಟವು ಅತ್ಯಂತ ಕಳಪೆಯಾಗಿಯೇ ಮುಂದುವರಿದಿದೆ. ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದುಬಾರಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್