ಈ ದಿನ ವಿಶೇಷ| ʼಭಗತ್‌ ಸಿಂಗ್‌ʼ ಪಠ್ಯ ಕೈಬಿಟ್ಟಿಲ್ಲ ಎಂದು ಸುಳ್ಳು ಹೇಳಿದ ಸರ್ಕಾರ

10ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಜಿ. ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ ಪಠ್ಯವನ್ನು ಕೈಬಿಡಲಾಗಿದೆ. ಆದರೆ, ಕರ್ನಾಟಕ ಪಠ್ಯಪುಸ್ತಕ ಸಂಘ ಮತ್ತು ಕರ್ನಾಟಕ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ʼಭಗತ್‌ ಸಿಂಗ್‌ʼ ಪಾಠವನ್ನು ಕೈಬಿಟ್ಟಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಯಾವುದು ಸತ್ಯ? ಯಾವುದು ಸುಳ್ಳು? ದಾಖಲೆಗಳು ಹೇಳುವುದೇನು?...
Bhagat Singh

ಹತ್ತನೇ ತರಗತಿಯ ʼಸಿರಿ ಕನ್ನಡʼ ಪ್ರಥಮ ಭಾಷಾ ಕನ್ನಡ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಜಿ ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ ಪಾಠವನ್ನು ಕೈ ಬಿಡಲಾಗಿದೆ. ಆದರೆ, ಕರ್ನಾಟಕ ಪಠ್ಯಪುಸ್ತಕ ಸಂಘವು ʼಭಗತ್‌ ಸಿಂಗ್‌ ಗದ್ಯ ಪಾಠವನ್ನು ಕೈಬಿಟ್ಟಿರುವುದಿಲ್ಲʼ ಎಂದು ಸ್ಪಷ್ಟೀಕರಣ ನೀಡುವ ಮೂಲಕ ಹಸಿ ಸುಳ್ಳು ಹೇಳಿದೆ.

ರಾಜ್ಯ ಸರ್ಕಾರವು ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಕೆಲವು ಲೇಖಕರ ಪಠ್ಯಗಳನ್ನು ಕೈಬಿಟ್ಟು, ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣ ಸೇರ್ಪಡೆ ಮಾಡಿರುವುದಕ್ಕೆ ಶೈಕ್ಷಣಿಕ ಮತ್ತು ಚಿಂತನಾ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. 

ಈ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಸರ್ಕಾರದ ರಾಜ್ಯ ಪಠ್ಯಪುಸ್ತಕ ಸಂಘ ಸ್ಪಷ್ಟೀಕರಣ ಹೊರಡಿಸಿದ್ದು, “ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿದ್ದ ʼಭಗತ್‌ ಸಿಂಗ್‌ʼ ಗದ್ಯವನ್ನು ಕೈ ಬಿಟ್ಟು ʼಹೆಡಗೇವಾರ್ʼ ಗದ್ಯವನ್ನು ಸೇರಿಸಲಾಗಿದೆ ಎಂದು ಸುದ್ದಿ ಇರುತ್ತದೆ. ವಾಸ್ತವವಾಗಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಿಂದ ʼಭಗತ್‌ ಸಿಂಗ್‌ʼ ಪಾಠವನ್ನು ಕೈಬಿಟ್ಟಿರುವುದಿಲ್ಲ. ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಪಠ್ಯಪುಸ್ತಕವು ಮುದ್ರಣ ಹಂತದಲ್ಲಿದೆ,” ಎಂದು ವಿವರಿಸಿದೆ. 

ಹತ್ತನೇ ತರಗತಿಯ ಪರಿಷ್ಕೃತ ಸಿರಿ ಕನ್ನಡ ಪಠ್ಯಪುಸ್ತಕದ ಪಿಡಿಎಫ್‌ ಆವೃತ್ತಿ ಇಲ್ಲಿದೆ

“ಸಮಾಜ ವಿಜ್ಞಾನ ಮತ್ತು ಪಠ್ಯಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಿ, ಪರಿಷ್ಕರಿಸಲು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಲಾಗಿತ್ತು. ಈ ಸಮಿತಿ 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಮತ್ತು 1 ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಗಳನ್ನು ಪರಿಷ್ಕರಿಸಿರುತ್ತಾರೆ,” ಎಂದು ಕರ್ನಾಟಕ ಪಠ್ಯಪುಸ್ತಕ ಸಂಘ, ಶಿಕ್ಷಣ ಸಚಿವರಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಿದೆ. 

ಆದರೆ, ಹತ್ತನೇ ತರಗತಿಯ ʼಸಿರಿ ಕನ್ನಡʼ ಪ್ರಥಮ ಭಾಷಾ ಕನ್ನಡ ಪರಿಷ್ಕೃತ ಪಠ್ಯಪುಸ್ತಕದ ಪಿಡಿಎಫ್‌ ಪ್ರತಿ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, ಆ ಪುಸ್ತಕದಲ್ಲಿ ಜಿ. ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ ಪಠ್ಯ ಸೇರಿದಂತೆ ಪ್ರಮುಖ ಐವರು ಲೇಖಕರ ಪಠ್ಯಗಳನ್ನು ಕೈಬಿಡಲಾಗಿದೆ.

Image
Karnataka Textbook Society

ಶಿಕ್ಷಣ ಇಲಾಖೆಯ ಮೂಲಗಳಿಂದ ದೊರೆತ ಪರಿಷ್ಕೃತ ಪಠ್ಯಪುಸ್ತಕದ ಪಿಡಿಎಫ್‌ ಪ್ರತಿ ಪರಿಶೀಲಿಸಿದಾಗ ಭಗತ್‌ ಸಿಂಗ್‌ ಪಠ್ಯ ಕಾಣೆಯಾಗಿರುವುದು ದೃಢಪಟ್ಟಿದೆ. ಕಳೆದ ವರ್ಷದ 10ನೇ ತರಗತಿಯ ಪ್ರಥಮ ಭಾಷೆಯ ಕನ್ನಡ ಪುಸ್ತಕ ʼಸಿರಿ ಕನ್ನಡʼದಲ್ಲಿ ʼಭಗತ್‌ ಸಿಂಗ್‌ʼ ಪಠ್ಯ ಇದೆ. ಆದರೆ, ʼಸಿರಿ ಕನ್ನಡʼ ಪರಿಷ್ಕೃತ ಪಠ್ಯಪುಸ್ತಕದಲ್ಲಿ ʼಭಗತ್‌ ಸಿಂಗ್‌ʼ ಕುರಿತ ಪಠ್ಯವೇ ಇಲ್ಲ. ಆದರೂ ಕರ್ನಾಟಕ ಪಠ್ಯಪುಸ್ತಕ ಸಂಘ ʼಭಗತ್‌ ಸಿಂಗ್‌ʼ ಪಠ್ಯವನ್ನು ಕೈಬಿಟ್ಟಿರುವುದಿಲ್ಲ ಎಂದು ರಾಜಾರೋಷವಾಗಿ ಹಸಿ ಸುಳ್ಳನ್ನು ಹೇಳಿದೆ. (ಮೂಲ ಪಠ್ಯ ಮತ್ತು ಪರಿಷ್ಕೃತ ಪಠ್ಯದ ಪಿಡಿಎಫ್‌ ಪ್ರತಿ ಗಮನಿಸಿ)

ಹಾಗೆಯೇ, ವಿವಾದ ಭುಗಿಲೇಳುತ್ತಿದ್ದಂತೆ ರಾಜ್ಯ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲೂ ಪರಿಷ್ಕೃತ ಪಠ್ಯಪುಸ್ತಕ ಪ್ರತಿ ಲಿಂಕ್‌ ಅನ್ನು ಡಿಲಿಟ್‌ ಮಾಡಲಾಗಿದೆ. ಇದು ಸಹಜವಾಗಿಯೇ, ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಮತ್ತು ಪಠ್ಯಪುಸ್ತಕ ಸಂಘದ ನಡೆಯ ಬಗ್ಗೆ ಅನುಮಾನಕ್ಕೂ ಕಾರಣವಾಗಿದೆ.

ಪಠ್ಯ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ಭಗತ್‌ ಸಿಂಗ್‌ ಅವರ ಪಠ್ಯವನ್ನು ನಾವು ಕೈಬಿಟ್ಟಿರುವುದಿಲ್ಲ. ಭಗತ್‌ ಸಿಂಗ್‌ ಕುರಿತ ಪಠ್ಯವನ್ನು ಮತ್ತಷ್ಟು ವಿಸ್ತರಿಸಿ, ಹೊಸ ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಆದರೆ ಭಗತ್‌ ಸಿಂಗ್‌ ಪಠ್ಯವನ್ನು ಕೈ ಬಿಟ್ಟಿರುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಹೊಸ ಪುಸ್ತಕ ಇನ್ನೂ ನಮ್ಮ ಕೈ ಸೇರಿಲ್ಲ,” ಎಂದರು.

ಒಂದು ಕಡೆ ಕರ್ನಾಟಕ ಪಠ್ಯಪುಸ್ತಕ ಸಂಘ ಭಗತ್‌ ಸಿಂಗ್‌ ಪಠ್ಯ ಕೈಬಿಟ್ಟಿಲ್ಲ ಎಂದು ಅಧಿಕೃತ ಸ್ಪಷ್ಟನೆ ನೀಡುತ್ತದೆ. ಮತ್ತೊಂದು ಕಡೆ, ಭಗತ್‌ ಸಿಂಗ್‌ ಪಠ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂದು ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿ ಅಧ್ಯಕ್ಷರು ಹೇಳುತ್ತಾರೆ!. ಹಾಗಾದರೆ ಪರಿಷ್ಕೃತ ಪಠ್ಯಪುಸ್ತಕದಲ್ಲಿ  ಜಿ. ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ ಪಠ್ಯ ಬಿಟ್ಟು ಹೋಗಿದ್ದು ಹೇಗೆ? ಅಷ್ಟಾಗಿಯೂ ʼಭಗತ್‌ ಸಿಂಗ್‌ʼ ಪಠ್ಯವನ್ನು ಕೈಬಿಟ್ಟಿದ್ದರೂ, ʼಆ ಪಠ್ಯವನ್ನು ಕೈಬಿಡಲಾಗಿಲ್ಲʼ ಎಂದು ಸ್ಪಷ್ಟೀಕರಣ ನೀಡುವ ಪಠ್ಯಪುಸ್ತಕ ಸಂಘದ ವರಸೆ ಅಚ್ಚರಿ ಮೂಡಿಸಿದೆ.

ಪಠ್ಯ ಸೇರಿದ ಹೆಡಗೇವಾರ್‌ ಭಾಷಣ

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡಗೇವಾರ್ ಅವರ ಸಾರ್ವಜನಿಕ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ 10ನೆಯ ತರಗತಿಯ ʼಸಿರಿ ಕನ್ನಡʼ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ಐದನೆಯ ಪಾಠವಾಗಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎನ್ನುವ ಪಾಠವನ್ನು ಸೇರಿಸಲಾಗಿದೆ.

Image
SSLC Book
ಎಡಗಡೆ ಹಳೆ ಪುಸ್ತಕದ ಪರಿವಿಡಿ, ಬಲಗಡೆ ಪರಿಷ್ಕೃತ ಪುಸ್ತಕದ ಪರಿವಿಡಿ

ಪಠ್ಯದಿಂದ ಕೈಬಿಟ್ಟಿರುವ ವಿಷಯ

ಪತ್ರಕರ್ತ ಮತ್ತು ಲೇಖಕ ಪಿ ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’, ಸಾ ರಾ ಅಬೂಬಕ್ಕರ್‌ ಅವರ ‘ಯುದ್ಧ’, ಎ ಎನ್‌ ಮೂರ್ತಿ ರಾವ್‌ ಅವರ ‘ವ್ಯಾಘ್ರಗೀತೆʼ  ಶಿವಕೋಟ್ಯಾಚಾರ್ಯ ಅವರ ‘ಸುಕುಮಾರ ಸ್ವಾಮಿಯ ಕಥೆ’, ಸಮಿತಿ ರಚನೆಯಿಂದ ʼಸ್ವಾಮಿ ವಿವೇಕಾನಂದ ಚಿಂತನೆಗಳುʼ ಹಾಗೂ ಸಂಗ್ರಹದಿಂದ ಆಯ್ದ ʼಜಾನಪದ ಒಗಟುಗಳುʼ ಪಠ್ಯಗಳನ್ನು ಪರಿಷ್ಕೃತ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಹೆಡಗೇವಾರ್, ಸಾವರ್ಕರ್ ಯಾವ ಸ್ವಾತಂತ್ರ್ಯ ಹೋರಾಟಗಾರರು, ದಾಖಲೆ ಕೊಡಿ: ಪ್ರಿಯಾಂಕ್ ಸವಾಲು

ಪಠ್ಯ ಸೇರಿದ ಹೊಸ ಪಾಠಗಳು

ಡಾ. ಬನ್ನಂಜೆ ಗೋವಿಂದಾಚಾರ್ಯರ ʼಶುಕನಾಸನ ಉಪದೇಶʼ, ಶತಾವಧಾನಿ ಡಾ. ಆರ್‌ ಗಣೇಶ್‌ ಅವರ ʼಶ್ರೇಷ್ಠ ಭಾರತೀಯ ಚಿಂತನೆಗಳುʼ, ಎಂ ಗೋವಿಂದ ಪೈ ಅವರ ʼನಾನು ಪ್ರವಾಸ ಬಿಟ್ಟ ಕತೆʼ, ಶಿವಾನಂದ ಕಳವೆ ಅವರ ʼಸ್ವದೇಶೀ ಸೂತ್ರದ ಸರಳ ಹಬ್ಬʼ ಹಾಗೂ ಸಂಗ್ರಹದಿಂದ ʼಉದಾತ್ತ ಚಿಂತನೆಗಳುʼ ಪಠ್ಯಗಳನ್ನು ಹೊಸದಾಗಿ ಸೇರ್ಪಡಿಸಲಾಗಿದೆ.

Image
Hedagewar Lesson
ಪರಿಷ್ಕೃತ ಪುಸ್ತಕದಲ್ಲಿರುವ ಹೆಡಗೇವಾರ್‌ ಭಾಷಣದ ಪಠ್ಯ

ಒಂದು ಸಿದ್ಧಾಂತಕ್ಕೆ ಪಠ್ಯ ಸೀಮಿತವಾಗಿಲ್ಲ

"ಪಠ್ಯಗಳನ್ನು ವಿರೋಧಿಸುವವರು ಮೊದಲು ಪಠ್ಯಪುಸ್ತಕ ಓದಲಿ. ಆ ನಂತರ ಆಕ್ಷೇಪಗಳನ್ನು ವ್ಯಕ್ತಪಡಿಸಬೇಕು. ಒಂದು ಸೀಮಿತ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯ ರಚಿಸಿಲ್ಲ ಮತ್ತು ಯಾವುದೇ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡಿಲ್ಲ,” ಎಂದು ರೋಹಿತ್‌ ಚಕ್ರತೀರ್ಥ ಮಾಧ್ಯಮಗಳಿಗೆ ವಿವರಿಸಿದ್ದಾರೆ.

“ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಭಾಷಾ ದೃಷ್ಟಿಯಿಂದ ಪಠ್ಯದಲ್ಲಿ ನಾಟಕ ಸೇರಿದಂತೆ ವೈವಿಧ್ಯಮಯ ಸಂಗತಿಗಳಿಗೆ ಆದ್ಯತೆ ನೀಡಲಾಗಿದೆ. ಹೆಡಗೇವಾರ್‌ ಅವರನ್ನು ನಾವು ಸೈದ್ಧಾಂತಿಕ ದೃಷ್ಟಿಯಿಂದ ನೋಡಿಲ್ಲ. ಭಗತ್‌ ಸಿಂಗ್‌ ಬದಲಿಗೆ ಹೆಡಗೇವಾರ್‌ ಭಾಷಣ ಸೇರಿಲ್ಲ,” ಎಂದೂ ಹೇಳಿದ್ದಾರೆ. ಆದರೆ, 10ನೇ ತರಗತಿಯ ಕಳೆದ ವರ್ಷದ ಪಠ್ಯ ಪುಸ್ತಕ ಮತ್ತು ಪ್ರಸಕ್ತ ವರ್ಷದ ಪಠ್ಯಪುಸ್ತಕವನ್ನು ಗಮನಿಸಿದರೆ ಜಿ. ರಾಮಕೃಷ್ಣ ಅವರು ಬರೆದ ʼಭಗತ್‌ ಸಿಂಗ್‌ʼ ಪಠ್ಯವನ್ನು ಪರಿಷ್ಕೃತ ಪಠ್ಯಭಾಗದಿಂದ ಕೈಬಿಡಲಾಗಿದೆ.  

ಪಠ್ಯಪುಸ್ತಕಗಳು ಪಕ್ಷ ಪುಸ್ತಕವಲ್ಲ

“ಪಠ್ಯ ಪುಸ್ತಕಗಳು ಯಾವತ್ತಿಗೂ ಪಕ್ಷ ಪುಸ್ತಕಗಳಾಗಬಾರದು. ಯಾವುದೇ ಪಕ್ಷದ ಸರ್ಕಾರಗಳು ತಮ್ಮ ಕಾರ್ಯಸೂಚಿಗೆ ಪಠ್ಯ ಪುಸ್ತಕಗಳನ್ನು ಸಾಧನವಾಗಿ ಬಳಸಿಕೊಳ್ಳುವುದು ತಪ್ಪು. ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪೋಷಿಸಲು ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಎಂದಿಗೂ ಸಾಧನವಾಗಬಾರದು,” ಎಂದು ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷ ಮತ್ತು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ  ಈ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಈ ನಡುವೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸೋಮವಾರ ಪಠ್ಯಪುಸ್ತಕ ವಿವಾದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಯಾರೇ ವಿರೋಧಿಸಿದರೂ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿರುವ ಕೇಶವ ಬಲಿರಾಮ್‌ ಹೆಡಗೇವಾರ್ ಭಾಷಣ ಪಠ್ಯವನ್ನು ಹಿಂಪಡೆಯುವುದಿಲ್ಲ,” ಎಂದು ಹೇಳಿದ್ದರು.

ನಿಮಗೆ ಏನು ಅನ್ನಿಸ್ತು?
4 ವೋಟ್