ನಾಯಕರ ಮನೆ ಮೇಲೆ ಖಾದಿ ಧ್ವಜ, ಸಾಮಾನ್ಯರ ಮನೆ ಮೇಲೆ ಪಾಲಿಸ್ಟರ್ ಧ್ವಜ ಹಾರಾಟ; ಹಲವೆಡೆ ಧ್ವಜಸಂಹಿತೆ ಉಲ್ಲಂಘನೆ

har ghar tiranga
  • ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ, ಸಂಭ್ರಮದಲ್ಲಿ ಜನತೆ
  • ಹಲವೆಡೆ ರಾಷ್ಟ್ರಧ್ವಜಕ್ಕೆ ಅವಮಾನ, ಜಾಲತಾಣದಲ್ಲಿ ಟೀಕೆ

75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಮನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಿಸುವ ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಬೆನ್ನಲ್ಲೇ ಕೆಲವೆಡೆ ಹಾರಾಡುತ್ತಿರುವ ಧ್ವಜಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಚಿವರು, ಶಾಸಕರು ಹಾಗೂ ರಾಜಕೀಯ ನಾಯಕರು ತಮ್ಮ ತಮ್ಮ ಮನೆಗಳ ಮೇಲೆ ಖಾದಿ ಬಟ್ಟೆಯ ಧ್ವಜಗಳನ್ನು ಹಾರಿಸುತ್ತಿದ್ದರೆ, ಇತ್ತ ರಾಜ್ಯದ ಜನತೆ ಮಾತ್ರ ಪಾಲಿಸ್ಟರ್ ಧ್ವಜ ಹಾರಿಸುವಂತಾಗಿದೆ. 

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 13ರಿಂದ 15ರವರೆಗೆ ಎಲ್ಲರ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಿಸುವ ʼಹರ್ ಘರ್ ತಿರಂಗಾʼ ಅಭಿಯಾನ ಘೋಷಿಸಿದ್ದರು. ಇದಕ್ಕಾಗಿ ಚೀನಾ ದೇಶದಿಂದ ಭಾರತಕ್ಕೆ ಪಾಲಿಸ್ಟರ್ ಧ್ವಜಗಳನ್ನು ಆಮದು ಮಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಮನೆಗಳಿಗೂ ಹಂಚಲಾಗಿದೆ.

ಧ್ವಜ ಸಂಹಿತೆ ಉಲ್ಲಂಘನೆ

ಸರ್ಕಾರ ಹಂಚಿರುವ ಮತ್ತು ಜನರು ಮಾರುಕಟ್ಟೆಯಲ್ಲಿ ಖರೀದಿಸುತ್ತಿರುವ ಬಹುತೇಕ ಪಾಲಿಸ್ಟರ್‌ ಧ್ವಜಗಳಲ್ಲಿ ಧ್ವಜ ಸಂಹಿತೆ ಉಲ್ಲಂಘನೆಯಾಗಿರುವುದನ್ನು ಕಾಣಬಹುದು. ಧ್ವಜದ ಅಳತೆ ಯದ್ವಾತದ್ವಾ ಆಗಿದ್ದು, ಕೆಲವು ಧ್ವಜಗಳು ಏರುಪೇರಾಗಿವೆ. ಸೂಕ್ತವಾದ ಹೊಲಿಗೆಗಳನ್ನು ಧ್ವಜಗಳಿಗೆ ಹಾಕದೇ ಇರುವುದರಿಂದ ಧ್ವಜದ ಎಳೆಗಳು ಬಿಚ್ಚಿದ ರೀತಿಯಲ್ಲಿವೆ.

ಧ್ವಜಗಳ ಅವಮಾನ ಕುರಿತು ಮಾಚಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, "ಬಿಜೆಪಿಗರು ಮತ್ತು RSS ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ. ರಕ್ತ ಕೊಡಲಿಲ್ಲ, ಸ್ವಾತ್ಯಂತ್ರ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ತಿಳಿಯಲಿಲ್ಲ, ಆದರೆ ಇಂದು ತ್ರಿವರ್ಣ ಧ್ವಜವನ್ನೇ ಮಾರಾಟ ಮಾಡಲು ಹೊರಟಿರುವುದು ದುರ್ದೈವ” ಎಂದು ಕುಟುಕಿದ್ದಾರೆ.

Image
Flag

“ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಆದರೆ, ಇಂದು ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಸರ್ಕಾರವು ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಧ್ವಜಸಂಹಿತೆ ಬದಲಾಯಿಸಿ, ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದಾರೆ. ಪಾಲಿಸ್ಟರ್ ಧ್ವಜ ತಯಾರಿಸುತ್ತಿರುವುದು ರಿಲಯನ್ಸ್ ಗ್ರೂಪ್ ಆಗಿದ್ದು, ದೇಶಭಕ್ತಿಯನ್ನೂ ಬಿಜೆಪಿಯವರು ಅದಾನಿ ಮತ್ತು ಅಂಬಾನಿ ಕಂಪನಿಗೆ ಅಡ ಇಟ್ಟಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

“ಸರ್ಕಾರಿ ಅಧಿಕಾರಿಗಳನ್ನು ಸೇಲ್ಸ್ ಏಜೆಂಟ್‌ಗಳಾಗಿ ಬಳಕೆ ಮಾಡುತ್ತಿದ್ದಾರೆ. ಧ್ವಜಗಳ ಮಾರಾಟಕ್ಕೂ ಇವರು ಟಾರ್ಗೆಟ್ ಕೊಟ್ಟಿದ್ದಾರೆ. ಸರ್ಕಾರವೇ ಧ್ವಜಗಳನ್ನು ಖರೀದಿಸಿ, ಮಾರಾಟ ಮಾಡಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ʼಕಾಶ್ಮೀರಿ ಫೈಲ್ಸ್’ ಸಿನಿಮಾಗೆ ತೆರಿಗೆ ರಿಯಾಯ್ತಿ ಕೊಟ್ಟರು. ಅನೇಕ ಶಾಸಕರು ಚಿತ್ರವನ್ನು ಉಚಿತವಾಗಿ ತೋರಿಸಿದರು. ಆದರೆ ಈಗ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡದೆ ಮಾರಾಟ ಮಾಡುತ್ತಿದ್ದಾರೆ. ಇಂತಹವರಿಂದ ದೇಶಭಕ್ತಿ ಬಗ್ಗೆ ಪಾಠ ಕೇಳುವ ಅವಶ್ಯಕತೆ ಇಲ್ಲ” ಎಂದು ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದೆಂದು ಹೇಳುವಷ್ಟು ನಾವು ಮೂರ್ಖರಲ್ಲ: ಡಿಕೆಶಿ

ಮಂಗಳೂರಿನಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್‌ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ತಂದು, ಧ್ವಜ ತಯಾರಿಸಲು ಖಾದಿ ಬದಲು ಪಾಲಿಸ್ಟರ್‌ ಬಟ್ಟೆ ಬಳಸಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದು ಸ್ವಾತಂತ್ರ್ಯ ಚಳವಳಿಗೆ ಮಾಡಿದ ಅವಮಾನ” ಎಂದು ದೂರಿದ್ದಾರೆ.

“ದೇಶದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವಾಗ ಖಾದಿಗೆ ಇನ್ನಷ್ಟು ಮಹತ್ವ ಸಿಗುವಂತಹ ಕಾರ್ಯಕ್ರಮ ರೂಪಿಸಬೇಕಿತ್ತು. ಪ್ರತಿಯೊಬ್ಬರೂ ಖಾದಿ ತೊಡುವಂತೆ ದೊಡ್ಡ ಮಟ್ಟದ ಸಂದೇಶವನ್ನು ಕೇಂದ್ರ ಸರ್ಕಾರ ನೀಡಬೇಕಿತ್ತು. ಸರ್ಕಾರದ ಬಾಯಲ್ಲಿ ಸ್ವದೇಶಿ ಮಂತ್ರ, ಆದರೆ, ಪಾಲಿಸುವುದು ಮಾತ್ರ ವಿದೇಶಿ ತಂತ್ರ. ರಾಷ್ಟ್ರಧ್ವಜ ತಯಾರಿಸಲು ಪಾಲಿಸ್ಟರ್‌ ಬಟ್ಟೆಯನ್ನು ಚೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಚೀನಾದವರಿಗೆ ಹಾಗೂ ದೇಶದ ದೊಡ್ಡ ಬಟ್ಟೆ ವ್ಯಾಪಾರಿಗಳಿಗೆ ಮಾತ್ರ ಪ್ರಯೋಜನ. ಒಂದು ಕಡೆ ಚೀನಾ ನಮ್ಮ ದೇಶವನ್ನು ಆಕ್ರಮಣ ಮಾಡುತ್ತಿದೆ ಎಂಬ ಕಾರಣಕ್ಕೆ ಆ ದೇಶದ ಮೊಬೈಲ್‌ ಆ್ಯಪ್‌ಗಳ ಬಳಕೆಗೆ ಕೇಂದ್ರವು ನಿರ್ಬಂಧ ಹೇರುತ್ತದೆ. ಸರ್ಕಾರದ ನೀತಿಯಲ್ಲಿಯೇ ಸ್ಪಷ್ಟತೆ ಇಲ್ಲ” ಎಂದು ಜರಿದಿದ್ದಾರೆ.

ಹಲವೆಡೆ ಧ್ವಜಗಳಿಗೆ ಅವಮಾನ

ತಿರಂಗಾ ಅಭಿಯಾನ ಟೀಕೆಗೊಳಪಡುತ್ತಿರುವ ಬೆನ್ನಲ್ಲೇ ಹಲವೆಡೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆಗಳು ಕೂಡ ವರದಿಯಾಗಿವೆ. ತೀರ್ಥಹಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ತಮಗಿಂತಲೂ ಕಡಿಮೆ ಎತ್ತರದಲ್ಲಿ ಹಾರಿಸಿ ಅವಮಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್