
- ಭೂಸ್ವಾಧೀನ ವಿರೋಧಿಸಿ ರೈತರ ಅನಿರ್ಧಿಷ್ಟಾವಧಿ ಧರಣಿ
- ಭೂ ಕಬಳಿಕೆ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಭೂ ಸ್ವಾಧೀನ ಪ್ರಕ್ರಿಯೆಯ ವಿರುದ್ದ ರೈತರು ನಾಡಕಚೇರಿಯ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಅವರ ಹೋರಾಟವು 14ನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೆಐಎಡಿಬಿ ಆರಂಭಿಸಿದೆ. ಅದಕ್ಕಾಗಿ ಹಲವು ರೈತರಿಗೆ ನೋಟಿಸ್ ನೀಡಿದೆ.
ಇದನ್ನು ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಚನ್ನರಾಯಪಟ್ಟಣ ನಾಡಕಚೇರಿ ಎದರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿರುವುದರ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಹೋರಾಟ ಸಮಿತಿಯು ಬೈಕ್ ರ್ಯಾಲಿ ನಡೆಸುತ್ತಿದೆ.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್ ಚಂದ್ರತೇಜಸ್ವಿ ಭಾಗವಹಿಸಿ, ಮಾತನಾಡಿದ್ದಾರೆ. "ಕೆಐಎಡಿಬಿಯು ಭೂ ಮಾಫಿಯಾ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯವರೆಗೂ ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ ಶೇ.50 ರಷ್ಟು ಭೂಮಿ ಖಾಲಿ ಬಿದ್ದಿದೆ. ಆ ಸ್ಥಳಗಳಲ್ಲಿ ಕಾರ್ಖಾನೆ ನಿರ್ಮಿಸಬಹುದು. ಆದರೆ ಅದನ್ನು ಬಿಟ್ಟು ಫಲವತ್ತಾದ ಕೃಷಿ ಭೂಮಿಯನ್ನು ವಶಕ್ಕೆ ಪಡೆದು ಬಂಡವಾಳಶಾಹಿ ಕಂಪನಿಗಳಿಗೆ ಮಾರಲು ಮುಂದಾಗಿದೆ. ಇದು ಅಕ್ಷಮ್ಯ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬೆಂಗಳೂರು ಸುತ್ತ-ಮುತ್ತಲ ಭೂಮಿಗೆ ಬಂಗಾರದ ಬೆಲೆಯಿದೆ. ಒಂದು ಎಕರೆಯಲ್ಲಿ ಕಾರ್ಖಾನೆ ನಿರ್ಮಿಸಲು 20 ಎಕರೆ ವಶಪಡಿಸಿಕೊಂಡು, ತಡೆಗೋಡೆ ಹಾಕಿಕೊಳ್ಳುತ್ತಾರೆ. ನಂತರ ಅದನ್ನು ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಉಳುಮೆ ಭೂಮಿಯನ್ನು ಕಬಳಿಸಲು ರೈತರು ಬಿಡಬಾರದು" ಎಂದು ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಾರ್ಮಿಕರಿಗಾಗಿ ʼಶ್ರಮಿಕರ ಕ್ಲಿನಿಕ್ʼ ತೆರೆದ ಸಿಐಟಿಯು
"ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ದಲಿತರು ಶವಸಂಸ್ಕಾರ ಮಾಡಲು ಸ್ಮಶಾನಗಳಿಲ್ಲ. ಇತ್ತೀಚಿಗೆ ದಲಿತನ ಶವ ಊಳಲು ಸ್ಮಶಾನವಿಲ್ಲದೆ, ಗ್ರಾಮ ಪಂಚಾಯತಿ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಅಲ್ಲದೆ, ಕೆರೆಯ ಪಕ್ಕದ ಸರ್ಕಾರಿ ಭೂಮಿಯಲ್ಲಿ ಸಂಸ್ಕಾರ ಮಾಡಿದ ಅನೇಕ ಘಟನೆಗಳು ಕಣ್ಣಮುಂದಿವೆ. ಸ್ಮಶಾನಕ್ಕೆ, ಸರ್ಕಾರಿ ಶಾಲೆ, ವಸತಿ ಶಾಲೆಗಳಿಗೆ, ಆಸ್ಪತ್ರೆ ನಿರ್ಮಾಣ ಕಾಮಗಾರಿಗಳಿಗೆ ಸ್ಥಳ ಅಭಾವವಿದೆ. ಇದೆಲ್ಲವನ್ನೂ ಬಿಟ್ಟು, ರೈತ ವಿರೋಧಿ ನೀತಿ ಅನುಸರಿಸುವ ಬಹುರಾಷ್ಟ್ರೀಯ ಕಂಪನಿಗಳಿಗೆ ಫಲವತ್ತಾದ ಉಳುಮೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವುದು ಆತಂಕಕಾರಿ. ರೈತರು ಹೋರಾಟದ ಮೂಲಕವೇ ಭೂಮಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ" ಎಂದು ಚಂದ್ರತೇಜಸ್ವಿ ಹೇಳಿದ್ದಾರೆ.
ರ್ಯಾಲಿಯಲ್ಲಿ ಹೋರಾಟ ಸಮಿತಿಯ ಕಾರಹಳ್ಳಿ ಶ್ರೀನಿವಾಸ್, ನಂಜಪ್ಪ, ಮಾರೇಗೌಡ ಸೇರಿದಂತೆ ನೂರಾರು ರೈತರು, ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.