ದುಬಾರಿ ದುನಿಯಾ| ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ಮನವಿ

  •   ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಹಾಲಿನ ದರ ಏರಿಕೆ
  •   ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಜನರಿಗೆ ಮತ್ತೊಂದು ಬರೆ ಬೀಳಲಿದೆ

ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.

ಸದ್ಯ ಮೇ 1ರಿಂದಲೇ ಪರಿಷ್ಕೃತ ದರ ಹೆಚ್ಚಾಗುವ ಸಾಧ್ಯತೆ ಇದೆ. ಅಮೂಲ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಹಾಲಿನ ದರವನ್ನ ಹೆಚ್ಚಿಸಿವೆ. ನಂದಿನಿ ಹಾಲಿನ ದರಕ್ಕಿಂತ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್ ಗೆ 8ರಿಂದ 10 ರೂ. ಹೆಚ್ಚಾಗಿದೆ. ಹಾಗಾಗಿ ನಂದಿನಿ ಹಾಲಿನ ದರವನ್ನು ಕೂಡ ಲೀಟರ್ ಗೆ ಮೂರು ರೂ. ಹೆಚ್ಚಿಸುವಂತೆ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, "ಈ ಹಿಂದೆ ಕರ್ನಾಟಕದಲ್ಲಿ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ ಐದು ರೂಪಾಯಿ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದವು. ಆದರೆ, ಒಂದೇ ಬಾರಿಗೆ ಇಷ್ಟು ದರ ಏರಿಕೆಯಾದರೆ ಗ್ರಾಹಕರಿಗೆ ತೊಂದರೆಯಾಗಬಹುದೆಂದು ಸದ್ಯ ಮೂರು ರೂಪಾಯಿ ಹೆಚ್ಚಿಸಲು ಮನವಿ ಮಾಡಲಾಗಿದೆ" ಎಂದು ಹೇಳಿದರು.

    ಇದನ್ನು ಓದಿದ್ದೀರಾ? ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಗಾದಿ ಅಂದ್ರ ಕುಂದಾಪ್ರ ಗಾದಿ, ಜನ ಅಂದ್ರ ಕುಂದಾಪ್ರ ಜನ

"ಹಾಲಿನ ಬೆಲೆ ಹೆಚ್ಚಿಸಬೇಕೆಂದು ಹಲವು ತಿಂಗಳಿಂದ ಕೆಎಂಎಫ್, ಸರ್ಕಾರದ ಬಳಿ ಮನವಿ ಮಾಡುತ್ತಾ ಬಂದಿದೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಾಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಎಲ್ಲಾ ವೆಚ್ಚಗಳೂ ಶೇ.30ರಷ್ಟು ಹೆಚ್ಚಿದೆ. ಹೀಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್ ಬೇಡಿಕೆ ಇಟ್ಟಿದೆ" ಎಂದರು.

“ಈ ಬಾರಿಯಾದರೂ ಸರ್ಕಾರ ಮೂರು ರೂಪಾಯಿ ದರ ಏರಿಕೆಗೆ ಒಪ್ಪಿಗೆ ನೀಡಿದರೆ, ಅದರಲ್ಲಿ ಎರಡು ರೂಪಾಯಿ ರೈತರಿಗೆ ಮತ್ತು ಒಂದು ರೂಪಾಯಿ ಹಾಲು ಒಕ್ಕೂಟಗಳಿಗೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಸದ್ಯ ಬಾಲಚಂದ್ರ ಜಾರಕಿಹೊಳಿ ನೀಡಿರುವ ಮನವಿ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ. "ಈ ವಿಚಾರದ ಬಗ್ಗೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು” ಹೇಳಿದ್ದಾರೆ.

ಜನರು ಈಗಾಗಲೇ ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ದೈನಂದಿನ ಪದಾರ್ಥಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಇದರ ಜೊತೆಗೆ ಈಗ ಹಾಲಿನ ಬೆಲೆ ಏರಿಕೆ. ತಿಂಗಳುಗಳಿಂದ ಕೇಳಿ ಬರುತ್ತಿರುವ ಈ ಬೆಲೆ ಏರಿಕೆ ಬೇಡಿಕೆಗೆ ಈ ಬಾರಿ ಸರ್ಕಾರ ಸಹಮತ ಸೂಚಿಸುವ ಸಾಧ್ಯತೆಗಳಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಜನರಿಗೆ ಮತ್ತೊಂದು ಬರೆ ಬೀಳಲಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app