ಕೊಡಗು | 150ಕ್ಕೂ ಹೆಚ್ಚು ಬುಡಕಟ್ಟು ಕುಟುಂಬ ಒಕ್ಕಲೆಬ್ಬಿಸಲು ಹುನ್ನಾರ?

  • 'ದೇವರ ಕಾಡು' ಎಂದು ಒಕ್ಕಲೆಬ್ಬಿಸಲು ದೇವಸ್ಥಾನ ಸಮಿತಿ ಸಂಚು; ಆರೋಪ
  • ಹಾಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಂತೆ 20 ವರ್ಷಗಳಿಂದ ತಡೆ

“ನಮ್ಮ ಅಜ್ಜನ ಕಾಲದಿಂದಲೂ ಇದೇ ಹಾಡಿಯಲ್ಲಿ ವಾಸವಿದ್ದೇವೆ, ಇದನ್ನು ಬಿಟ್ಟರೆ ನಮಗೆ ಬೇರೆ ಜಾಗವಿಲ್ಲ. ಈಗ ಇಲ್ಲಿನ ದೇವಸ್ಥಾನ ಸಮಿತಿಯವರು, ‘ಇದು ದೇವರ ಕಾಡು, ಅರಣ್ಯ ರಕ್ಷಣೆಗಾಗಿ ಇಲ್ಲಿಂದ ಬಿಟ್ಟು ಹೋಗಿ’ ಎಂದು ಹೇಳುತ್ತಿದ್ದಾರೆ. ನಮ್ಮ ನೆಲೆ ಬಿಟ್ಟು ಎಲ್ಲಿಗೆ ಹೋಗಬೇಕು ನೀವೇ ಹೇಳಿ?”

- ಹೀಗೆಂದು ನೋವಿನಿಂದ ನುಡಿದವರು ದೇವರಪುರ ಗಿರಿಜನ ಹಾಡಿಯ ಆದಿವಾಸಿ ಸುಬ್ರಮಣಿ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಪುರ ಗಿರಿಜನ ಹಾಡಿಯ ಜನರಲ್ಲಿ ಉಂಟಾಗಿರುವ ಆತಂಕಕ್ಕೆ ಈ ಯುವಕನ ಮಾತುಗಳೇ ನಿದರ್ಶನ.

ದೇವರಪುರ ಗಿರಿಜನ ಹಾಡಿಯಲ್ಲಿ ‘ಪಂಜರಿ’, ‘ಯರವ’, ‘ಫಣಿ ಯರವ’, ‘ಜೇನು ಕುರುಬ’ ಮತ್ತು ‘ಬೆಟ್ಟ ಕುರುಬ’ ಬುಡಕಟ್ಟು ಸಮುದಾಯದ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಬಹುತೇಕರು ಸುತ್ತಮುತ್ತಲಿನ ಕಾಫಿ ಎಸ್ಟೇಟ್‌ಗಳಿಗೆ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಹಾಡಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿಗೆ ಟಾರ್ಪಲ್ ಹೊದಿಕೆಗಳೇ ಆಸರೆಯಾಗಿದೆ. ಕೆಲವನ್ನು ಬಿಟ್ಟರೆ ಹಾಡಿಯ ಬಹುತೇಕ ಮನೆಗಳು ಬೀಳುವ ಸ್ಥಿತಿಯಲ್ಲಿವೆ.

ಏನಿದು ವಿವಾದ? 
ಸುಮಾರು 70 ವರ್ಷಗಳಿಂದ ಆದಿವಾಸಿ ಕುಟುಂಬಗಳು ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.8/1 ಮತ್ತು 8/2ರಲ್ಲಿ ಮನೆ ಕಟ್ಟಿಕೊಂಡು ವಾಸ ಇವೆ. 40 ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜೆ ಎ ಕರುಂಬಯ್ಯ ಹಾಗೂ ಸದಸ್ಯರಾಗಿದ್ದ ಸಿ ಎಸ್ ಅರುಣ್ ಮಾಚಯ್ಯ ಅವರು ಗಿರಿಜನರಿಗೆ ಗುಡಿಸಲು ಹಾಕಿಕೊಂಡು ವಾಸಿಸಲು ಅಲ್ಲಿ ಅವಕಾಶ ಮಾಡಿಕೊಟ್ಟಿದ್ದರು.

ಇದೇ ಗ್ರಾಮದ ಅಯ್ಯಪ್ಪ ಭದ್ರಕಾಳಿ ದೇವಸ್ಥಾನ ಸಮಿತಿ ಕೆಲವು ವರ್ಷಗಳಿಂದ ʼಇದು ದೇವರ ಕಾಡು, ನಮಗೆ ಸೇರಿದ ಜಾಗʼ ಎಂದು ನ್ಯಾಯಾಲಯದಲ್ಲಿ ತಕರಾರು ತೆಗೆಯಿತು. ಈ ವಿವಾದದ ಕುರಿತ ತೀರ್ಪು 2007ರಲ್ಲೇ ಪ್ರಕಟವಾಗಿದೆ. ಸುಮಾರು 20 ವರ್ಷಗಳಿಂದ ದೇವರಪುರ ಹಾಡಿಗೆ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರದಿಂದ ಯಾವುದೇ ನಾಗರಿಕ ಸೌಲಭ್ಯ ನೀಡದಂತೆ ತಡೆಯಾಜ್ಞೆ ನೀಡಲಾಗಿದೆ. ಈ ಕಾರಣದಿಂದ ಬುಡಕಟ್ಟು ಸಮುದಾಯ ವಾಸಿಸುವ ದೇವರಪುರ ಹಾಡಿ ಸೌಲಭ್ಯಗಳಿಂದ ವಂಚಿತವಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

Image

ಆದಿವಾಸಿಗಳಿಗೆ ಕಳ್ಳರ ಪಟ್ಟ

ದೇವರಪುರ ಆದಿವಾಸಿಗಳು ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸುತ್ತಮುತ್ತಲಿನ ಕಾಫಿ ಎಸ್ಟೇಟ್‌ಗಳಿಗೆ ಕೂಲಿಗೆ ಹೋಗುತ್ತಿದ್ದ ಅವರು, ಇತ್ತೀಚಿನ ಕೆಲವು ವರ್ಷಗಳಿಂದ ಹಾಡಿಗೆ ಬರುವ ಪಿಕ್ ಅಪ್ ವಾಹನಗಳನ್ನು ಏರಿ ತಮಗೆ ಇಷ್ಟ ಬಂದ ಮಾಲೀಕರ ಎಸ್ಟೇಟ್‌ಗಳಿಗೆ ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದರು. ಈ ಕಾರಣದಿಂದ ಇಲ್ಲಿನ ಆದಿವಾಸಿಗಳು ಕೆಲವು ಕಾಫಿ ಎಸ್ಟೇಟ್ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇತ್ತೀಚೆಗೆ ಧರ್ಮಸ್ಥಳ ಸಹಕಾರಿ ಸಂಘ ಹಾಗೂ ಖಾಸಗಿ ಫೈನಾನ್ಸ್ ಸಂಘಗಳಿಂದ ಸಾಲ ಪಡೆದಿರುವ ಕೆಲವು ಆದಿವಾಸಿಗಳು ಬೈಕ್, ಆಟೋ ಇತ್ಯಾದಿ ಖರೀದಿಸಿದ್ದಾರೆ. ಆದರೆ, “ಕಾಡಿನ ಮರಮುಟ್ಟುಗಳನ್ನು ಕಳ್ಳತನ ಮಾಡಿ, ಅದನ್ನು ಮಾರಾಟ ಮಾಡಿ ಬಂದ ಹಣದಿಂದ ವಾಹನಗಳನ್ನು ಖರೀದಿ ಮಾಡಿದ್ದಾರೆ” ಎಂದು ಕೆಲವು ಎಸ್ಟೇಟ್ ಮಾಲೀಕರು ತಮ್ಮ ವಿರುದ್ಧ ಕಳ್ಳತನದ ಆರೋಪ ಹೊರಿಸಿದ್ದಾರೆ ಎಂದು ಹಾಡಿ ಜನರು ಹೇಳುತ್ತಾರೆ.

“ಮೇಲ್ವರ್ಗದ ಕೆಲವರು ಮತ್ತು ಹಿರಿಯ ಅಧಿಕಾರಿಗಳು ನಾವು ಬೀಟೆ ಇತ್ಯಾದಿ ಬೆಲೆ ಬಾಳುವ ಮರಗಳನ್ನು ಕದಿಯುತ್ತೇವೆ. ಕಾಡನ್ನು ನಾಶ ಮಾಡುತ್ತೇವೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಜತೆಗೆ ಅವರು ನೀಡುವ ಕಡಿಮೆ ದಿನಗೂಲಿಗೆ ಕೆಲಸ ಮಾಡುವಂತೆ ಒತ್ತಡ ಹೇರುತ್ತಾರೆ. ಇದರಿಂದಾಗಿ ನಾವು ಬದುಕು ನಡೆಸುವುದೇ ಕಷ್ಟವಾಗಿದೆ” ಎಂದು ಸುಬ್ರಮಣಿ ತಮ್ಮ ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕನಿ‍‍‍‍‍‍‍ಷ್ಠ ಸೌಕರ್ಯಗಳಿಲ್ಲದೆ ಬದುಕುತ್ತಿವೆ 49 ಆದಿವಾಸಿ ಕುಟುಂಬಗಳು

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇವೆ

ದೇವರಪುರ ಹಾಡಿಯ ಆದಿವಾಸಿ ಸುಬ್ರಮಣಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮ್ಮ ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ಇಲ್ಲಿನ ಬೇಟೆ ಕುರುಬ ಮತ್ತು ಅಯ್ಯಪ್ಪ ದೇವಸ್ಥಾನದ ಹೆಸರಿನಲ್ಲಿ ಕಮಿಟಿ ಮಾಡಿಕೊಂಡಿದ್ದಾರೆ. ಇವರು ನಾವು ವಾಸವಿರುವ ಜಾಗ ದೇವಸ್ಥಾನದ ಕಮಿಟಿಗೆ ಸೇರಬೇಕು ಎಂದು ವಿರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ಏಕಪಕ್ಷೀಯವಾಗಿ ತೀರ್ಮಾನ ಆಗುವಂತೆ ಮಾಡಿದ್ದಾರೆ. ಈ ರೀತಿ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಹುನ್ನಾರ ಮಾಡಿದ್ದಾರೆ” ಎಂದು ಆರೋಪಿಸಿದರು.

“ನಾವು ಬಡವರು, ಅವಿದ್ಯಾವಂತರು. ನಮಗೆ ಯಾವುದೇ ಕಾನೂನು ತಿಳಿವಳಿಕೆ ಇಲ್ಲದ್ದರಿಂದ ನಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಎದುರಿಸಲಾಗದೇ ನಾವೀಗ ಅತಂತ್ರ ಸ್ಥಿತಿಯಲ್ಲಿದ್ದೇವೆ. ಆದರೆ ನಾವು ವಾಸ ಮಾಡುತ್ತಿರುವ ಜಾಗ ಸರ್ಕಾರಿ ಜಾಗ. ಜಾಗದ ಹಕ್ಕು ಕೋರಿ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದೇವೆ” ಎಂದು ಹೇಳಿದರು.

“ಒಟ್ಟು 150 ಎಕರೆ ಪೈಕಿ 40 ಎಕರೆಯಲ್ಲಿ ಮಾತ್ರ ನಾವು ವಾಸ ಮಾಡುತ್ತಿದ್ದೇವೆ. ಕೆಲವು ಮಾಲೀಕರು ಇದೇ ಜಾಗದಲ್ಲಿ ತೋಟ ಮಾಡಿಕೊಂಡಿದ್ದಾರೆ. ಸ್ಥಳೀಯ ಮಾಲೀಕರು ತಮ್ಮ ಮನೆಗೆ ಕೆಲಸಕ್ಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ಒಕ್ಕಲೆಬ್ಬಿಸಲು ಈ ರೀತಿ ಮಾಡುತ್ತಿದ್ದಾರೆ. ನಾವು ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ಇಲ್ಲಿಯೇ ವಾಸವಿದ್ದೇವೆ” ಎಂದು ತಿಳಿಸಿದರು.

“ಹಾಡಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಲು ಬಿಡುತ್ತಿಲ್ಲ. ಅಧ್ಯಕ್ಷರು ಮತ್ತು ಪಿಡಿಒಗಳಿಗೆ ನಿಮ್ಮ ವಿರುದ್ಧವೇ ಕೇಸು ಹಾಕಿಸುತ್ತೇವೆ ಎಂದು 2006ರಿಂದಲೇ ಬೆದರಿಕೆ ಹಾಕುತ್ತಿದ್ದಾರೆ. ಕುಡಿಯುವ ನೀರಿಗೆ ಮೊದಲೇ ಒಂದು ಬಾವಿ ಇತ್ತು, ಏಳು ವರ್ಷದ ಹಿಂದೆ ಒಂದು ಕೊಳವೆ ಬಾವಿ ಕೊರೆಸಿಕೊಟ್ಟಿದ್ದಾರೆ. ಅದರಿಂದಲೇ ಇಡೀ ಊರಿನ ಜನ ನೀರು ಕುಡಿಯಬೇಕಿದೆ” ಎಂದರು.

Image

ಮನೆ ಕಂದಾಯ ಕಟ್ಟಿಸಿಕೊಳ್ಳಲೂ ಬಿಡುತ್ತಿಲ್ಲ

“ದೇವಸ್ಥಾನ ಸಮಿತಿಯವರು ಹಾಡಿಯಲ್ಲಿ ಸರ್ಕಾರದಿಂದ ಯಾವುದೇ ಕೆಲಸ ಮಾಡದಂತೆ ಅಡ್ಡಿಪಡಿಸುತ್ತಿದ್ದಾರೆ. ಯಾರೇ ಕಾಮಗಾರಿ ನಡೆಸಲು ಹೋದರೂ ಅವರ ವಿರುದ್ಧ ಕೇಸು ಹಾಕಿಸುವುದಾಗಿ ಹೇಳುತ್ತಾರೆ. ಸುಮಾರು 20 ವರ್ಷಗಳಿಂದ ಇದೇ ಸಮಸ್ಯೆ ಇದೆ” ಎಂದು ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ ಈ ದಿನ.ಕಾಮ್ಗೆ ತಿಳಿಸಿದರು.

“ಯಾವುದೇ ಸೌಲಭ್ಯ ಕೊಡದಿದ್ದರೆ ಹಾಡಿಯ ಜನರು ತಾವಾಗಿಯೇ ಜಾಗ ಖಾಲಿ ಮಾಡುತ್ತಾರೆ ಎಂದು ಸೌಲಭ್ಯಗಳಿಗೆ ತಡೆವೊಡ್ಡಲಾಗುತ್ತಿದೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಪಂಚಾಯಿತಿಗೆ ಯಾವುದೇ ನೋಟಿಸ್ ಬಂದಿಲ್ಲ” ಎಂದು ಶಾರದಾ ಅವರು ಹೇಳಿದರು.

“ಹಿಂದೆ ಪರಮೇಶ್ ಎಂಬುವವರು ಅಧ್ಯಕ್ಷರಾಗಿದ್ದಾಗ ಅವರಿಗೆ ನೋಟಿಸ್ ಬಂದಿತ್ತಂತೆ. ಅವರು ಅ ನೋಟಿಸನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೊಳವೆ ಬಾವಿ ತೆಗೆಸಿ ಕುಡಿಯುವ ನೀರಿಗೆ ಅನುಕೂಲ ಮಾಡಿದ್ದರು. ಕುಡಿಯುವ ನೀರಿನ ಎರಡನೇ ಹಂತದ ಕಾಮಗಾರಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ” ಎಂದು ವಿವರಿಸಿದರು.

“ತುಂಬಾ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹಾಡಿಯಲ್ಲಿ ವಾಸಿಸುವ ಬಹುತೇಕರ ಬಳಿ ಹಕ್ಕುಪತ್ರ ಇಲ್ಲ. ಹಕ್ಕುಪತ್ರಗಳನ್ನು ಕೊಡಬಾರದು ಎಂದು ನಿಲ್ಲಿಸಿದ್ದಾರೆ. ದಾಖಲೆಗಳು ಇಲ್ಲದ ಕಾರಣ ಸರ್ಕಾರದಿಂದ ಮನೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಕಟ್ಟಿದ ರಶೀದಿಯನ್ನೇ ಮುಂದೆ ದಾಖಲೆಯಾಗಿ ನೀಡುತ್ತಾರೆ ಎಂಬ ಕಾರಣದಿಂದ ಮನೆ ಕಂದಾಯ ಕಟ್ಟಿಸಿಕೊಳ್ಳಬಾರದು ಎಂದು ದೇವಸ್ಥಾನ ಸಮಿತಿಯವರು ಹೇಳಿದ್ದಾರೆ” ಎಂದು ಗ್ರಾಮ ಪಂಚಾಯ್ತಿಗೆ ಗಿರಿಜನರಿಗೆ ಸೌಲಭ್ಯ ಕಲ್ಪಿಸುವ ಇರಾದೆ ಇದ್ದರೂ, ಸ್ಥಳೀಯ ದೇವಸ್ಥಾನ ಸಮಿತಿಯವರು ಅದಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ವಿವರಿಸಿದರು.

ಒಟ್ಟಾರೆ ಕೆಲವೇ ಮಂದಿಯ ಹಿತಾಸಕ್ತಿಯ ಕಾರಣದಿಂದಾಗಿ ಸುಮಾರು 70 ವರ್ಷದಿಂದ ನೆಲೆಕಂಡುಕೊಂಡಿರುವ 150ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ನಾಗರಿಕ ಸೌಲಭ್ಯಗಳನ್ನೇ ಕೊಡದೇ ದಿಗ್ಬಂಧನ ಹೇರಿ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಪ್ರಭಾವಿ ವ್ಯಕ್ತಿಗಳ ಅಂತಹ ಪ್ರಯತ್ನಗಳಿಂದಾಗಿ ಸ್ಥಳೀಯ ಆಡಳಿತಗಳೂ ಕೈಕಟ್ಟಿಕೂರಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್