
- ಸಾರ್ವಜನಿಕರಿಗೆ ಕಾಣಿಸುವಂತೆ ವ್ಯಾಪಾರ ಪರವಾನಗಿ ಅಳವಡಿಸಿಲ್ಲ
- ಸಂಸ್ಥೆಗಳಿಂದ ಕೀಟನಾಶಕ ಖರೀದಿಗಳನ್ನು ದಾಖಲಿಸುವಲ್ಲಿ ವೈಫಲ್ಯ
ಕೀಟನಾಶಕ ಮಾರಾಟದಲ್ಲಿ ಅಕ್ರಮ ಎಸಗಿರುವ ಏಲಕ್ಕಿ ಸಹಕಾರಿ ಮಾರಾಟ ಸಂಘ ನಿಯಮಿತಕ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ್ದಾರೆ.
ಕೀಟನಾಶಕ ನಿಯಂತ್ರಣ ಕಾಯ್ದೆ 1985 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1955ರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೊಡಗು ಜಿಲ್ಲೆ ಸೋಮವಾರಪೇಟೆಯ ಕೊಡಗು ಏಲಕ್ಕಿ ಸಹಕಾರಿ ಮಾರಾಟ ಸಂಘಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಕೃಷಿ ಅಧಿಕಾರಿ ನವ್ಯಾ ನಾಣಯ್ಯ ಅವರು ನೋಟಿಸ್ ನೀಡಿದ್ದು, ಮುಂದಿನ ಏಳು ದಿನಗಳ ಒಳಗೆ ನಿಯಮಗಳನ್ನು ಪಾಲಿಸದಿದ್ದಲ್ಲಿ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
"ಸಾರ್ವಜನಿಕರಿಗೆ ಕಾಣಿಸುವಂತೆ ವ್ಯಾಪಾರ ಪರವಾನಗಿ ಅಳವಡಿಸಿಲ್ಲ. ದಾಸ್ತಾನು ಮತ್ತು ಬೆಲೆ ಪಟ್ಟಿಗೆ ಸಂಬಂಧಿಸಿದ ಕೀಟನಾಶಕ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಉಲ್ಲಂಘನೆಯಾಗಿದೆ. ಜೊತೆಗೆ ಹಲವು ಸಂಸ್ಥೆಗಳಿಂದ ಕೀಟನಾಶಕ ಖರೀದಿಸಿರುವುದನ್ನು ದಾಖಲಿಸುವಲ್ಲಿ ವೈಫಲ್ಯವಾಗಿದೆ" ಎಂದು ಆರೋಪಿಸಿದೆ.
ಕೀಟನಾಶಕಗಳ ಖರೀದಿಗೆ ರಶೀದಿಗಳನ್ನು ದಾಖಲಿಸದಿರುವುದು ಅಧಿಕಾರಿಗಳಲ್ಲಿ ಇನ್ನೊಂದು ತಪ್ಪು ಗುರುತಿಸುವಂತಾಯಿತು. ರೈತರ ಹೆಸರು ಮತ್ತು ಅವರ ವಿಳಾಸಗಳ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ರೈತರ ಸಹಿಗಳನ್ನು ಪಡೆಯುವಲ್ಲಿ ಏಲಕ್ಕಿ ಸಹಕಾರಿ ಮಾರಾಟ ಸಂಘದ ಮಳಿಗೆ ವಿಫಲವಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅಂಗನವಾಡಿ ನೌಕರರಿಗೆ 25,000 ರೂ. ವೇತನ ನೀಡುವಂತೆ ಆಗ್ರಹ
"ನೋಟಿಸ್ ಸ್ವೀಕರಿಸಿದ ಏಳು ದಿನಗಳ ಒಳಗೆ ಅರ್ಜಿಯೊಂದಿಗೆ ಎಲ್ಲ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವಂತೆ ಸೊಸೈಟಿಗೆ ತಿಳಿಸಲಾಗಿದೆ. ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ ಪರವಾನಗಿ ರದ್ದುಗೊಳಿಸಲಾಗುತ್ತದೆ" ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಸೊಸೈಟಿಯು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ, ಸೊಸೈಟಿ 8.7 ಲಕ್ಷ ರೂ.ಗಳ ನಷ್ಟ ಅನುಭವಿಸಿದೆ. ಕಳೆದ ಏಳು ವರ್ಷಗಳಲ್ಲಿ, ಒಟ್ಟಾರೆಯಾಗಿ, 26 ಲಕ್ಷ ರೂ.ಗಳ ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ.