ಕೊಡಗು | ಪುನರ್ವಸತಿ ಹೆಸರಲ್ಲಿ ಬದುಕು ಆತಂತ್ರ: ಆದಿವಾಸಿಗಳ ಹೋರಾಟ

  • 2018ರಲ್ಲಿ ಸ್ಥಳಾಂತರಗೊಂಡಿದ್ದ ಆದಿವಾಸಿಗಳು
  • ಇಂದಿಗೂ ಸಿಗದ ಮೂಲಭೂತ ಸೌಕರ್ಯಗಳು
  • ಹಾಡಿಗೆ ಮರಳಲು ಆದಿವಾಸಿಗಳ ಪ್ರತಿಭಟನೆ

ಪುನರ್ವಸತಿ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಒಕ್ಕಲೆಬ್ಬಿಸಲಾಗಿದ್ದ ಎರಡು ಹಾಡಿಗಳ ಆದಿವಾಸಿಗಳ ಬದುಕು ಅತಂತ್ರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಬದುಕಿಗೆ ದಿಕ್ಕು ಕಾಣದಂತಾಗಿದ್ದ ಆದಿವಾಸಿಗಳು ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಪಂಚಾಯಿತಿ ವ್ಯಾಪ್ತಿಯ ಆಡುಗುಂಡಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. 

ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆದುಗುಂಡಿ ಹಾಡಿ, ಜಂಗಲ್ ಹಾಡಿಗಳಲ್ಲಿ 177 ಆದಿವಾಸಿ ಕುಟುಂಬಗಳು ವಾಸುತ್ತಿದ್ದವು. 2018ರಲ್ಲಿ, ಅವರನ್ನು ಪುನರ್ವಸತಿ ಹೆಸರಿನಲ್ಲಿ ಸರ್ಕಾರವು ಅರಣ್ಯ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ ಒಕ್ಕಲೆಬ್ಬಿಸಿತ್ತು. ಅವರೆಲ್ಲರನ್ನು ಹೆಚ್ ಡಿ ಕೋಟೆಯ ಮಾಸ್ತಿಗುಡಿ ಮತ್ತು ಹುಣಸೂರಿನ ನಾಗಪುರಕ್ಕೆ ಸ್ಥಳಾಂತರಿಸಿತ್ತು. 

"ಸರ್ಕಾರದ ಪುನರ್ವಸತಿಯ ಭರವಸೆಯನ್ನು ನಂಬಿ ಕಾಡು ತೊರೆದು, ಸರ್ಕಾರ ಸೂಚಿಸಿದ ಪ್ರದೇಶಕ್ಕೆ ಬಂದು ಬೀಡುಬಿಟ್ಟಿದ್ದೆವು. ಆದರೆ, ಈಗ ನಮ್ಮ ಬದುಕು ದುಸ್ತರವಾಗಿದೆ. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ಧೋರಣೆ ತಳೆದಿವೆ" ಎಂದು ಪ್ರತಿಭಟನಾನಿರತ ಆದಿವಾಸಿಗಳು ಆರೋಪಿದ್ದಾರೆ.  

ಅರಣ್ಯವೇ ಸ್ವರ್ಗ, ಪ್ರಾಣಿ ಪಕ್ಷಿಗಳೇ ಸ್ನೇಹಿತರು, ಗೆಡ್ಡೆ ಗೆಣಸು ಆಹಾರವೆಂದು ಬದುಕುತ್ತಿದ್ದ ಆದಿವಾಸಿಗಳನ್ನು ಅರಣ್ಯ ಪ್ರದೇಶದಿಂದ ಸ್ಥಳಾಂತಸಿರಿದ ಸರ್ಕಾರ, ಇದೂವರೆಗೂ ತಮ್ಮತ್ತ ತಿರುಗಿನೋಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"ಸ್ಥಳಾಂತರ ಸಮಯದಲ್ಲಿ, ಆದಿವಾಸಿಗಳಿಗೆ ಪುನರ್ವಸತಿ ಯೋಜನೆಯ ಅಡಿಯಲ್ಲಿ ಮನೆ, ಮೂರು ಎಕರೆ ಭೂಮಿ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಅದರಂತೆ, ಯಾವ ಭಾಗದಲ್ಲಿ ಅವರಿಗೆ ಭೂಮಿ ನೀಡಲಾಗುತ್ತದೆ ಎಂದು ಸ್ಥಳವನ್ನೂ ಗುರುತಿಸಿತ್ತು. ಆದರೆ, ಇದೂವರೆಗೂ ಆ ಭೂಮಿ ಆದಿವಾಸಿಗಳ ಕೈಸೇರಿಲ್ಲ. ಜಮೀನಿನ ಆರ್‌ಟಿಸಿಯೂ ತಮಗೆ ದೊರೆತಿಲ್ಲ" ಎಂದು ಪ್ರತಿಭಟನಾನಿರತ ಲಲಿತ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

"ಸರ್ಕಾರ ಕೊಟ್ಟ ಭರವಸೆ ಈಡೇರಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಪರಿಪರಿಯಾಗಿ ಬೇಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಕಳೆದ ತಿಂಗಳು ಪ್ರಧಾನಿ ಮೋದಿ, ಹೆಚ್‌ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಮೈಸೂರು ಜಿಲ್ಲಾಧಿಕಾರಿಗೆ ತಮ್ಮ ಸಂಕಷ್ಟದ ಕುರಿತು ಪತ್ರ ಬರೆದಿದ್ದೆವು. ಆದರೆ, ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಹೀಗಾಗಿ, ನಾವು ನಮ್ಮ ಮೂಲ ಸ್ಥಳಕ್ಕೆ ಹೊರಟಿದ್ದೇವೆ" ಎಂದು ನೊಂದ ಸಣ್ಣಪ್ಪ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದಲಿತ, ಮುಸ್ಲಿಮ್‌, ಆದಿವಾಸಿಗಳ ಆಯಸ್ಸು ಪ್ರಬಲ ಜಾತಿಯವರಿಗಿಂತ ಕಡಿಮೆ: ಅಧ್ಯಯನ ವರದಿ

"ತಮ್ಮ ಹಾಡಿಗಳಿಗೆ ಮರಳಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬಿಡುತ್ತಿಲ್ಲ. ನಮ್ಮನ್ನು ತಡೆದಿದ್ದಾರೆ. ಹೀಗಾಗಿ, ನಾವು ಬಾಳೆಲೆಯಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿಯೇ ಟೆಂಟ್‌ಗಳನ್ನು ಹಾಕಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸುತ್ತಿದ್ದೇವೆ. ಸೌಲಭ್ಯ ಕಲ್ಪಿಸದ ಹೊರತು ಪುನರ್‌ವಸತಿ ಕೇಂದ್ರಗಳಿಗೆ ಹೋಗುವುದಿಲ್ಲ" ಎಂದು ಆದಿವಾಸಿಗಳ ಮುಖಂಡ ಅಯ್ಯಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್