ಕೋಲಾರ | ದಲಿತ ಬಾಲಕನ ತಾಯಿಗೆ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ: ಶಾಸಕ ಕೆ ವೈ ನಂಜೇಗೌಡ ಭರವಸೆ

MLA K Y Nanjegowda
  • ಪರಿಶಿಷ್ಟ ಜಾತಿಯ ಬಾಲಕನ ಮನೆಯಲ್ಲಿ ಊಟ ಮಾಡಿದ ಶಾಸಕ
  • ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ: ಆರ್ಥಿಕ ನೆರವು ನೀಡುವ ಭರವಸೆ

ದೇವರ ಮೆರವಣಿಗೆಯ ವೇಳೆ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿದ್ದ ದಲಿತ ಬಾಲಕ ಚೇತನ್ ತಾಯಿಗೆ ಗ್ರಾಮಕ್ಕೆ ಹತ್ತಿರದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲಕ್‌ನಲ್ಲಿ ಅಡುಗೆ ಕೆಲಸ ನೀಡುವಂತೆ ಮಾಲೂಕು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದ ದಲಿತ ಬಾಲಕನ ಮನೆಗೆ ಗುರುವಾರ ಭೇಟಿ ನೀಡಿದ ಮಾಲೂರು ಕ್ಷೇತ್ರದ ಶಾಸಕ ಕೆ ವೈ ನಂಜೇಗೌಡ, ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಶಾಸಕರು ದಲಿತ ಬಾಲಕನ ಮನೆಯಲ್ಲಿ ಊಟ ಮಾಡಿದರು. ಬಳಿಕ ಬಾಲಕನ ತಾಯಿ ಶೋಭಾ ಅವರಿಗೆ ಧೈರ್ಯ ತುಂಬಿದರು. ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

ಉಳ್ಳೇರಹಳ್ಳಿ ಗ್ರಾಮದಲ್ಲಿ ಸಂತ್ರಸ್ತ ಕುಟುಂಬಕ್ಕೆ ನಿವೇಶನ ಗುರುತಿಸಿದ್ದು, ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ.  ನಂತರ ಕುಟುಂಬಕ್ಕೆ ಹಕ್ಕುಪತ್ರ ಹಸ್ತಾಂತರ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಕೋಲಾರ | ಗುಜ್ಜುಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ದಂಡ ಪ್ರಕರಣ; ದೇವರ ಪೋಟೋಗೆ 'ಗೇಟ್‌ಪಾಸ್‌'!

ಘಟನೆಯ ಹಿನ್ನೆಲೆ

ಉಳ್ಳೇರಹಳ್ಳಿಯಲ್ಲಿ ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಗುಜ್ಜಕೋಲು ಕೆಳಕ್ಕೆ ಬಿದ್ದಾಗ ಅದನ್ನು ಚೇತನ್ ಎಂಬ ದಲಿತ ಬಾಲಕ ಎತ್ತಿ ಕೊಟ್ಟಿದ್ದ. ಆ ಕಾರಣಕ್ಕೆ ಕೋಲು ಮೈಲಿಗೆಯಾಯಿತು ಎಂದು ಬಾಲಕನನ್ನು ಥಳಿಸಿ ದಂಡ ವಿಧಿಸಲಾಗಿತ್ತು. ದಂಡ ಕಟ್ಟಲು ಆಗದಿದ್ದರೆ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್