ಕೋಲಾರ | ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ರೂ. ದಂಡ

  • ವಿಗ್ರಹವನ್ನು ಮುಟ್ಟಿದ ಕಾರಣಕ್ಕೆ ದಲಿತ ಬಾಲಕನ ಮೇಲೆ ಗದರಿದ ಅರ್ಚಕ
  • ಪ್ರಕರಣ ಕುರಿತು ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಗ್ರಾಮ ದೇವತೆಯ ಮೆರವಣಿಗೆ ಸಂದರ್ಭದಲ್ಲಿ ದೇವರ ವಿಗ್ರಹವನ್ನು ಮುಟ್ಟಿದನೆಂಬ ಕಾರಣಕ್ಕೆ ದಲಿತ ಬಾಲಕನಿಗೆ 60 ಸಾವಿರ ರೂ. ದಂಡ ಕಟ್ಟುವಂತೆ ಬಲಿಷ್ಠ ಜಾತಿಯವರು ಬೆದರಿಕೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಬಲ ಜಾತಿಯವರ ಮೇಲೆ ಎಫ್‌ಐಆರ್ ದಾಖಲಾಗಿದೆ. 

ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೆರಹಳ್ಳಿಯಲ್ಲಿ ಘಟನೆ ನಡೆದಿದೆ. ಚೇತನ್ ಎಂಬ ಬಾಲಕನ ದಲಿತ ಕುಟುಂಬಕ್ಕೆ ಬಲಿಷ್ಠರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಮಾಸ್ತಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್ ಈ ದಿನ.ಕಾಮ್‌ ಜೊತೆ ಮಾತನಾಡಿ, " ಸೆ. 8ರಂದು ಉಳ್ಳೇರಹಳ್ಳಿ ಗ್ರಾಮದಲ್ಲಿ ಭೂತಮ್ಮ ದೇವಿಯ ಪ್ರತಿಷ್ಟಾಪನೆ ಮಾಡಲಾಗಿತ್ತು. ಈ ಹಿನ್ನೆಲೆ ಗ್ರಾಮದಲ್ಲಿ ಭೂತಮ್ಮ ದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು. ಉತ್ಸವದ ವೇಳೆ ದಲಿತ ಬಾಲಕ ಚೇತನ್ ದೇವರಕೋಲು(ಬೆತ್ತ) ಮುಟ್ಟಿದ ಎಂಬ ಕಾರಣಕ್ಕೆ ಎಸ್‌ಟಿ ಸಮುದಾಯಕ್ಕೆ ಸೇರಿದ ಅರ್ಚಕ ಬಾಲಕನ ಮೇಲೆ ಗದರಿದ್ದಾರೆ" ಎಂದು ತಿಳಿಸಿದರು.

Image

"ಶುದ್ಧೀಕರಣ ಮತ್ತು ಪ್ರತಿಷ್ಠಾಪನೆಗಾಗಿ ಈಗಾಗಲೇ 60 ಸಾವಿರ ರೂ. ವೆಚ್ಚ ತಗುಲಿದೆ. ನೀನು ವಿಗ್ರಹವನ್ನು ಮುಟ್ಟಿದ್ದು, ವಿಗ್ರಹ ಮೈಲಿಗೆಯಾಗಿದೆ. 60 ಸಾವಿರ ರೂ. ದಂಡ‌ ಕಟ್ಟಬೇಕೆಂದು ಪ್ರಬಲ ಜಾತಿಯ ವೆಂಕಟೇಶಪ್ಪ ಬೆದರಿಕೆ ಹಾಕಿದ್ದಾರೆ" ಎಂದು ಇನ್ಸ್‌ಪೆಕ್ಟರ್‌ ವಸಂತ್‌ ಈ ದಿನ.ಕಾಮ್‌ಗೆ ತಿಳಿಸಿದರು.

"ಗ್ರಾಮದಲ್ಲಿ ಘಟನೆಗೆ ಸಂಬಂಧಿಸಿದ ಯಾವುದೇ ರೀತಿಯ ಕಲಹಗಳು ಉಂಟಾಗದಂತೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿ ಬಂದಿದ್ದೇವೆ. ಸಧ್ಯಕ್ಕೆ ಯಾವುದೇ ಗಲಬೆಗಳು ಸೃಷ್ಟಿಯಾಗಿಲ್ಲ" ಎಂದು ತಿಳಿಸಿದರು.

"ದಲಿತ ಕುಟುಂಬಕ್ಕೆ ಸೇರಿರುವ ದಂಪತಿ ರಮೇಶ್, ಶೋಭಾ ಮತ್ತು ಮಗ ಚೇತನ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಹಿನ್ನಲೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತು ಎಫ್‌ಐಆರ್‌ ದಾಖಲಾಗಿದೆ" ಎಂದು ವಸಂತ್‌ ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್