ಕೋಲಾರ | ಹಳ್ಳಿ ರೈತ ಸಂತೆ ಕಟ್ಟಡಕ್ಕಿಲ್ಲ ಉದ್ಘಾಟನಾ ಭಾಗ್ಯ; ಮೂಲ ಸೌಕರ್ಯಕ್ಕೂ ಕುತ್ತು

  • 10 ಲಕ್ಷ ವೆಚ್ಚದ ರೈತ ಬಜಾರ್‌ಗಿಲ್ಲ ಉದ್ಘಾಟನೆ ಭಾಗ್ಯ
  • ಪಂಚಾಯಿತಿ ಅಧಿಕಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ

ರೈತರು ಬೆಳೆಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಹಳ್ಳಿಸಂತೆಗೆ ಕಟ್ಟಡ ನಿರ್ಮಿಸಲಾಗಿರುತ್ತದೆ. ಆದರೆ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಹಳ್ಳಿಸಂತೆ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಉದ್ಘಾಟನೆ ಕಾಣದೆ ಪಾಳು ಬಿದ್ದಿದೆ.

ಹೆಬ್ಬಣಿ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ರೈತ ಸಂತೆ ಕಟ್ಟಡದ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಪಾಳುಬಿದ್ದಿದೆ. ಈ ಕಟ್ಟಡಕ್ಕೆ ಬೇಕಾದ ತಡೆಗೋಡೆ, ನೀರಿನ ಸೌಲಭ್ಯ ಸೇರಿದಂತೆ ಹಲವು ರೀತಿಯ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

ಈ ಹಳ್ಳಿ ಸಂತೆ ಕಟ್ಟಡದಲ್ಲಿ ಸುಮಾರು 50 ಮಳಿಗೆಗಳನ್ನು ನಿರ್ಮಿಸಿದ್ದರೂ, ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ. ತಡೆಗೋಡೆ, ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮುಂತಾದ ಸೌಲಭ್ಯ ಇಲ್ಲದೆ ಕಟ್ಟಡ ಅನಾಥವಾಗಿದೆ.

ಒಂದೇ ಸೂರಿನಡಿಯಲ್ಲಿ ಜನ ಬಳಕೆಯ ವಸ್ತುಗಳು ಸಿಗಬೇಕು ಎಂಬ ಉದ್ದೇಶದಿಂದ 2018-19ರಲ್ಲಿ ರಾಜ್ಯ ಸರ್ಕಾರ ರೈತ ಬಜಾರ್‌ ಅಥವಾ ಹಳ್ಳಿ ಸಂತೆ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿತ್ತು. ಆಂಧ್ರಪ್ರದೇಶದ ಗಡಿಭಾಗಕ್ಕಿರುವ ಹೆಬ್ಬಣಿಯಲ್ಲಿ ತಾಲೂಕಿನ ಏಕೈಕ ಹಳ್ಳಿ ಸಂತೆ ಇದಾಗಿದ್ದು, ಸುಮಾರು ₹10 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸಚಿವ ಎಚ್ ಕೆ ಪಾಟೀಲ್ ಮಂಜೂರು ಮಾಡಿದ್ದ ಕಾಮಗಾರಿಗೆ ಟೆಂಡರ್ ಕರೆದು ಕಟ್ಟಡ ನಿರ್ಮಿಸಲಾಗಿತ್ತು. ಕಟ್ಟಡ ಪೂರ್ಣಗೊಂಡು 2020ರಲ್ಲಿಯೇ ಹೆಬ್ಬಣಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇದುವರೆಗೂ ಉದ್ಘಾಟನೆಯಾಗಿಲ್ಲ ಎಂದು ಸ್ಥಳೀಯರು ಆರೋಪಿದ್ದಾರೆ.

ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ಖರ್ಚುಮಾಡಿ ನಿರ್ಮಿಸಿರುವ ಕಟ್ಟಡ ಸದ್ಯ ಪುಂಡಪೋಕರಿಗಳ ಮೋಜುಮುಸ್ತಿಯ ಬೀಡಾಗಿದೆ. ಪುಂಡರು ಕುಡಿದು ಬಿಸಾಕಿರುವ ಮದ್ಯದ ಬಾಟಲಿಗಳು, ಕಸದ ರಾಶಿಯಿಂದ ಕಟ್ಟಡ ತುಂಬಿಹೋಗಿದೆ. ಅಲ್ಲದೆ, ಸುತ್ತಮುತ್ತಲ ತ್ಯಾಜ್ಯವನ್ನು ಕೆಲವರು ಅಲ್ಲೇ ತಂದು ಸುರಿದು ತಿಪ್ಪಿಗುಂಡಿ ನಿರ್ಮಾಣವಾಗಿದೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಹೆಬ್ಬಣಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, "ಕಟ್ಟಡ ಗ್ರಾಮ ಪಂಚಾಯ್ತಿಗೆ ಹಸ್ತಾಂತರಗೊಂಡ ವೇಳೆ ಕೊರೊನಾ ಇದ್ದಿದ್ದರಿಂದ ಅಧಿಕೃತವಾಗಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಜರುಗಿಲ್ಲ. ಆದರೆ, ಸ್ಥಳೀಯ ವ್ಯಾಪಾರಸ್ಥರಿಗೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಳ್ಳಿಸಂತೆ ಕಟ್ಟಡದಲ್ಲಿನ ಮಳಿಗೆಗಳಲದಲಿ ವ್ಯಾಪಾರ-ವಹಿವಾಟಿಗೆ ಮುಕ್ತ ಅವಕಾಶವಿದೆ. ಹಾಗಾಗಿ ಎಲ್ಲರೂ ಅಲ್ಲಿಯೇ ವ್ಯಾಪಾರ ಮಾಡುವಂತೆ ಹಲವು ಬಾರಿ ಹೇಳಲಾಗಿದೆ. ಆದರೆ, ಸ್ಥಳ ದೂರವಾಗುತ್ತದೆ ಮತ್ತು ವ್ಯಾಪಾರ ಕಡಿಮೆಯಾಗುತ್ತದೆ ಎಂಬ ಕಾರಣ ನೀಡಿ ಯಾರೋಬ್ಬರು ಅಲ್ಲಿ ವ್ಯಾಪಾರ-ವಹಿವಾಟು ನಡೆಸಲು ಹೋಗುತ್ತಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ದೇವರ ಗುಜ್ಜುಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ದಂಡ; ಕಾನೂನು ಕ್ರಮಕ್ಕೆ ಶಾಸಕ ನಂಜೇಗೌಡ ಆಗ್ರಹ

ಬೈರಕೂರು ಮತ್ತು ಹೆಬ್ಬಣಿ ಮಾರ್ಗವಾಗಿ ಆಂದ್ರಪ್ರದೇಶದ ಪುಂಗನೂರು, ಮದನಪಲ್ಲಿ, ಬೋಯಕೊಂಡ ಮುಂತಾದ ಪ್ರದೇಶಗಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಈ ರೈತ ಬಜಾರ್ ಇದೆ.

ನೂತನ ಕಟ್ಟದ ಬಳಕೆಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಹಣ್ಣು-ತರಕಾರಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಮಾರಾಟಗಾರರು ಹೆಬ್ಬಣಿ ಗ್ರಾಮದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ. ಗ್ರಾಹಕರು ರಸ್ತೆ ಅಕ್ಕಪಕ್ಕದಲ್ಲೇ ವಾಹನ ನಿಲ್ಲಿಸಿ ಖರೀದಿಗೆ ಮುಂದಾಗುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬುದು ವಾಹನ ಸವಾರರ ಆರೋಪ.

ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿಯೇ ನಿರ್ಮಾಣವಾದ ರೈತ ಸಂತೆ ಕಟ್ಟಡ ಮಾತ್ರ ಕಸದ ತೊಟ್ಟಿಯಾಗಿದೆ!

ನಿಮಗೆ ಏನು ಅನ್ನಿಸ್ತು?
0 ವೋಟ್