ಕೋಲಾರ | ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ ಪ್ರದರ್ಶನ; ಲಿಮ್ಕಾ ದಾಖಲೆಗೆ ಸೇರ್ಪಡೆ

Kolar Flag
  • ಬೃಹತ್ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ವಿಮಾನದಿಂದ ಪುಷ್ಪವೃಷ್ಠಿ
  • 205x630 ಅಡಿ ವಿಸ್ತೀರ್ಣವಿರುವ ರಾಷ್ಟ್ರಧ್ವಜಕ್ಕೆ 3,600 ಚದರಡಿಯ ಅಶೋಕ ಚಕ್ರ 

ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಸೋಮವಾರ ಕೋಲಾರ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಲಿಮ್ಕಾ ಪುಸ್ತಕದಲ್ಲಿ ಸೇರ್ಪಡೆ ಮಾಡುವ ಮೂಲಕ ದಾಖಲೆ ನಿರ್ಮಿಸಲಾಯಿತು.

76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕರೆಗೆ ಓಗೊಟ್ಟು ಕೋಲಾರ ಸಂಸದರಾದ ಎಸ್ ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಕ್ರೀಡಾಂಗಣದ ಉದ್ದಗಲಕ್ಕೂ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ವಿಮಾನದಿಂದ ಪುಷ್ಪವೃಷ್ಠಿ ಸಲ್ಲಿಸಲಾಯಿತು.

Image
KOLAR FLAG

ಈ ಸಂದರ್ಭ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮವು ಹರ್ಷೋದ್ಘಾರ ಮೊಳಗಿಸಿದರು. ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಶಾಲಾ ಮಕ್ಕಳು ಸಂತಸದಿಂದ ಕುಣಿದಾಡಿದರು.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ , ಸೇರಿದಂತೆ ಎಲ್ಲ ಜನಪ್ರತಿನಿಧಿಗಳು , ಅಧಿಕಾರಿಗಳು ಸಹ ಧ್ವಜಾರೋಹಣ ವೇದಿಕೆಯ ಮೇಲೆ ಸೇರಿಕೊಂಡು ಬೃಹತ್ ಬಾವುಟವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

Image
KOLAR FLAG

ಬೃಹತ್ ಧ್ವಜದ ವಿಶೇಷತೆ
205x630 ಅಡಿ ವಿಸ್ತೀರ್ಣವನ್ನು ಹೊಂದಿದ ರಾಷ್ಟ್ರಧ್ವಜವು ಒಟ್ಟು 1.29 ಲಕ್ಷ ಚದರ ಅಡಿ ಇದ್ದು, ಅದರಲ್ಲಿ 3,600 ಚದರಡಿಯ ಅಶೋಕ ಚಕ್ರವನ್ನು ರೂಪಿಸಲಾಗಿದೆ. ಈ ಬಾವುಟ ತಯಾರಿಸಲು ಸುಮಾರು 12,800 ಮೀಟರ್‌ ಬಟ್ಟೆ ಬಳಸಲಾಗಿದ್ದು , 3,200 ಕೆ.ಜಿ ತೂಕ ಹೊಂದಿದೆ.

ಏಳು ಮಂದಿ ಟೈಲರ್‌ಗಳು, 15 ಸಹಾಯಕರು ಹಾಗೂ ಇಬ್ಬರು ಕಲಾವಿದರ ನೆರವಿನಿಂದ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಏಳು ದಿನಗಳಲ್ಲಿ ನಿರ್ಮಿಸಲಾಗಿದೆ.

ಕೋಲಾರದ ದೇವರಾಯ ಸಮುದ್ರ ಬೆಟ್ಟದ ಮೇಲೆ 630 ಅಡಿ ಉದ್ದ ಹಾಗೂ 205 ಅಡಿ ಉದ್ದದ ಈ ರಾಷ್ಟ್ರಧ್ವಜವನ್ನು ಸೈನ್ಯಕ್ಕೆ ಸೇರಲು ತರಬೇತಿ ಪಡೆದ ಅಗ್ನಿಪತ್ ಯೋಜನೆಯ ಯುವಕರು ಕೊಂಡೊಯ್ದು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ, ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ನಸೀರ್ ಅಹಮದ್ , ಎಂ.ಎಲ್ ಅನಿಲ್ ಕುಮಾರ್‌ , ನಗರಸಭೆ ಅಧ್ಯಕ್ಷರಾದ ಶ್ವೇತಾಶಬರೀಶ್ , ಜಿಲ್ಲಾಧಿಕಾರಿ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್ ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ , ಅಪರ ಜಿಲ್ಲಾಧಿಕಾರಿ ಡಾ ಸ್ನೇಹಾ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಶಬ್ಬೀರ್ ಅಹ್ಮದ್ ಕೋಲಾರ
ನಿಮಗೆ ಏನು ಅನ್ನಿಸ್ತು?
0 ವೋಟ್