ಕೋಲಾರ | ದೇವರು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ ಹಾಕಿದ ಬಲಾಢ್ಯರು: ಗ್ರಾಮದಿಂದ ಬಹಿಷ್ಕಾರ

  • ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಮೇಲ್ಜಾತಿಯ ಜನ
  • ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟ‌ನೆ

ದಲಿತ ಬಾಲಕನೊಬ್ಬನು ದೇವರನ್ನು ಮುಟ್ಟಿದ ಎಂಬ ಕಾರಣಕ್ಕೆ ಗ್ರಾಮದ ಬಲಾಢ್ಯ ಜನ ಅನಾಗರಿಕವಾಗಿ ವರ್ತಿಸಿ, ಬಾಲಕನ ಕುಟುಂಬಕ್ಕೆ ₹60,000 ದಂಡ ಹಾಕಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ದೌರ್ಜನ್ಯಕ್ಕೊಳಗಾದ ಬಾಲಕನನ್ನು ಚೇತನ್‌ ಎಂದು ಗುರುತಿಸಲಾಗಿದೆ. ಮಾಲೂರು ತಾಲೂಕಿನ ಉಳ್ಳೇರಹಳ್ಳಿಯ ದೇವಸ್ಥಾನಕ್ಕೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭೂದೇವಿ ಉತ್ಸವ ಮಾಡಲಾಗುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಲಿತ ಹುಡುಗ ಭಕ್ತಿಯಿಂದ ದೇವರನ್ನು ಮುಟ್ಟಿ ನಮಸ್ಕರಿಸಿದ್ದಾನೆ. ಇದನ್ನು ಸಹಿಸದ ಮೇಲ್ಜಾತಿಯವರು ಬಾಲಕನ ಕುಟುಂಬಕ್ಕೆ ದಂಡದ ಜೊತೆಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

ಹಾಗೆಯೇ ಆ ಬಾಲಕನ ಕುಟುಂಬವು 60 ಸಾವಿರ ರೂ ದಂಡ‌ ಕಟ್ಟದೆ ಗ್ರಾಮದೊಳಗೆ ಬರಬಾರದೆಂದು ಗ್ರಾಮದ ಮುಖಂಡರು ಕಟ್ಟಳೆ ಹೇರಿದ್ದಾರೆ.

ಈ ಬಗ್ಗೆ ಬಾಲಕನ ತಾಯಿ ಶೋಭಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “‌ಆ ದಿನ ನಾನು ಊರಿನಲ್ಲಿ ಇರಲಿಲ್ಲ. ಮಾಮೂಲಿಯಂತೆ ಬೆಂಗಳೂರಿಗೆ ಹೌಸ್‌ ಕೀಪಿಂಗ್ ಕೆಲಸಕ್ಕೆ ಹೋಗಿದ್ದೆ. ಮಗ ದೇವರನ್ನು ಮುಟ್ಟಿದ್ದಾನೆ ಅಂತ ನಮ್ಮನ್ನು ಊರಿನಿಂದ ಹೊರ ಹಾಕುತ್ತಿದ್ದಾರೆ ಎಂಬುದು ಮನೆಗೆ ಬಂದ ನಂತರವೇ ತಿಳಿಯಿತು. 60 ಸಾವಿರ ದಂಡ ಕಟ್ಟಿ, ಇಲ್ಲದಿದ್ರೆ ಊರೊಳಗೆ ಕರೆದುಕೊಳ್ಳುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕೂಲಿ ಮಾಡುವ ಜನ ನಾವು, ಅಷ್ಟೊಂದು ದಂಡ ಎಲ್ಲಿಂದ ಕಟ್ಟಬೇಕು?" ಎಂದು ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ದೇಸಿ ನುಡಿಗಟ್ಟು - ಮಾಲೂರು ಸೀಮೆ | ತಂಗಿ ಅಮ್ಮಾಯುನುಕ ಕೊಡದೆ ಉಳಿಸಿಕೊಂಡ ನಾಲ್ಹಾಣ

ಘಟನೆ ಸಂಬಂಧ ದಲಿತ ಕುಟುಂಬಕ್ಕೆ ಸೇರಿರುವ ದಂಪತಿ ರಮೇಶ್, ಶೋಭಾ ಹಾಗೂ ಮಗ ಚೇತನ್ ಅವರಿಗೆ ಗ್ರಾಮದ ಸವರ್ಣಿಯರು ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಸತ್ಯಾಸತ್ಯತೆಯ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟ‌ನೆ ಜರುಗಿದ್ದು, ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇನ್ಸ್‌ಪೆಕ್ಟರ್‌ ವಸಂತ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಶುದ್ಧೀಕರಣ ಮತ್ತು ಪ್ರತಿಷ್ಠಾಪನೆಗಾಗಿ ಈಗಾಗಲೇ 60 ಸಾವಿರ ರೂ. ವೆಚ್ಚ ತಗುಲಿದೆ. ನೀನು ವಿಗ್ರಹವನ್ನು ಮುಟ್ಟಿದ್ದು, ಮೈಲಿಗೆಯಾಗಿದೆ. ಹಾಗಾಗಿ ದಂಡ‌ ಕಟ್ಟಬೇಕೆಂದು ಪ್ರಬಲ ಜಾತಿಯ ವೆಂಕಟೇಶಪ್ಪ ಬೆದರಿಕೆ ಹಾಕಿದ್ದಾರೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್