ಕೋಲಾರ | ಅತಿದೊಡ್ಡ ತ್ರಿವರ್ಣ ಧ್ವಜ ಅನಾವರಣಕ್ಕೆ ಭರದಿಂದ ಸಿದ್ದತೆ

  • ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ರಾಷ್ಟ್ರಧ್ವಜ ನಿರ್ಮಾಣ
  • ಬೃಹತ್ ರಾಷ್ಟ್ರ ಧ್ವಜ ಆಗಸ್ಟ್ 15ರಂದು ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅನಾವರಣ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿವೆ. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ. 

ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡ ರಾಷ್ಟ್ರಧ್ವಜ ಸಿದ್ಧವಾಗಿದೆ. ಬೃಹತ್ತಾದ ಗೋದಾಮಿನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ತ್ರಿವರ್ಣ ಧ್ವಜ ಕೊನೆ ಹಂತದ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಸಂಸದ ಮುನಿಸ್ವಾಮಿ ಎಲ್ಲ ಸಿದ್ದತೆಗಳನ್ನು ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಜಿಲ್ಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿರುವ ಸಂಸದ ಹಾಗೂ ಜಿಲ್ಲಾ ಬಿಜೆಪಿ ಘಟಕ ಸ್ವಾತಂತ್ರ್ಯ ದಿನಾಚರಣೆಯಂದು ದೇಶದಲ್ಲೇ ಅತಿದೊಡ್ಡ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆ ನಡೆಸಿದ್ದಾರೆ. 

ದೇಶದಲ್ಲೇ ಅತಿದೊಡ್ಡ ಬೃಹತ್ ಧ್ವಜ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೂ ಸೇರಿಸಲಾಗುತ್ತಿದೆ. ಬೃಹತ್ ತ್ರಿವರ್ಣ ಧ್ವಜವನ್ನು 25 ಮಂದಿ ಕಾರ್ಮಿಕರು ಕಳೆದ ಒಂದು ವಾರದಿಂದ ಶ್ರಮವಹಿಸಿ ರಚಿಸುತ್ತಿದ್ದಾರೆ.. 

ಈ ಸುದ್ದಿ ಓದಿದ್ದೀರಾ? ಜಾಹೀರಾತಿನಲ್ಲಿ ನೆಹರೂಗೆ ಅವಮಾನ| ಸಿಎಂ ಬೊಮ್ಮಾಯಿ ಕ್ಷಮೆ ಯಾಚನೆಗೆ ಡಿ ಕೆ ಶಿವಕುಮಾರ್‌ ಆಗ್ರಹ

ತ್ರಿವರ್ಣ ಧ್ವಜವು 204 ಅಡಿ ಉದ್ದ, 630 ಅಡಿ ಅಗಲವಿದ್ದು, ಒಟ್ಟು 1.30 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಧ್ವಜದ ಮೇಲಿನ ಅಶೋಕ ಚಕ್ರ 3400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಧ್ವಜ ನಿರ್ಮಾಣಕ್ಕೆ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ. ಸುಮಾರು ಮೂರು ಟನ್‌ನಷ್ಟು ತೂಕ ಹೊಂದಿರುವುದಾಗಿ ಸಂಘಟಕರು ತಿಳಿಸಿದ್ದಾರೆ. 

ಬೃಹತ್ ರಾಷ್ಟ್ರ ಧ್ವಜವನ್ನು ಆಗಸ್ಟ್ 15ರಂದು ಜಿಲ್ಲೆಯ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅನಾವರಣ ಮಾಡಲು ಸಿದ್ಧತೆ ನಡೆದಿದ್ದು, ಎರಡು ಸಾವಿರ ಜನರನ್ನು ಧ್ವಜ ಹಿಡಿದುಕೊಳ್ಳಲು ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯು ದೇಶ ಹಾಗೂ ವಿಶ್ವದಾದ್ಯಂತ ಗಮನ ಸೆಳೆಯಲು ನಿರ್ಧರಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್