ಕೋಲಾರ | ಮಳೆಯಿಂದ ಹಾನಿಗೊಳಗಾದ ಪ್ರದೇಶ ಪರಿಶೀಲಿಸಿದ ಸಚಿವ ಮುನಿರತ್ನ; ಪರಿಹಾರಕ್ಕೆ ಸೂಚನೆ

  • ಕೋಲಾರ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ ಸಚಿವ
  • ತೀವ್ರವಾಗಿ ಹಾನಿಗೊಂಡ ರಾಗಿ, ಹೂಕೋಸು ಹಾಗೂ ಟೊಮೆಟೊ ಬೆಳೆಗಳು 

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೋಲಾರದಲ್ಲಿನ ಮನೆ ಹಾಗೂ ಬೆಳೆಗಳಿಗೆ ಉಂಟಾಗಿರುವ ಹಾನಿಗೆ ಪರಿಹಾರ ನೀಡುವಂತೆ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸೂಚಿಸಿದ್ದಾರೆ. 

ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ಶನಿವಾರ (ಆಗಸ್ಟ್ 6) ಸಚಿವರು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, “ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ 250 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಮತ್ತು ನಷ್ಟವಾಗಿದೆ. ಮುಖ್ಯವಾಗಿ ರಾಗಿ, ಹೂಕೋಸು ಹಾಗೂ ಟೊಮೆಟೊ ಬೆಳೆಗಳಿಗೆ ತೀವ್ರವಾಗಿ ಹಾನಿಯಾಗಿದೆ. ಹಾಗಾಗಿ ಇವುಗಳಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ” ಎಂದು ತಿಳಿಸಿದರು.

"ಭಾರಿ ಮಳೆಯಿಂದ ಮನೆಗಳಿಗೆ ಸಹ ಹಾನಿಯಾಗಿದ್ದು, ಅಂತಹ ಕುಟುಂಬಗಳಿಗೆ ನೆರವು ನೀಡಿ, ಮನೆಗಳನ್ನು ಮೊದಲಿನಂತೆಯೇ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಮಳೆಯಿಂದ ಹಾನಿಗೊಳಗಾಗಿರುವ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆ" ಎಂದು ಹೇಳಿದರು.

"ಕಳೆದ ಬಾರಿ ಮಳೆಯಿಂದ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಬಾರಿ ಮಳೆಯಿಂದ ಭಾರಿ ನಷ್ಟ ಉಂಟಾಗಿದ್ದು, ರಾಜಕಾಲುವೆ ಮತ್ತು ರಸ್ತೆಗಳು ಕೂಡ ಹಾನಿಗೊಳಗಾಗಿವೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರಲಾಗುವುದು. ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು. 

ಕೋಲಾರ ತಾಲೂಕಿನ ಹೂಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಷ್ಟವಾದ ಬೆಳೆಗಳನ್ನು ವೀಕ್ಷಿಸಿ, ಇರಗಸಂದ್ರ ಗ್ರಾಮದ ರೈತ ರಾಮಕೃಷ್ಣಪ್ಪ ಅವರ ಎರಡು ಎಕರೆಯಲ್ಲಿನ ರಾಗಿ ಬೆಳೆ ಮಳೆಯಿಂದ ಸಂಪೂರ್ಣ ಜಲಾವೃತವಾಗಿರುವುದನ್ನು ಗಮನಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. 

ವಿಟ್ಟಪ್ಪನ ಹಳ್ಳಿಯಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಜನರು ಓಡಾಡಲು ಪರದಾಡುತ್ತಿದ್ದಾರೆ. ಆದ್ದರಿಂದ ಹೊಸ ರಸ್ತೆಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸುದ್ದಿ ಓದಿದ್ದೀರಾ? ಪ್ರವಾಹ | ಜಿಲ್ಲಾಧಿಕಾರಿಗಳ ಜತೆಗೆ ಬೊಮ್ಮಾಯಿ ಆನ್‌ಲೈನ್‌ ಸಭೆ; ಮಳೆಹಾನಿ ಪರಿಹಾರಕ್ಕೆ ₹200 ಕೋಟಿ

ಮಳೆಯಿಂದ ಯಾನಾದಹಳ್ಳಿಯಲ್ಲಿನ ರೈತರ ಮೂರು ಎಕರೆ ಟೊಮೆಟೊ ಬೆಳೆ ನಾಶವಾಗಿದೆ. ರೈತರಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ಸೂಕ್ತ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ 29 ಮನೆಗಳು ನೆಲಸಮಗೊಂಡಿದ್ದು, ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಉಪವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಂಟಿ ಕೃಷಿ ನಿರ್ದೇಶಕಿ ರೂಪಾದೇವಿ, ಕೋಲಾರ ತಹಶೀಲ್ದಾರ್ ನಾಗರಾಜ್, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು .

ನಿಮಗೆ ಏನು ಅನ್ನಿಸ್ತು?
0 ವೋಟ್