ಕೋಲಾರ | ಉಳ್ಳೇರಹಳ್ಳಿ ಪ್ರಕರಣ: ಗುಜ್ಜುಕೋಲು ಹೊರ ತಂದು ಯುವಕರ ಆಕ್ರೋಶ

  • ಗುಜ್ಜುಕೋಲು ಹೊರ ತಂದು ಯುವಕರ ಆಕ್ರೋಶ
  • ʼಉಳ್ಳೇರಹಳ್ಳಿ ಚಲೋʼ ಪ್ರತಿಭಟನೆಯಲ್ಲಿ ಜನಾಕ್ರೋಶ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್‌ ಹೋಬಳಿ ಉಳ್ಳೇರಹಳ್ಳಿ ಗ್ರಾಮದಲ್ಲಿ ದಲಿತ ಬಾಲಕನಿಗೆ ದಂಡ ವಿಧಿಸಿ ದೌರ್ಜನ್ಯ ನಡೆಸಿದ ಘಟನೆ ಖಂಡಿಸಿ ನಾನಾ ದಲಿತಪರ ಸಂಘಟನೆಗಳು ಹಮ್ಮಿಕೊಂಡಿದ್ದ ʼಉಳ್ಳೇರಹಳ್ಳಿ ಚಲೋʼ ವೇಳೆ ಗ್ರಾಮದ ಭೂತಮ್ಮನ ದೇವಸ್ಥಾನದ ಬಾಗಿಲು ತೆಗೆಸಿ ಒಳನುಗ್ಗಿದ ಪ್ರತಿಭಟನಾಕಾರರು ದೇವರ ಗುಜ್ಜುಕೋಲನ್ನು ಹೊರತಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಕುಟುಂಬದ ಮೇಲೆ ಬಲಾಢ್ಯ ಜಾತಿಯವರು ದೌರ್ಜನ್ಯ ನಡೆಸಲು ಇದೇ ಗುಜ್ಜುಕೋಲು ಕಾರಣ ಎಂದು ಘೋಷಣೆ ಕೂಗಿದರು. ಈ ವೇಳೆ ತಳ್ಳಾಟ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಲು ಹರಸಾಹಸಪಟ್ಟರು. ಯುವಕರನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಿದರು. 

ಬಳಿಕ ಗುಜ್ಜುಕೋಲನ್ನು ಹೊರತಂದು ಗ್ರಾಮದ ಅರಳಿಕಟ್ಟೆಯ ಬಳಿ ಪ್ರತಿಭಟನಾಕಾರರು ಜಮಾವಣೆಗೊಂಡಿದ್ದ ಸ್ಥಳದಲ್ಲಿ ಇಟ್ಟುಕೊಂಡಿದ್ದರು. ಜೈ ಭೀಮ್‌ ಎಂದು ಘೋಷಣೆಯ ದ್ವಜಗಳನ್ನು ದೇಗುಲದ ಮೇಲೆ ಕಟ್ಟಲು ಯುವಕರು ಪ್ರಯತ್ನಿಸಿದರು. 

ತಪ್ಪಿತಸ್ಥರಿಗೆ ಕಠಣ ಶಿಕ್ಷೆ ಕೊಡಿಸುವುದಾಗಿ ಭರವಸೆ

ಉಳ್ಳೇರಹಳ್ಳಿ ಗ್ರಾಮಕ್ಕೆ ಭಾನುವಾರ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ಜಾತಿ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, “ಹಿಂದೂ ಎಂದರೆ ನಾವೆಲ್ಲಾ ಒಂದು ಎಂಬುದು ಕೇವಲ ಘೋಷಣೆ ಆಗದೆ, ನಡವಳಿಕೆಯಲ್ಲಿಯೂ ತೋರಿಸಬೇಕು. ಉಳ್ಳೇರಹಳ್ಳಿ ಘಟನೆಯನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಆಗುವಂತೆ ಗಮನಹರಿಸಲಾಗುವುದು” ಎಂದು ಭರವಸೆ ನೀಡಿದರು.

“ಮತಾಂತರದ ವಿರುದ್ಧ ದೊಡ್ಡ ಭಾಷಣ ಮಾಡುತ್ತಿದ್ದೇವೆ. ಮತಾಂತರ ಮಾಡಬಾರದೆಂದು ಹೇಳುತ್ತಿದ್ದೇವೆ. ಆದರೆ, ಮತಾಂತರ ಆಗಿ ಎಂಬ ಒತ್ತಡ ಹಾಕುತ್ತಿರುವಂತೆ ಕೆಲವರ ಮನಸ್ಥಿತಿ ಇದೆ. ದಲಿತರನ್ನು ಹೊರತುಪಡಿಸಿದ ಹಿಂದುತ್ವ ಇಲ್ಲ. ದೇವರು ಬೇಕೆಂದು ಹಿಂದುತ್ವ ಪಾಲಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ದೇವರಿಂದ ದೂರವಿರಿ ಎನ್ನುವವರು ಹಿಂದುತ್ವ ವಿರೋಧಿಗಳು” ಎಂದು ಕಿಡಿಕಾರಿದರು.

“ಸಂತ್ರಸ್ತ ಕುಟುಂಬದವರು ತಮ್ಮ ಮನೆಯಲ್ಲಿ ದೇವರ ಫೋಟೊ ತೆಗೆದು ಅಂಬೇಡ್ಕರ್ ಫೋಟೊ ಇಟ್ಟಿದ್ದಾರೆ. ಅಂಬೇಡ್ಕರ್ಗೆ ಪೂಜೆ ಮಾಡಿ. ಅವರೇ ನಮ್ಮ ದೇವರು. ಸಮಾಜದಲ್ಲಿ ಎಲ್ಲೆಡೆ ಕಳ್ಳರು ಇದ್ದಾರೆ. ಆದರೆ, ಸಿಕ್ಕಿ ಹಾಕಿಕೊಂಡವನನ್ನು ಮಾತ್ರ ಕಳ್ಳ ಎನ್ನುತ್ತೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ದಲಿತ ಬಾಲಕನ ಮೇಲೆ ದೌರ್ಜನ್ಯ ಖಂಡಿಸಿ 'ಉಳ್ಳೇರಹಳ್ಳಿ ಚಲೋ'

“ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರ ಗುಜ್ಜು ಕೋಲು ಮುಟ್ಟಿದ ಎಂದು ಬಾಲಕನಿಗೆ ದಂಡ ವಿಧಿಸಿದ್ದಾರೆ. ಒಂದು ವೇಳೆ ದೇವರೇ ಬಂದು ಬಾಲಕನನ್ನು ಮುಟ್ಟಿದ್ದರೆ ಆಗ ಅವರು ಏನು ಮಾಡುತ್ತಿದ್ದರು? ದೇವರ ರೂಪ ಎಂದು ಬಾಲಕನನ್ನೇ ಪೂಜೆ ಮಾಡುತ್ತಿದ್ದರು. ಇದೊಂದು ಮೂಢ ಸಮಾಜ” ಎಂದು ಕಿಡಿಕಾರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180