ಕೋಲಾರ | ದಂಡ ಕಟ್ಟಿದರೆ ದೇವರನ್ನು ಮುಟ್ಟಲು ಬಿಡುವರೆ?: ಕಾಂಗ್ರೆಸ್ ಮುಖಂಡ ಆರ್ ಧರ್ಮಸೇನ ಪ್ರಶ್ನೆ

  • ಉಳ್ಳೇರಹಳ್ಳಿಗೆ ಕೆಪಿಸಿಸಿ ಮುಖಂಡರು; ಹೋರಾಟಗಾರ ಚೇತನ್ ಭೇಟಿ 
  • ಸಂತ್ರಸ್ತ ದಲಿತ ಕುಟುಂಬಕ್ಕೆ ಸಾಂತ್ವನ, ಕೆಪಿಸಿಸಿಯಿಂದ ಆರ್ಥಿಕ ನೆರವು 

ಕೋಲಾರ ಜಿಲ್ಲೆ ಮಾಲೂರು ತಾಲೂಕು ಉಳ್ಳೇರಹಳ್ಳಿ ಗ್ರಾಮದಲ್ಲಿ ದಲಿತ ಬಾಲಕ ದೇವರ ಗುಜ್ಜುಕೋಲು ಮುಟ್ಟಿದ್ದಕ್ಕೆ ಆತನನ್ನು ಥಳಿಸಿ, ಕುಟುಂಬಕ್ಕೆ ದಂಡ ಮತ್ತು ಬಹಿಷ್ಕಾರದ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಮುಖಂಡರು ಮತ್ತು ಹೋರಾಟಗಾರ ಚೇತನ್ ಅಹಿಂಸಾ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಭೇಟಿ ಬಳಿಕ ನಗರದಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್ ಧರ್ಮಸೇನ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಬಾಲಕ ದೇವರ ಗುಜ್ಜಕೋಲು ಮುಟ್ಟಿದನೆಂದು ಗ್ರಾಮದ ಕೆಲವರು ದಂಡ ವಿಧಿಸಿದ್ದಾರೆ. ನಿಮಗೆ ಬೇಕಾಗಿರುವ ದಂಡವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ಕಟ್ಟಲು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಮಾಡಿಕೊಡಲು ನಿಮ್ಮಿಂದ ಸಾಧ್ಯವೆ” ಎಂದು ಪ್ರಶ್ನಿಸಿದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ. ದಲಿತರ ರಕ್ಷಣೆಗೆ ಮುಂದಾಗದಿದ್ದರೆ ಈ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. 

“ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಇದುವರೆಗೂ ಯಾವ ಸಚಿವರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ದಲಿತರ ಹೆಸರಿನಲ್ಲಿ ಸ್ಥಾನಮಾನ ಪಡೆದಿರುವ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಕೂಡ ಬಂದಿಲ್ಲ” ಎಂದು ಕಿಡಿಕಾರಿದರು.

“ಉಳ್ಳೇರಹಳ್ಳಿ ಘಟನೆ ನಂತರ ಬಾಲಕನ ತಾಯಿ ಶೋಭಾ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಏನಾದರೂ ಅನಾಹುತವಾದರೆ ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

“ಹಿಂದೆಯೂ ಎರಡು ಬಾರಿ ಕುಟುಂಬದ ಮೇಲೆ ದೌರ್ಜನ್ಯ ನಡೆದಿದೆ. ಊರ ಹೊರಗೆ ಬದುಕು ಕಟ್ಟಿಕೊಂಡಿದ್ದಾರೆ. ಚಿರತೆ ಬಂದು ತೊಂದರೆ ಕೊಡುತ್ತಿದೆ. ಇಂಥ ಕಷ್ಟದ ಬದುಕು ಸಾಗಿಸುತ್ತಿರುವ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಊರಿನಲ್ಲಿ ಎಲ್ಲ ಸಮುದಾಯದ ಜನರು ಇದ್ದಾರೆ. ಘಟನೆ ನಡೆದಿರುವುದು ದುರದೃಷ್ಟಕರ. ಆರೋಪಿಗಳ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಕೆಪಿಸಿಸಿ ಎಸ್‌ಸಿ ಘಟಕದ ಉಪಾಧ್ಯಕ್ಷ ರಾಥೋಡ್ ಮಾತನಾಡಿ, “ರಾಜ್ಯದಲ್ಲಿ ದಲಿತರ ಮೇಲೆ 23,095 ದೌರ್ಜನ್ಯ ಪ್ರಕರಣಗಳು ನಡೆದಿವೆ. ಬಿಜೆಪಿ ಈ ಸಂಬಂಧ ಕ್ರಮ ವಹಿಸಿಲ್ಲ. ಹಲವು ಪ್ರಕರಣ ಇನ್ನೂ ಹೊರಬಂದಿಲ್ಲ. ರಾಜಿ, ಪಂಚಾಯಿತಿ ಮಾಡಿಯೇ ಮುಗಿಸಿಬಿಡುತ್ತಾರೆ” ಎಂದು ಆರೋಪಿಸಿದರು. 

ಕೋಲಾರ ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಕೆ ಜಯದೇವ್, ರಾಜ್ಯ ಸಂಚಾಲಕ ಕೆ ಸಿ ಜ್ಞಾನೇಶ್, ಮುಖಂಡರಾದ ರಾಮಯ್ಯ, ಎಂ ಪ್ರಭಾಕರ್, ಜಗನ್, ಲಾಲ್ ಬಹದ್ದೂರ್ ಶಾಸ್ತ್ರಿ, ಕಾಳಯ್ಯ, ಮುನಿರಾಜ್, ಖಾದ್ರಿಪುರ ಬಾಬು ಇದ್ದರು.

Image
ಕೋಲಾರ

ದಲಿತ ಬಾಲಕನ ಮೇಲಿನ ದೌರ್ಜನ್ಯ ಖಂಡನೀಯ
“ದಲಿತ ಬಾಲಕನಿಗೆ ದಂಡ ವಿಧಿಸಿ ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಸಾವಿರಾರು ವರ್ಷಗಳಿಂದ ದಲಿತರು, ಮಹಿಳೆಯರು, ಶೂದ್ರರು, ಹಿಂದುಳಿದ ವರ್ಗ ಮತ್ತು ಬಡವರ ಮೇಲೆ ಸತತವಾಗಿ ದಬ್ಬಾಳಿಕೆ ನಡೆಯುತ್ತಿದೆ. ಪ್ರಸ್ತುತ ಸಮಾಜಕ್ಕೆ ನ್ಯಾಯ ಬೇಕಾಗಿದೆ. ನ್ಯಾಯವೆಂದರೆ ಇತಿಹಾಸದ ತಪ್ಪುಗಳನ್ನು ತಿದ್ದಬೇಕಿದೆ” ಎಂದು ನಟ ಮತ್ತು ಹೋರಾಟಗಾರ ಚೇತನ್ ಅಹಿಂಸಾ ಅಭೀಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಉಳ್ಳೇರಹಳ್ಳಿ ಗ್ರಾಮಕ್ಕೆ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಭೇಟಿ: ದಲಿತ ಕುಟುಂಬಕ್ಕೆ ಸಾಂತ್ವನ

“ದೇವರನ್ನು ನಂಬಿ ಬಾಲಕನ ತಾಯಿ ಶೋಭಾ ದೇಗುಲಕ್ಕೆ ಹೋಗುತ್ತಿದ್ದರು. ಭೇದಭಾವ ಮೂಡಿಸುವ ಧರ್ಮ ಬೇಕಾಗಿಲ್ಲ. ಯಾವ ದೇವರೂ ಬೇಡ, ಯಾವ ದೇವಸ್ಥಾನವೂ ಅಗತ್ಯವಿಲ್ಲ. ಬುದ್ಧ, ಅಂಬೇಡ್ಕರ್, ಬಸವ, ಪೆರಿಯಾರ್, ಫುಲೆ ಮತ್ತು ಕುವೆಂಪು ಹೇಳಿರುವ ಸಮಾನತೆ, ನ್ಯಾಯ ಮತ್ತು ವೈಜ್ಞಾನಿಕ ಮನೋಭಾವ ಬೇಕಿದೆ” ಎಂದು ಸಲಹೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180