ಕೊಪ್ಪಳ | ಹಾಸ್ಟೆಲ್‌ ಆವರಣದಲ್ಲೇ ಇರುವ ಟ್ರಾನ್ಸ್‌ಫಾರ್ಮರ್‌: ವಿದ್ಯಾರ್ಥಿಗಳಲ್ಲಿ ಅಪಾಯದ ಆತಂಕ

  • ತ್ಯಾಜ್ಯ ನೀರು ಹರಿದುಹೋಗಲು ಸರಿಯಾದ ಚರಂಡಿ ಇಲ್ಲ
  • ವಸತಿ ನಿಲಯದ ಸುತ್ತಮುತ್ತ ವಿದ್ಯುತ್ ವ್ಯವಸ್ಥೆ ಸರಿಯಿಲ್ಲ

ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಆವರಣಕ್ಕೆ ಹೊಂದಿಕೊಂಡಂತೆ ವಿದ್ಯುತ್‌ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಇದ್ದು, ಅಪಾಯದ ಆತಂಕ ವಿದ್ಯಾರ್ಥಿನಿಯರನ್ನು ಕಾಡುತ್ತಿದೆ. ಅದನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಕಲ್ಯಾಣ ನಗರದಲ್ಲಿರುವ ಬಾಲಕಿಯರ ವಸತಿ ನಿಲಯದ ಕಟ್ಟಡಕ್ಕೆ ತಡೆಗೋಡೆ (ಕಾಂಪೌಂಡ್) ಇಲ್ಲ. ವಸತಿ ನಿಲಯದ ಆವರಣಕ್ಕೆ ಹೋಂದಿಕೊಂಡಂತೆ ಟ್ರಾನ್ಸ್‌ಫಾರ್ಮರ್ ಇರುವುದರಿಂದ ವಿಧ್ಯಾರ್ಥಿಗಳು ಭಯದಿಂದ ಓಡಾಡುತ್ತಿದ್ದಾರೆ. 

“ವಿದ್ಯುತ್‌ ಪರಿವರ್ತಕ ಇರುವುದರಿಂದ ವಿದ್ಯಾರ್ಥಿಗಳು ಮೈದಾನದಲ್ಲಿ ಆಟ ಆಡಲು ಹಿಂಜರಿಯುತ್ತಿದ್ದಾರೆ. ಜೊತೆಗೆ ತಡೆಗೋಡೆಯೂ ಇಲ್ಲದ ಕಾರಣ ಸುತ್ತಮುತ್ತಲಿನ ಯುವಕರು ಮತ್ತು ಕೆಲವು ಕಿಡಿಗೇಡಿಗಳಿಂದ ವಿದ್ಯಾರ್ಥಿನಿಯರು ಕಿರುಕುಳ ಅನುಭವಿಸುತ್ತಿದ್ದಾರೆ” ಎಂದು ಸ್ಥಳೀಯರು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ. 

"ಮಕ್ಕಳು ಆಟ ಆಡುವ ಆವರಣಕ್ಕೆ ಹೊಂದಿಕೊಂಡಂತೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಯಾವಾಗ ಬೇಕಾದರೂ ಸಮಸ್ಯೆ ಎದುರಾಗಬಹುದು. ಹಾಗಾಗಿ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು" ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ವಸತಿ ನಿಲಯದ ತ್ಯಾಜ್ಯ ನೀರು ಹೊರಗೆ ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಹಾಸ್ಟೆಲ್‌ ಸುತ್ತಮುತ್ತ ವಿದ್ಯುತ್ ವ್ಯವಸ್ಥೆ ಇಲ್ಲ" ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮೂಲಭೂತ ಸೌಕರ್ಯಗಳಿಲ್ಲದ ಹಾಲಹಳ್ಳಿ: ಗ್ರಾಮಕ್ಕೆ ತಾಲೂಕು ಪಂಚಾಯತಿ ಅಧಿಕಾರಿಗಳ ಭೇಟಿ

ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ದಿನ.ಕಾಮ್ ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಾರ್ಡನ್ ಸುರೇಶ್ ಅವರನ್ನು ಸಂಪರ್ಕಿಸಿದೆ. “ಕಲ್ಯಾಣ ಕರ್ನಾಟಕ ಯೋಜನೆ ಅಡಿ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಕೈಗೊಳ್ಳುತ್ತೇವೆ. ವಿದ್ಯುತ್ ಪರಿವರ್ತಕ ತೆರವಿಗೆ ಸಂಬಂಧಿಸಿದಂತೆ ಕೂಡಲೇ ಗಂಗಾವತಿ ವಿದ್ಯುತ್ ಸರಬರಾಜು ನಿಗಮಕ್ಕೆ ಅರ್ಜಿ ಸಲ್ಲಿಸುತ್ತೇವೆ” ಎಂದು ಸುರೇಶ್‌ ತಿಳಿಸಿದ್ದಾರೆ.

ಮಾಸ್ ಮೀಡಿಯಾ ಕೊಪ್ಪಳ ಜಿಲ್ಲಾ ಸಂಯೋಜಕ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180