ಕೊಪ್ಪಳ | ಐದು ದಿನಗಳ ಕಾಲ ನಡೆಯಲಿದೆ ವಿಶೇಷ ಸಸ್ಯ ಸಂತೆ

Sasya
  • ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಸಸ್ಯ ಸಂತೆ
  • ಸುಮಾರು 10 ಸಾವಿರ ಜನರು ಸಂತೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ

ಸಾಮಾನ್ಯವಾಗಿ ಮಾವು ಮೇಳ, ತರಕಾರಿ ಮೇಳ ಹಾಗೂ ಫಲಪುಷ್ಪ ಮೇಳವನ್ನು ನೋಡಿದ್ದೇವೆ. ಆದರೆ, ಕೊಪ್ಪಳದಲ್ಲಿ ವಿಭಿನ್ನವಾಗಿ ಸಸ್ಯ ಸಂತೆ ನಡೆಯುತ್ತಿದೆ. ಇಲ್ಲಿ ನಾನಾ ಬಗೆಯ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಸಸ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.  

ಕೊಪ್ಪಳ ಜಿಲ್ಲಾ ತೋಟಗಾರಿಕೆ ಇಲಾಖೆಯು ಸಸ್ಯ ಸಂತೆಯನ್ನು ಆಯೋಜಿಸಿದೆ. ಆಗಸ್ಟ್‌ 15ರಂದು ಆರಂಭವಾಗಿರುವ ಸಂತೆ ಆಗಸ್ಟ್‌ 20 ರವರೆಗೆ ನಡೆಯಲಿದೆ. ಸಂತೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಕುರಿತು ಮಾಹಿತಿ ನೀಡಿ ಉತ್ತೇಜಿಸಲಾಗುತ್ತಿದೆ. ಐದು ದಿನಗಳಲ್ಲಿ ಸುಮಾರು 10 ಸಾವಿರ ಜನರು ಸಂತೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇಲಾಖೆಯ ಸಸ್ಯಾಗಾರದಲ್ಲಿ ಉತ್ಪಾದಿಸಿದ ಹಣ್ಣು, ತರಕಾರಿ, ಹೂವು, ಅಲಂಕಾರಿಕ ಗಿಡಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರತಿಯೊಂದಕ್ಕೂ ಇಲಾಖೆಯು ದರ ನಿಗದಿ ಮಾಡಿದ್ದು, ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. ಜನರು ತಮಗಿಚ್ಚಿಸಿದ ಸತ್ಯಗಳನ್ನು ಖರೀದಿಸಬಹುದಾಗಿದೆ. 

"ವಿಶೇಷ ಹಣ್ಣಿನ ಬೆಳೆಗಳಾದ ವಾಟರ್ ಆಪಲ್, ಲಿಚ್ಚಿ, ಬೀಜ ರಹಿತ ಲಿಂಬೆ, ರಾಮಫಲ, ಲಕ್ಷ್ಮಣಫಲ, ಹಲಸು ಸೇರಿ ಇನ್ನು ಹಲವು ಬಗೆಯ 10.000ಕ್ಕೂ ಹೆಚ್ಚಿನ ವಿವಿಧ ತಳಿಗಳ ಸಸಿಗಳು ಸಂತೆಯಲ್ಲಿ ಲಭ್ಯವಾಗಿವೆ." ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನು ತರಕಾರಿ ಬೆಳೆಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ನುಗ್ಗೆ, ಕರಿಬೇವು ಹಾಗೂ ನಾನಾ ಹೈಬ್ರಿಡ್ ಸಸಿಗಳು, ಹೂವು ಬೆಳೆಗಳಾದ ಗುಲಾಬಿ, ಮಲ್ಲಿಗೆ, ಪಾರಿಜಾತ, ಕನಕಾಂಬರ, ಮುಂತಾದ ಬಹುವಾರ್ಷಿಕ ಬೆಳೆಗಳಲ್ಲದೇ ಅಲ್ಪಾವಧಿ ಬೆಳೆಗಳಾದ ಚೆಂಡು ಹೂ, ಗಡ್ಡೆ ಬೆಳೆಗಳಾದ ಸುಗಂಧರಾಜದಂತಹ ಗಡ್ಡೆ ಹೂಗಳ ಸಸಿಗಳು ಸಹ ಸಸ್ಯ ಸಂತೆಯಲ್ಲಿ ಲಭ್ಯವಿರುತ್ತವೆ.

ಈ ಸುದ್ದಿ ಓದಿದ್ದೀರಾ?; ಸ್ವತಂತ್ರ ಭಾರತದ ಧ್ರುವತಾರೆ ನೆಹರೂ ಬಗ್ಗೆ ಕುವೆಂಪು ಸುಭಾಷ್ ಬೋಸ್ ಏನಂದಿದ್ದಾರೆ ಗೊತ್ತೇ?

ಸಸ್ಯ ಸಂತೆ ಕುರಿತು ಮಾತನಾಡಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, "ಈ ಸಸ್ಯ ಸಂತೆಯಲ್ಲಿ ರೈತರಿಗೆ ಅಷ್ಟೇ ಅಲ್ಲದೆ, ಸಾರ್ವಜನಿಕರ ಆಸಕ್ತಿಗೆ ತಕ್ಕಂತೆ ಎಲ್ಲ ಸಸಿಗಳು ಲಭ್ಯಯಿವೆ. ಸಂತೆಯಲ್ಲಿ ರೈತರಿಗೆ ಯಾವ ರೀತಿ ತೋಟಗಾರಿಕೆ ಮಾಡಬೇಕು, ಇಲಾಖೆಯಿಂದ ಕೊಡುವ ಸೌಲಭ್ಯಗಳು, ಬ್ಯಾಂಕ್ ಸೌಲಭ್ಯ, ವಿಮೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಬಗ್ಗೆ ಅರಿವು ಮೂಡಿಸಲಾಗುತ್ತದೆ" ಎಂದರು.

"ಈ ಹಿಂದೆ ಸಸ್ಯ ಸಂತೆ ಆಯೋಜಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ. ಸುಮಾರು 10 ಸಾವಿರ ಜನರು ಸಸ್ಯ ಸಂತೆಯ ಲಾಭ ಪಡೆಯುವ ನಿರೀಕ್ಷೆ ಇದೆ" ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್