ಕೊಪ್ಪಳ | ಭಾರತೀಯರ ಹೃದಯದಲ್ಲಿ ಹೋರಾಟದ ಕಿಡಿ ಹೊತ್ತಿಸಿದ ನೇತಾರ ಸುಭಾಷ್‌ ಚಂದ್ರ ಬೋಸ್‌

Koppal | Subhash Chandra Bose was a leader the freedom struggle ; Deepa Dharwad
  • ನೇತಾಜಿ, ನಮ್ಮ ದೇಶದಲ್ಲಿ ಶೋಷಣೆರಹಿತ ಸಮಾಜವಾದಿ ಭಾರತ ಸ್ಥಾಪಿಸುವ ಕನಸು ಕಂಡಿದ್ದರು
  • ನೇತಾಜಿಯವರು ಸ್ವಂತ ಜೀವನವನ್ನು ಬದಿಗೊತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು

ಸ್ವಾತಂತ್ರ್ಯ ಸಂಗ್ರಾಮದ ಸಮರಶೀಲ ನೇತಾರ, ಸುಭಾಷ್‌ ಚಂದ್ರ ಬೋಸ್ ತಮ್ಮ ಧೀರೋದಾತ್ತ ಹೋರಾಟದಿಂದ ಬಿಟೀಷರ ಎದೆ ನಡುಗಿಸಿದರು. ಭಾರತೀಯರ ಹೃದಯದಲ್ಲಿ ಹೋರಾಟದ ಕಿಡಿಯನ್ನು ಹೊತ್ತಿಸಿ, ಸ್ವಾತಂತ್ರ್ಯ ಹೋರಾಟದ ಜ್ವಾಲೆಯಾಗಿ ಬೆಳಗಿದ ಮಹಾನ್ ಕ್ರಾಂತಿಕಾರಿಯಾಗಿದ್ದಾರೆ ಎಂದು ನೇತಾಜಿ ಜನ್ಮ ಶತಮಾನೋತ್ಸವ ಆಚರಣೆ ಸಮಿತಿಯ ನಾಯಕಿ ದೀಪಾ ಧಾರವಾಡ ತಿಳಿಸಿದರು.

ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ನೇತಾಜಿಯವರ ಜನ್ಮದಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

“ನೇತಾಜಿಯವರಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸುವುದು ಕೇವಲ ಒಂದು ಸಂಪ್ರದಾಯವಲ್ಲ. ಅದು ನಮ್ಮ ಸ್ಫೂರ್ತಿಯನ್ನು ಜಾಗೃತಗೊಳಿಸುವ ದಿನ. ಅವರ ತತ್ವ, ಆದರ್ಶ-ಸಿದ್ಧಾಂತಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಸಂಕಲ್ಪ ಕೈಗೊಳ್ಳುವ ದಿನ. ಅವರ ನಿರ್ವೈಯಕ್ತಿಕ ಜೀವನ, ಮಾನವಪ್ರೇಮ, ಸರ್ವರ ಏಳಿಗೆಗಾಗಿ ತುಡಿತ ಸೇರಿದಂತೆ ಹುತೇಕ ಉನ್ನತ ಚಿಂತನೆಗಳ ಮಾರ್ಗದಲ್ಲಿ ಮುನ್ನಡೆಯಲು ಪ್ರತಿಜ್ಞೆಯನ್ನು ತೊಡುವ ದಿನ. ನಮ್ಮ ಮುಂದೆ ನಡೆಯುತ್ತಿರುವ ಅನ್ಯಾಯ ಅಸತ್ಯದ ವಿರುದ್ಧ ಧ್ವನಿ ಎತ್ತಲು ನಿರ್ಧಾರ ಮಾಡಬೇಕಾದ ದಿನ. ಈ ಹಿನ್ನೆಲೆಯಲ್ಲಿ ನೇತಾಜಿಯವರ 125ನೇ ಜನ್ಮವಾರ್ಷಿಕೋತ್ಸವವನ್ನು ಶ್ರದ್ಧೆಯಿಂದ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದರು.

“ನೇತಾಜಿ ಭಾರತೀಯರಿಗೆ ಸ್ವಾತಂತ್ರ್ಯದೊರಕಿಸಿಕೊಡಲು ಮತ್ತು ಶೋಷಣೆ, ದಾರಿದ್ರ್ಯ, ಅಜ್ಞಾನಗಳಿಂದ ನರಳುತ್ತಿದ್ದ ಕೋಟ್ಯಂತರ ಜನರ ಜೀವನಕ್ಕೆ ಬೆಳಕು ನೀಡುವ ಉದಾತ್ತ ಗುರಿಯೆಡೆಗೆ ಸಾಗಲು ತಮ್ಮ ಐಸಿಎಸ್ ಪದವಿ ಹಾಗೂ ಸ್ವಂತ ಜೀವನವನ್ನು ಬದಿಗೊತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ಸಂಧಾನಪರ ನಾಯಕರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದುದನ್ನು ಧಿಕ್ಕರಿಸಿ, ಹೋರಾಟಕ್ಕೆ ಸಮರಶೀಲ ಮಾರ್ಗವನ್ನು ತೋರಿಸಿಕೊಟ್ಟರು” ಎಂದು ತಿಳಿಸಿದರು.

“ರಷ್ಯಾದಲ್ಲಿ  1917ರಲ್ಲಿ ನಡೆದ ಸಮಾಜವಾದಿ ಕ್ರಾಂತಿಯಿಂದ ಸ್ಪೂರ್ತಿಗೊಂಡಿದ್ದ ನೇತಾಜಿಯವರು ನಮ್ಮ ದೇಶದಲ್ಲಿಯೂ ಶೋಷಣೆರಹಿತ ಸಮಾಜವಾದಿ ಭಾರತವನ್ನು ಸ್ಥಾಪಿಸುವ ಕನಸನ್ನು ಹೊಂದಿದ್ದರು. ದೇಶ ವಿದೇಶಗಳಲ್ಲಿ ಸಂಚರಿಸಿ ಬ್ರಿಟೀಷರ ವಿರುದ್ಧ ಹೋರಾಡಲು ಬೃಹತ್ ಸೈನ್ಯವನ್ನು ಕಟ್ಟಿದ್ದರು. ಅಪಾರ ಸಂಖ್ಯೆಯಲ್ಲಿ ಯುವಜನರನ್ನು ಮತ್ತು ಮಹಿಳೆಯರನ್ನು ಹುರಿದುಂಬಿಸಿದರು. ʼಝಾನ್ಸಿ ರಾಣಿ ರೆಜಿಮೆಂಟ್ʼ ಹೆಸರಿನಲ್ಲಿ 1200 ಮಹಿಳೆಯರಿರುವ ಸೈನ್ಯವನ್ನು ಕಟ್ಟಿ ಬ್ರಿಟಿಷರಲ್ಲಿ ಮೈನಡುಕ ಹುಟ್ಟಿಸಿದ ಮಹಾನ್‌ ಕ್ರಾಂತಿಕಾರಿ ನೇತಾಜಿಯವರು” ಎಂದರು.

“ನನಗೆ ರಕ್ತ ಕೊಡಿ – ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ' ಎಂಬ ಅವರ ಘೋಷಣೆ ವಿದ್ಯಾರ್ಥಿ-ಯುವಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೂಜುಗಲ್ಲಿನಂತೆ ಸೆಳೆದದ್ದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತವೆ. ಇಂತಹ ಅನೇಕ ಸಾಹಸಮಯ ಹೋರಾಟದ ಫಲವಾಗಿ ಬ್ರಿಟೀಷರ ಎದೆ ನಡುಗಿತು. ಇದರಿಂದ ಇನ್ನು ಭಾರತದಲ್ಲಿ ಉಳಿಗಾಲವಿಲ್ಲ ಎಂದರಿತ ಬ್ರಿಟಿಷರು ಭಾರತದಿಂದ ಕಾಲ್ಕಿತ್ತರು” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ನೇತಾಜಿ ಕನಸಿನ ಭಾರತ ಕಟ್ಟಲು ಪಣತೊಡಲು ಕರೆ

ಪ್ರಸ್ತುತ ಸಮಾಜದಲ್ಲಿಯೂ ವಿದ್ಯಾರ್ಥಿಗಳು, ಯುವಜನರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶ, ವ್ಯಕ್ತಿತ್ವ ಮತ್ತು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಕು” ಎಂದು ಕರೆ ನೀಡಿದರು.

ಈ ಈ ಸಂದರ್ಭದಲ್ಲಿ ವೇದಿಕೆ ಮೇಲೆ ಬಿನ್ನಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಬ್ಬಂದಿ ವಿರುಪಾಕ್ಷಪ್ಪ, ಪಂತರರವಿ ಕೌದಿ ಇತಿಹಾಸ ವಿಜಯಕುಮಾರ್ ತಿಮ್ಮಾಪುರ,  ಬಸವರಾಜ್ ದೊಡ್ಡಮನಿ, ವಿಶ್ವನಾಥ್ ತಳವಾರ್, ರೇಖಾ ಹಿರೇಮಠ, ಗುರುರಾಜ್ ಇದ್ದರು.

ಕೊಪ್ಪಳ ಜಿಲ್ಲಾ ಸಂಯೋಜಕ ಭೀಮಾಶಂಕರ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app