ಕೊಪ್ಪಳ | ಎರಡು ಸಮುದಾಯಗಳ ನಡುವೆ ಘರ್ಷಣೆ: ಇಬ್ಬರ ಸಾವು, ಒಬ್ಬರಿಗೆ ಗಾಯ

  • ತಳವಾರ ಸಮುದಾಯದ ಯುವತಿಯನ್ನು ಮದುವೆಯಾಗಿದ್ದ ಮೊಹಮ್ಮದ್ ಸಾಬ
  • ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್ 20ರವರೆಗೆ ನಿಷೇಧಾಜ್ಞೆ ಜಾರಿ

ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು ಇಬ್ಬರು ಮೃತಪಟ್ಟಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೊಪ್ಪಳ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಖಚಿತ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಅಂತರ್ಜಾತಿ ವಿವಾಹವೇ ಕಾರಣವೆಂದು ಹೇಳಲಾಗಿದೆ. 

ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ತಳವಾರ ಸಮುದಾಯದ ಯುವತಿ ಮತ್ತು ಮುಸ್ಲಿಂ ಸಮುದಾಯದ ಯುವಕ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಅವರ ವಿವಾಹವನ್ನು ವಿರೋಧಿಸಿದ್ದ ಗ್ರಾಮದ ಕೆಲವರು ಘರ್ಷಣೆ ನಡೆಸಿದ್ದಾರೆ.

ಕಲಹಯಲ್ಲಿ ಗ್ರಾಮದ ಪಾಷಾವಲಿ ಮೊಹಮ್ಮದ್ ಸಾಬ (27) ಮತ್ತು ಯಂಕಪ್ಪ ಶಾಮಪ್ಪ ತಳವಾರ (44) ಸಾವನ್ನಪ್ಪಿದ್ದಾರೆ. ಧರ್ಮಣ್ಣ ನಾಗಲಿಂಗಪ್ಪ ಎಂಬುವವರು ತೀವ್ರ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾಷಾವಲಿ ಕಳೆದ ಕೆಲ ದಿನಗಳ ಹಿಂದೆ ತಳವಾರ ಸಮುದಾಯದ ಯುವತಿಯನ್ನು ಮದುವೆಯಾಗಿದ್ದರು. ಯುವತಿಯ ಸಮುದಾಯವು ವಿವಾಹನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ, ಎರಡು ಸಮುದಾಯಗಳ ನಡುವಿನ ವಿವಾದವು ಬೂದಿ ಮುಚ್ಚಿದ ಕೆಂಡದಂತಿತ್ತು ಎಂದು ತಿಳಿದು ಬಂದಿದೆ. 

ಪಾಷಾವಲಿ ಅವರು ಗುರುವಾರ (ಆಗಸ್ಟ್ 11) ಹೂವು ತರಲು ತಳವಾರ ಬೀದಿಗೆ ಹೋದಾಗ, ಯಂಕಪ್ಪ ತಳವಾರ ಎಂಬುವವರು ಯುವಕನನ್ನು ಎಳೆದೊಯ್ದು ಚೆನ್ನಾಗಿ ಥಳಿಸಿದ್ದಾರೆ. ಪಾಷಾವಲಿಯನ್ನು ಥಳಿಸಿರುವ ಸುದ್ದಿ ತಿಳಿದ ಕೂಡಲೇ, ಯುವಕನ ಸಮುದಾಯದ ಯುವಕರು ಯಂಕಪ್ಪನ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಮುಂದುವರೆದ ಮಳೆ ಆರ್ಭಟ: ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ

ಪ್ರಸ್ತುತ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ನೂರಕ್ಕೂ ಹೆಚ್ಚು ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಆಗಸ್ಟ್ 20ರವರೆಗೆ 144ನೇ ವಿಧಿ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲ್ಲಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಹಿಂಸಾಚಾರ ಖಂಡಿಸಿ ಮುಸ್ಲಿಂ ಮಹಿಳೆಯರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೂ ತರಲು ಹೋಗಿದ್ದಾಗ ನಮ್ಮ ಹುಡುಗನಿಗೆ ಹೊಡೆದರು ಎಂದು ಹೇಳಿದ ಮಹಿಳೆಯರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್