
- 2022ರ ಜೂನ್ 6ರಂದು ನಡೆದಿದ್ದ ಪ್ರಕರಣ ಈಗ ಬೆಳಕಿಗೆ
- ತಂದೆಯ ಸಾಲ ತೀರಿಸಲು ಪೂಜೆ ಮಾಡಬೇಕೆಂದು ನಂಬಿಸಿದ್ದರು
“ನೀವು ಶ್ರೀಮಂತರಾಗಬೇಕಾದರೆ, ನಿಮ್ಮ ಅಪ್ಪನ ಸಾಲ ತೀರಬೇಕು ಎಂದರೆ ಬೆತ್ತಲೆ ಪೂಜೆ ಮಾಡಬೇಕು” ಎಂದು ಬಾಲಕನಿಗೆ ಬೆತ್ತಲೆ ಪೂಜೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಪ್ಪಳ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಶರಣಪ್ಪ ತಳವಾರ, ಗಂಗನಾಳ ಗ್ರಾಮದ ವಿರೂಪನಗೌಡ ಮತ್ತು ಮೆತಗಲ್ ಗ್ರಾಮದ ಶರಣಪ್ಪ ಓಜನಹಳ್ಳಿ ಎಂಬುವರನ್ನು ಬಂಧಿಸಲಾಗಿದೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ (ಅ.2) ರಾತ್ರಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಘಟನೆ ಕುರಿತು ಪ್ರಕರಣ ದಾಖಲಾದ 24 ಗಂಟೆಗಳಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ತನಿಖೆಯನ್ನು ಗ್ರಾಮೀಣ ವೃತ್ತದ ಸಿಪಿಐಗೆ ವಹಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.
ಏನಿದು ಘಟನೆ?
ಕೊಪ್ಪಳ ತಾಲೂಕಿನ ಹಾಸಗಲ್ಲ ಗ್ರಾಮದ 15 ವರ್ಷದ ಬಾಲಕನಿಗೆ, "ನಿಮ್ಮ ತಂದೆ ಮನೆ ನಿರ್ಮಿಸಲು ಬಹಳ ಸಾಲ ಮಾಡಿದ್ದು, ನಿನಗೆ ಬೆತ್ತಲೆ ಪೂಜೆ ಮಾಡಿದರೆ ನಿಮಗೆ ಸಾಲ ಕೊಟ್ಟವರು ಯಾರು ಸಾಲ ಕೇಳಲು ಬರುವುದಿಲ್ಲ. ಅಲ್ಲದೆ ನೀವು ಒಮ್ಮಿಂದಲೇ ಶ್ರೀಮಂತರಾಗುತ್ತೀರಿ” ಎಂದು ಅಪ್ರಾಪ್ತ ಬಾಲಕಿನಿಗೆ ಪುಸಲಾಯಿಸಿ ಜೂನ್ 16ರಂದು ರಾತ್ರಿ 8 ರಿಂದ 11 ಗಂಟೆಯ ಅವಧಿಯೊಳಗೆ ಹುಬ್ಬಳ್ಳಿಯ ತಿಮ್ಮಸಾಗರ ಗ್ರಾಮದ ವಾಲ್ಮೀಕಿ ಭವನದಲ್ಲಿ ಬಾಲಕನನ್ನು ಅಕ್ರಮ ಬಂಧನದಲ್ಲಿರಿಸಿದ್ದರು. ಬಳಿಕ ಬೆತ್ತಲೆ ಮಾಡಿ ಮೈಗೆ ವಿಭೂತಿ, ಕುಂಕುಮ ಹಚ್ಚಿ ಕೊರಳಲ್ಲಿ ಹೂವಿನ ಹಾರ ಹಾಕಿ ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು, ನಿಂಬೆಹಣ್ಣನ್ನು ಕತ್ತರಿಸಿ ನಿಂಬೆಹಣ್ಣಿನ ರಸವನ್ನು ತಲೆಯ ಮೇಲೆ ಹಿಂಡಿ, ಮೈ ಕೈ ಮತ್ತು ಮರ್ಮಾಂಗ ಮುಟ್ಟಿ ಅಸಹ್ಯದಿಂದ ವರ್ತಿಸಿದ್ದರು. ಅಲ್ಲದೇ, ಈ ಎಲ್ಲ ಘಟನೆಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಟ್ಟುಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಪಂಜಾಬ್ | ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್
ಬಳಿಕ ವಾಮಾಚಾರ ಆಚರಣೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಸಂಬಂಧ ಮೂವರ ವಿರುದ್ಧ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 343, 504, 506, 34, 66 (ಇ), 67(ಬಿ) ಐ.ಟಿ ಕಾಯ್ದೆ ಮತ್ತು 74, 75 ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.