ಕೊಪ್ಪಳ | ತುಂಗಭದ್ರಾ ನೀರು ಹರಿಸಿ, ಅನ್ನದಾತರ ಬೆಳೆ ಉಳಿಸಿ; ರೈತರ ಒತ್ತಾಯ

ಹಿಂಗಾರು ಬೆಳೆಗೆ ನೀರು ಕೊಡಿ
  • ಹಿಂಗಾರು ಹಂಗಾಮಿನ ಬೆಳೆ ತೆಗೆದು, ಸಾಲದ ಸುಳಿಯಿಂದ ಹೊರಬರಲು ಬಿಡಿ
  • ಹತ್ತಿ, ಮೆಣಸಿನಕಾಯಿ, ಜೋಳ, ತೊಗರಿಯಂತಹ ಬೆಳೆಗಳಿಗೆ ಬೇಕಿದೆ ಕಾಲುವೆ ನೀರು

ಹಿಂಗಾರು ಹಂಗಾಮಿನಲ್ಲಿ ಬೆಳೆ ತೆಗೆಯಲು ಅನುಕೂಲವಾಗುವಂತೆ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ 2023ರ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳ ಕೊನೆಯವರೆಗೆ ನೀರು ಹರಿಸಬೇಕೆಂದು ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಡೆಸಿದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ "ಹಿಂಗಾರು ಹಂಗಾಮಿಗೆ ಕಾಲುವೆಯಿಂದ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಬೇಡಿ. ಸಮರ್ಪಕವಾದ ಬೆಳೆ ತೆಗೆಯಲು ನೀರು ಬೇಕು" ಎಂದು ವಿವಿಧ ಸಂಘಗಳ ರೈತ ಮುಖಂಡರು ಮತ್ತು ರೈತರು ಮನವಿ ಮಾಡಿದ್ದಾರೆ.

Eedina App

ಕರ್ನಾಟಕ ರೈತ ಸಂಘದ ಚಾಮರಸ ಮಾಲಿಪಾಟೀಲ ಸಭೆಯಲ್ಲಿ ಮಾತನಾಡಿ, "ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಪ್ರದೇಶದಲ್ಲಿನ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳಿಗೆ ಕಳೆದ ವರ್ಷ ಸಮರ್ಪಕ ನೀರು ಸಿಗಲಿಲ್ಲ. ಭತ್ತದ ಕಟಾವು ಮುಗಿದ ಬಳಿಕ ಬೇರೆ ಬೆಳೆಗಳನ್ನು ಬೆಳೆಯಲು 1000 ಕ್ಯೂಸೆಕ್ ನೀರು ಹರಿಸಿದರೆ ರಾಯಚೂರು, ಮಾನ್ವಿ, ಶಿರವಾರ ಭಾಗದ ರೈತರಿಗೆ ಅನುಕೂಲವಾಗಲಿದೆ" ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಳೆಗೆ ನೆಟೆ ರೋಗ; ಕಂಗಾಲಾದ ರೈತರಿಂದ ನೆರವಿಗೆ ಆಗ್ರಹ

AV Eye Hospital ad

ಬಳ್ಳಾರಿ ಕೃಷಿಕ ಸಮಾಜದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, "ಶಿರಗುಪ್ಪ ತಾಲೂಕಿನಲ್ಲಿ ಹತ್ತಿ ಬೆಳೆ, ಬಳ್ಳಾರಿಯಲ್ಲಿ ಮೆನಸಿನಕಾಯಿ ಸಂಪೂರ್ಣ ನಾಶವಾಗಿದೆ. ಈ ಭಾಗದವರು ಜನವರಿಯಲ್ಲಿ ತೆಗೆಯುವ ಬೆಳೆಗೆ ನೀರಿನ ಪ್ರಮಾಣ ಕಡಿಮೆಯಾಗಬಾರದು" ಎಂದು ತಿಳಿಸಿದರು.

ರೈತ ಮುಖಂಡರಾದ ಎಂ. ಗೋವಿಂದಪ್ಪ ಮಾತನಾಡಿ, "ಕಳೆದ ಮೂರ್ನಾಲ್ಕು ತಿಂಗಳುಗಳ ಕಾಲ ಅತಿಹೆಚ್ಚು ಮಳೆ ಬಂದದ್ದರಿಂದ ಜಮೀನಿನಲ್ಲಿ ನೀರು ನಿಂತು ಮೊದಲನೆಯ ಬೆಳೆ ಹಾನಿಯಾಗಿದೆ. ಈಗ ಎರಡನೇ ಬೆಳೆಗೆ ವಾತಾವರಣ ಅನುಕೂಲವಾಗಿದ್ದು, ಮಾರ್ಚ್‌, ಏಪ್ರಿಲ್‌ವರೆಗೆ ನೀರು ಕೊಡಬೇಕು. ಆಗಷ್ಟೇ ರೈತರು ಉತ್ತಮ ಬೆಳೆ ತೆಗೆದು, ಸಾಲದ ಸುಳಿಯಿಂದ ಹೊರಬಂದು ಚೇತರಿಸಿಕೊಳ್ಳುತ್ತಾರೆ" ಎಂದು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app