ಕೊಪ್ಪಳ | ಸವಳು ಭೂಮಿಯಲ್ಲಿ ಬೆಳೆಯಲಿದೆ ಜಿಎನ್‌ವಿ-1109 ಭತ್ತದ ತಳಿ; ಕೃಷಿ ವಿಜ್ಞಾನಿಗಳ ಹೊಸ ಸಂಶೋಧನೆ

ಕೊಪ್ಪಳ-ಭತ್ತದ ಹೊಸ ತಳಿ
  • ಕೃಷಿಗೆ ಸೂಕ್ತವಲ್ಲದ ಸವಳು ಭೂಮಿ ಹೆಚ್ಚಳ ಹಿನ್ನೆಲೆ ಭತ್ತದ ತಳಿ ಸಂಶೋಧನೆ
  • ʼಜಿಎನ್‌ವಿ-1109 ಭತ್ತದ ತಳಿಗೆ ಗಂಗಾವತಿ ಚುರುಮುರಿ ಎಂದು ಕರೆಯಲಾಗುತ್ತೆʼ

ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸವಳು-ಜವಳು ಭೂಮಿ ಹೆಚ್ಚುತ್ತಿದ್ದು, ಕೃಷಿ ಯೋಗ್ಯವಲ್ಲದ ಭೂ ಪ್ರದೇಶ ದೊಡ್ಡದಾಗುತ್ತಿದೆ. ಇದರ ಅಪಾಯವನ್ನು ಅರಿತಿರುವ ಕೊಪ್ಪಳದ ಕೃಷಿ ವಿಜ್ಞಾನಿಗಳು ಸವಳು ಭೂಮಿಯಲ್ಲೂ ಉತ್ತಮ ಇಳುವರಿ ಪಡೆದು ಬೆಳೆಯಬಹುದಾದ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರು ಗ್ರಾಮದ ರೈತ ಮಹಾದೇವಪ್ಪ ಗದ್ದೆಯಲ್ಲಿ ಕೃಷಿ ವಿಜ್ಞಾನಿಗಳು ಜಿಎನ್‌ವಿ-1109 ಭತ್ತದ ತಳಿಯನ್ನು ಸಂಶೋಧನೆ ಮಾಡಿದ್ದಾರೆ. ಈ ತಳಿಯ ಭತ್ತವನ್ನು ಗಂಗಾವತಿ ಚುರುಮುರಿ ಎಂದೂ ಕರೆಯಲಾಗಿದೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಹೆಚ್ಚಿನ ನೀರಿನ ಬಳಕೆ ಮತ್ತು ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ವ್ಯವಸಾಯ ಯೋಗ್ಯ ಭೂಮಿ ಸವಳು-ಜವಳು ಭೂಮಿಯಾಗಿ ಪರಿವರ್ತನೆಗೊಂಡಿದೆ. ಸವಳಾಗಿರುವ ಭೂಮಿಯಲ್ಲಿ ಕಡಿಮೆ ಖರ್ಚು ಮಾಡಿ ಅಧಿಕ ಭತ್ತದ ಇಳುವರಿ ಪಡೆಯಲು ಜಿಎನ್‌ವಿ-1109 ಭತ್ತದ ತಳಿಯನ್ನು ಬೆಳೆಯಬಹುದು.

ಈ ಕುರಿತು ಕೊಪ್ಪಳದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ ಮಾತನಾಡಿ, "ಸವಳು-ಜವಳು ಭೂಮಿ ಇರುವ ರೈತರು ಚಿಂತಿಸಬೇಕಿಲ್ಲ. ಅಲ್ಲಿಯೂ ಕಡಿಮೆ ಖರ್ಚಿನಲ್ಲಿ ಬೆಳೆ ಮಾಡಿ ಅಧಿಕ ಇಳುವರಿ ಪಡೆಯಲು ರೈತರು ಜಿಎನ್‌ವಿ-1109 ಭತ್ತದ ತಳಿಯನ್ನು ಬಿತ್ತನೆ ಮಾಡಬಹುದು" ಎಂದಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ತಳಿ ವಿಜ್ಞಾನಿ ಡಾ. ಮಹಾಂತ ಶಿವಯೋಗಯ್ಯ ಮಾತನಾಡಿ, "ಜಿಎನ್‌ವಿ-1109 (ಗಂಗಾವತಿ ಚುರುಮುರಿ) ತಳಿಯನ್ನು ಮಂಡಕ್ಕಿ ತಯಾರಿಸಲು ಬಳಸಬಹುದು. ಸವಳು-ಜವಳು ಮಣ್ಣಿಗೆ ಸೂಕ್ತವಾದ ತಳಿಯಾಗಿದ್ದು, 130 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಗೆ  ಔಷಧಿ ಸಿಂಪಡಣೆ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಸಾಕು. ಇನ್ನು ಫಸಲು ಮಾಗಿದ ಹಂತದಲ್ಲಿ ಕಾಳುಗಳು ಸಿಡಿಯುವುದಿಲ್ಲ. ಹಾಗಾಗಿ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು" ಎಂದರು.

ಈ ಸುದ್ದಿ ಓದಿದ್ದೀರಾ? ತೀರ್ಥಹಳ್ಳಿ | ಎಲೆಚುಕ್ಕೆ ರೋಗಪೀಡಿತ ತೋಟಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ

ಜಿಎನ್‌ವಿ-1109 ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಫರ್ಜಾನ್‌ ಎಂ ಕೊರಬು, ಬಿತ್ತನೆ ಬೀಜ ವಿಜ್ಞಾನಿ ರಾಧಾ ಜೆ, ಕಾರಟಗಿಯ ಕೃಷಿ ಅಧಿಕಾರಿ ಬೀರಪ್ಪರ, ರೈತರಾದ ಗಾದಿಲಿಂಗಪ್ಪ, ಮಹಾದೇವ, ಶರಣಪ್ಪ ಪಂಪನಗೌಡ, ಸಿದ್ದಪ್ಪ, ರಮೇಶ ಶಿವಾನಂದ ಸೇರಿದಂತೆ ಹಲವರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app