ಕೊಪ್ಪಳ | ಮರದಡಿ ಕುಳಿತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ: ಗಂಭೀರ ಗಾಯ

  • ಗ್ರಾಮದಲ್ಲಿ ಭಯದ ವಾತಾವರಣ
  • ಗಾಯಗೊಂಡ ವ್ಯಕ್ತಿ ಜಿಲ್ಲಾಸ್ಪತ್ರೆಗೆ ದಾಖಲು

ಮರದ ಕೆಳಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ಮಾಡಿ ಗಂಭಿರವಾಗಿ ಗಾಯಗೊಳಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಹನುಮನಹಳ್ಳಿಯ ಷಣ್ಮುಖಪ್ಪ ರಾಮಪ್ಪ ಬಡಿಗೇರ್ ಎಂಬಾತ ದಾಳಿಗೆ ತುತ್ತಾಗಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಹನುಮನಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯರು ಅದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಬೋನಿನೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. 

ಚಿರತೆ ಸೆರೆಹಿಡಿಯುವ ಪ್ರಯತ್ನ ನಡೆಯುತ್ತಿರುವಾಗ ಗಾಬರಿಗೊಂಡು ಚಿರತೆ, ಮರದ ಅಡಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದೆ. ಸ್ಥಳದಲ್ಲಿಯೇ ಇದ್ದ ಅರಣ್ಯ ಇಲಾಖೆ ಮತ್ತು ಪೊಲೀಸರು ಆತನನ್ನು ರಕ್ಷಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಬೇಲೂರು| ಕಾಫಿ ಕೊಯ್ಲು ಮುಗಿಯುವವರೆಗಾದರೂ ಕಾಡಾನೆ ಸ್ಥಳಾಂತರಿಸಲು ಶಾಸಕ ಲಿಂಗೇಶ್‌ ಆಗ್ರಹ

ಘಟನೆ ಕುರಿತು ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಮಾತನಾಡಿ, “ಹನುಮನಹಳ್ಳಿಯಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದೆವು. ಆ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದರು.

ಹನುಮನಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app