ಕೊಪ್ಪಳ | ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಇಬ್ಬರು ಸಾವು: ಸಾಮಾಜಿಕ ಕಾರ್ಯಕರ್ತರ ಆರೋಪ

Koppal
  • ಅಗಸ್ಟ್‌ 11 ರಂದು ಹುಲಿಹೈದರ್ ಗ್ರಾಮದಲ್ಲಿ ನಡೆದ ಗಲಬೆ
  • 58 ಮಂದಿ ವಿರುದ್ಧ ಪ್ರಕರಣ ದಾಖಲು, 38 ಮಂದಿ ಬಂಧನ

ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಕೊಪ್ಪಳ ಜಿಲ್ಲಾ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಗಲಬೆ ನಡೆದು, ಇಬ್ಬರು ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಸಬೇಕು ಮತ್ತು ನಿರ್ಲಕ್ಷ್ಯವಹಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದ್ದಾರೆ. 

ಕೊಪ್ಪಳ ಜಿಲ್ಲಾಧಿಕಾರಿ ಕಚೆರಿಯಲ್ಲಿ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರನ್ನು ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತರು, ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. 

ಈ ವೇಳೆ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡ ಡಿ.ಎಚ್ ಪೂಜಾರ, "ಅಗಸ್ಟ್‌ 11 ರಂದು ಗ್ರಾಮದಲ್ಲಿ ಗಲಬೆ ನಡೆದು ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ" ಎಂದು ಆರೋಪಿಸಿದರು.

"ಹುಲಿಹೈದರ್ ಗ್ರಾಮದಲ್ಲಿ ಮೋಹರಂ ಕೊನೆಯ ದಿನ ಅಗಸ್ಟ್‌ 09 ರಂದು ಕೆಲವರು ರಾತ್ರಿ ಚಾಕು, ಚೂರಿ ಹಾಗೂ ಮಾರಾಕಾಸ್ತ್ರಗಳನ್ನು ಹಿಡಿದು ಗುಂಪು ಕಟ್ಟಿಕೊಂಡು ಓಡಾಡಿದ್ದಾರೆ. ಅವರಲ್ಲಿ ಕೆಲವರನ್ನು ಪೊಲೀಸ್‌ ಠಾಣೆಗೆ ಕರೆಸಿಕೊಂಡ ಪೊಲೀಸರು, ಕೇವಲ ಎಚ್ಚರಿಕೆ ನೀಡಿ ಕಳಿಸಿದ್ದರು. ಅವರ ನಿರ್ಲಕ್ಷ್ಯದಿಂದಾಗಿ ಗಲಬೆ ನಡೆದಿದೆ" ಎಂದು ಅವರು ಕಿಡಿಕಾರಿದರು. 

"ಜುಲೈ 28ರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಪೊಲೀಸ್ ಇಲಾಖೆ ಜಾಗೃತಿ ವಹಿಸಿಲ್ಲ. ಆಗಸ್ಟ್ 1 ರಂದು ಗ್ರಾಮದಲ್ಲಿ ಪೊಲೀಸ್ ಇಲಾಖೆಯವರು ಮೂರ್ತಿಗಳ ಪ್ರತಿಷ್ಠಾಪನೆ ಕುರಿತು ನಡೆಸಿದ ಶಾಂತಿ ಸಭೆಯಲ್ಲಿ ಗಲಾಟೆ ನಡೆದಿತ್ತು. ಆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅಗಸ್ಟ್‌ 11ರಂದು ಗ್ರಾಮದಲ್ಲಿ ಕೇವಲ ಮೂವರು ಪೊಲೀಸರು ಸ್ಥಳದಲ್ಲಿ ಹಾಜರಿದ್ದು, ಗಲಬೆ ಉಂಟಾಗಿ ಇಬ್ಬರು ಅಮಾಯಕರು ಬಲಿಯಾದರು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಕರಿಯಪ್ಪ ಗುಡಿಮನಿ ತಿಳಿಸಿದ್ದಾರೆ. 

"ವಿಶೇಷ ಪೋಲೀಸ್ ಪಡೆಯೊಂದಿಗೆ 30 ರಿಂದ 40 ಜನ ಪೋಲೀಸರಿದ್ದರೆ, ಎರಡು ಅಮೂಲ್ಯ ಜೀವಗಳು ಬದುಕುಳಿಯುತ್ತಿದ್ದವು. ಇಬ್ಬರು ಪ್ರಾಣ ಕಳೆದುಕೊಂಡ ಬಳಿಕ ಎಸ್‌ಪಿ, ಡಿವೈಎಸ್‌ಪಿ, ಎಸ್‌ಐ ಹಾಗೂ ಹತ್ತಾರು ಪಿಎಸ್‌ಐ ಮತ್ತು ಎಎಸ್‌ಐ ಸೇರಿದಂತೆ ನೂರಾರು ಪೋಲೀಸರು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದಾರೆ" ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಶೀಲವಂತರ, ಕರಿಯಪ್ಪ ಗುಡಿಮನಿ, ಆನಂದ ಭಂಡಾರಿ, ಮಂಜುನಾಥ ದೊಡ್ಡಮನಿ ಹಾಗೂ ಸಂಜಯ ದಾಸ್ ಇತರರು ಇದ್ದರು.

ಪ್ರಕರಣದ ಹಿನ್ನಲೆ

Image
Hulihydar

ಹುಲಿಹೈದರ್ ಗ್ರಾಮದಲ್ಲಿ ಅಗಸ್ಟ್‌ 11 ರಂದು ನಡೆದ ಗಲಬೆ ನಡೆದಿದ್ದು, ಯಂಕಪ್ಪ ತಳವಾರ (60), ಪಾಷವಲಿಸಾಬ ಮಾಳಿಗದ್ದಿ (22) ಎಂಬ ಇಬ್ಬರು ಮೃತಪಟ್ಟಿದ್ದಾರೆ.

ಗಲಬೆಗೆ ಮುಸ್ಲಿಂ ಜನಾಂಗದ ಯುವತಿ ಮತ್ತು ನಾಯಕ ಸಮುದಾಯದ ಯುವಕನ ಪ್ರೇಮ ಪ್ರಕರಣವೇ ನೆಪವಾಗಿತ್ತು ಎಂದು ಹೇಳಲಾಗಿದೆ. ಆದರೆ, ಗಲಬೆಗೆ ರಾಜಕೀಯ ಪ್ರೇರಿತವೆಂದೂ ಗ್ರಾಮದ ಕೆಲವರು ಆರೋಪಿಸಿದ್ದಾರೆ.

ಕನಕಪುರ ಗ್ರಾಮದ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ಹನುಮೇಶ ನಾಯಕ ಎಂಬಾತ, ಗ್ರಾಮದಲ್ಲಿ ಪುನಃ ರಾಜಕೀಯವಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದ. ಅದಕ್ಕಾಗಿ ವಾಲ್ಮೀಕಿ ಅವರ ಮೂರ್ತಿ ಪ್ರತಿಷ್ಠಾಪನೆ ನೆಪದಲ್ಲಿ ತನ್ನ ಸ್ವಜಾತಿಯವರನ್ನು ಸಂಘಟಿಸಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಗಲಬೆಗೂ ಆತನೇ ಕಾರಣವೆಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಒಟ್ಟು 58 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 38 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಪರಾರಿಯಾಗಲು ನೆರವು ನೀಡಿದ ಹಿನ್ನೆಲೆ ಕೆಡಿಪಿ ಮಾಜಿ ಸದಸ್ಯ ಬಿಜೆಪಿ ಮುಖಂಡ ಗುರನಗೌಡನನ್ನು ಪೊಲೀಸರು ಬಂಧಿಸಿದ್ದಾರೆ. 

ಹುಲಿಹೈದರ್ ಗ್ರಾಮಕ್ಕೆ ಸ್ಥಳೀಯ ಶಾಸಕ ಬಸವರಾಜ ಧಡೇಸೂಗುರು, ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಮೃತರ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ನೀಡಿದ್ದಾರೆ. 

ಮಾಸ್ ಮೀಡಿಯಾ ರಾಯಚೂರು ವಲಯ ಸಂಯೋಜಕ ಮಹಮ್ಮದ್ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್