
- ʼಬಿಜೆಪಿ ಸರ್ಕಾರದಿಂದ ಯಾವ ಕೊಡುಗೆ ಕೂಡ ಈಡಿಗ ಮತ್ತು ಬಿಲ್ಲವ ಸಮುದಾಯಕ್ಕೆ ಸಿಕ್ಕಿಲ್ಲʼ
- ʼಸಮುದಾಯದ ಜನ ಬೀದಿಗೆ ಬರುತ್ತಿದ್ದು, ನಮ್ಮ ರಾಜಕಾರಣಿಗಳಿಂದಲೇ ನಮಗೆ ಅನ್ಯಾಯʼ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ದ ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಇಬ್ಬರು ಸೇರಿ ಈಡಿಗ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಶಿರಸಿ ತಾಲೂಕಿನ ಸಿದ್ಧಾಪುರದಲ್ಲಿ ಮಾತನಾಡಿದ ಅವರು, “ಬಿಜೆಪಿ ಸರ್ಕಾರದಿಂದ ಈಡಿಗ ಮತ್ತು ಬಿಲ್ಲವ ಸಮುದಾಯಕ್ಕೆ ಯಾವ ಕೊಡುಗೆ ಕೂಡ ಸಿಕ್ಕಿಲ್ಲ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹಲವೆಡೆ ನಾರಾಯಣ ಗುರು ವಸತಿ ಶಾಲೆ ಪ್ರಾರಂಭಿಸಿದ್ದೇವೆ ಅಂತಾರೆ. ಆದರೆ, ಈ ವಸತಿ ಶಾಲೆಗಳಲ್ಲಿ ಈಡಿಗ ಸಮುದಾಯ ಮಕ್ಕಳಿಗೆ ಮೀಸಲಾತಿ ಇಲ್ಲ. ಈಡಿಗ, ಬಿಲ್ಲವ ಸಮಾಜಕ್ಕೆ ಮೀಸಲಾತಿ ಒದಗಿಸಲು ಧ್ವನಿ ಎತ್ತುವಲ್ಲಿ ಸಮುದಾಯದ ಇಬ್ಬರು ಸಚಿವರು ವಿಫಲರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಮುದಾಯದ ಯುವಕರು, ಮಹಿಳೆಯರು ಬೀದಿಗೆ ಬರುತ್ತಿದ್ದಾರೆ. ನಮ್ಮ ಸಮುದಾಯದ ರಾಜಕಾರಣಿಗಳಿಂದಲೇ ನಮಗೆ ಅನ್ಯಾಯವಾಗಿದೆ. ನಾರಾಯಣ ಗುರು ನಿಗಮವನ್ನು ಘೋಷಣೆ ಮಾಡುವುದರಲ್ಲಿ ಸಮುದಾಯದ ಶಾಸಕರ ನಿಲುವೇನು? ರಾಜ್ಯದಲ್ಲಿರುವ ಈಡಿಗ, ಬಿಲ್ಲವ ಸಮುದಾಯದ ಶಾಸಕರಿಂದ ಯಾವುದೇ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಕೋಮುಗಲಭೆ ಹುಟ್ಟು ಹಾಕುವ ಶಾಸಕ ಸಿ ಟಿ ರವಿ ವಿರುದ್ಧ ಪ್ರಕರಣ ದಾಖಲಾಗಲಿ: ಡಿ ಕೆ ಶಿವಕುಮಾರ್
“ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಗೌಡ ಸಮುದಾಯದ ರಾಜಕಾರಣಿಗಳು ಸರ್ಕಾರಕ್ಕೆ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದಾರೆ. ಈಡಿಗ, ಬಿಲ್ಲವ ಸಮುದಾಯದ ನಾಯಕರಿಗೆ ನಾಚಿಗೆಯಾಗಬೇಕು” ಎಂದು ಹರಿಹಾಯ್ದರು.
“2023ರಲ್ಲಿ ನಡೆಯುವ ಚುನಾವಣೆ ವೇಳೆ ಸಮುದಾಯದ ಮತ ನಿಮಗೆ ಬೇಡವೆಂದಲ್ಲಿ ಹೇಳಿಬಿಡಿ. ಜನವರಿ 6ರಂದು ಮಂಗಳೂರು-ಬೆಂಗಳೂರು ಪಾದಯಾತ್ರೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಡಿಗ, ಬಿಲ್ಲವ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು” ಎಂದು ಆಗ್ರಹಿಸಿದರು.