ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ; ಮನೆ ಮನೆ ಮೇಲೂ ಹಾರುತ್ತಿರುವ ತ್ರಿವರ್ಣ ಧ್ವಜಗಳು

Flag
  • ಶನಿವಾರದಿಂದ ಸೋಮವಾರದ ತನಕ ಮನೆ ಮನೆ ಮೇಲೂ ತ್ರಿವರ್ಣ ಧ್ವಜ ಹಾರಾಟ
  • ರಾಜಕೀಯ ನಾಯಕರ ಆದಿಯಾಗಿ ಸಾಮಾನ್ಯ ಜನರಿಂದಲೂ ಧ್ವಜಾರೋಹಣ

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಶನಿವಾರದಿಂದ ಸೋಮವಾರ (ಆಗಸ್ಟ್‌ 13-15) ತನಕ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರು ಬೆಂಗಳೂರಿನ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ.

ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ʼಹರ್ ಘರ್ ತಿರಂಗಾʼ ಅಭಿಯಾನ ಇಂದು ಆರಂಭವಾಗಿದ್ದು, ರಾಜ್ಯದ ಸಾವಿರಾರು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿವೆ. 'ಆಜಾದಿ ಕಾ ಅಮೃತ ಮಹೋತ್ಸವ'ದ ಸಂಭ್ರಮ ಈಗ ಎಲ್ಲೆಡೆ ಮನೆ ಮಾಡಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 13ರಿಂದ 15ರವರೆಗೆ ಎಲ್ಲರ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಿಸುವ ʼಹರ್ ಘರ್ ತಿರಂಗಾʼ ಅಭಿಯಾನ ಘೋಷಿಸಿದ್ದರು. ಅದರಂತೆ ರಾಜಕೀಯ ನಾಯಕರ ಆದಿಯಾಗಿ ನಾಗರಿಕರು ಧ್ವಜಾರೋಹಣ ಮಾಡುತ್ತಿದ್ದಾರೆ.

ಜನರಲ್ಲಿ ದೇಶಭಕ್ತಿ ಭಾವನೆ ತುಂಬುವುದರ ಜೊತೆಗೆ ಭಾರತದ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದವರನ್ನು ನೆನಪಿಸಿಕೊಳ್ಳುವ ಉದ್ದೇಶವೂ ಈ ಅಭಿಯಾನದ ಹಿಂದಿದೆ. ಶನಿವಾರ ರಾಜ್ಯದ ಜನತೆ ತಮ್ಮ ಮನೆ, ಕಚೇರಿ, ಅಂಗಡಿ ಮುಂಗಟ್ಟುಗಳು ಸೇರಿದಂತೆ ತಾವು ಕಾರ್ಯನಿರ್ವಹಿಸುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆಯುತ್ತಿದ್ದಾರೆ. 

ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಆರೋಗ್ಯ ಸಚಿವ ಸುಧಾಕರ್ ಪಾಲ್ಗೊಂಡಿದ್ದರು. ಈ ಕುರಿತ ಫೋಟೋಗಳನ್ನು 'ಆಜಾದಿ ಕಾ ಅಮೃತ ಮಹೋತ್ಸವ' ಎಂಬ ಹ್ಯಾಶ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನಾಯಕರು ಮತ್ತು ಕರ್ನಾಟಕ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ʼಹರ್ ಘರ್ ತಿರಂಗಾʼ ಅಭಿಯಾನದ ಭಾಗವಾಗಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಕಂದಾಯ ಸಚಿವ ಆರ್‌ ಅಶೋಕ್, ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ತಮ್ಮ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ರಾಷ್ಟ್ರಧ್ವಜ ಖರೀದಿಸುವ ಮುನ್ನ ಗಮನವಿರಲಿ: ಭಾಸ್ಕರ್ ರಾವ್ ಎಚ್ಚರಿಕೆ

ಗ್ರಾಮೀಣ ಭಾಗದಲ್ಲೂ ಹಾರಾಡಿದ ತ್ರಿವರ್ಣ ಧ್ವಜ

ರಾಜಕೀಯ ಗಣ್ಯರು, ಸಚಿವರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಅಭಿಯಾನಕ್ಕೆ ಸ್ಪಂದಿಸಿದ್ದಾರೆ. ತಮ್ಮ ಮನೆಗಳ ಮೇಲೆ ರಾಷ್ಟ್ರಧಜ ಹಾರಿಸಿ ಫೋಟೊ, ವಿಡಿಯೋಗಳನ್ನು ಪೋಸ್ಟ್ ಮಾಡಿಕೊಂಡು ದೇಶಪ್ರೇಮ ಮೆರೆದಿದ್ದಾರೆ. ಈ ಅಭಿಯಾನ ಕರ್ನಾಟಕದ ಹಳ್ಳಿಗಳಿಗೂ ವಿಸ್ತರಿಸಿದ್ದು, ಮನೆಗಳ ಮೇಲೆ ಹಾಗೂ ಬೈಕ್, ಸ್ವಂತ ವಾಹನಗಳ ಮೇಲೂ ರಾಷ್ಟ್ರ ಬಾವುಟ ಹಾರಾಡುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್