ಸಿದ್ದರಾಮಯ್ಯ ಮೊದಲು ಡಿ ಕೆ ಶಿವಕುಮಾರ್ ಬೆಂಬಲ ಪಡೆಯಲಿ: ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ
  • ಕಡೂರು ತಾಲ್ಲೂಕಿನಲ್ಲಿ ನಡೆದ 'ಜನಸಂಕಲ್ಪ ಯಾತ್ರೆ'ಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ
  • ʼಅಧಿಕಾರಕ್ಕಾಗಿ ಕಾಂಗ್ರೆಸ್‌ ರಾಜಕಾರಣ, ಜನರಿಗಾಗಿ ಬಿಜೆಪಿ ರಾಜಕಾರಣ ಮಾಡುತ್ತೆʼ

"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲು ಡಿ ಕೆ ಶಿವಕುಮಾರ್ ಅವರ ಬೆಂಬಲ ಪಡೆಯಲಿ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 'ಜನಸಂಕಲ್ಪ ಯಾತ್ರೆ'ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ನಾನು ಮುಖ್ಯಮಂತ್ರಿಯಾಗಬೇಕಾದರೆ ಜನರು ಕಾಂಗ್ರೆಸ್ಸಿಗೆ ಮತ ಹಾಕಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಲಿ. ಡಿ.ಕೆ.ಶಿವಕುಮಾರ್ ಬೆಂಬಲ ಪಡೆಯಲು ಸಾಧ್ಯವಿಲ್ಲದಿದ್ದವರು ಜನರ ಬೆಂಬಲ ಹೇಗೆ ಕೇಳುತ್ತಾರೆ” ಎಂದು ಕಾಲೆಳೆದರು.

ಅನ್ನಭಾಗ್ಯ ಯೋಜನೆಗೆ ಕನ್ನ 

“2013ರಲ್ಲಿ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಕೇಳಿದಾಗ ಜನ ಆಶೀರ್ವಾದ ಮಾಡಿ ಮುಖ್ಯಮಂತ್ರಿಯೂ ಆದರು. ಆಶೀರ್ವಾದ ಮಾಡಿದ ಜನಗಳಿಗೆ ಭಾಗ್ಯಗಳನ್ನು ಘೋಷಿಸಿ, ಕೇವಲ ಪುಸ್ತಕದಲ್ಲಿಟ್ಟು ಜನರಿಗೆ ಯಾವುದೂ ಕೂಡ ತಲುಪಲಿಲ್ಲ. 2018ರಲ್ಲಿ ಜನರು ವಿರೋಧ ಪಕ್ಷದಲ್ಲಿ ಕೂಡಿಸಿದರು. ನಿಮ್ಮ ಕಾಲದಲ್ಲಿ ಅನ್ನಕ್ಕೆ ಕನ್ನ ಹಾಕಿದ್ದನ್ನು ಜನ ಮರೆತಿಲ್ಲ ಎಂದರು.

“ನಿಮ್ಮ ಕಾಲದಲ್ಲಿ ನೀರಾವರಿಯಲ್ಲಿ 100 ಪರ್ಸೆಂಟೇಜ್ ಪಡೆದಿರುವುದನ್ನು, ಹಾಸ್ಟಲ್‍ಗಳಿಗೆ ನೀಡಬೇಕಿದ್ದ ದಿಂಬು, ಹಾಸಿಗೆಯಲ್ಲಿ, ಬಿಡಿಎನಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು, ಧರ್ಮವನ್ನು ಒಡೆಯುವ ಪ್ರಯತ್ನವನ್ನು, ಸಾಮಾಜಿಕ ಸಾಮರಸ್ಯ ಹಾಳು ಮಾಡಿ 20 ಕ್ಕಿಂತ ಹೆಚ್ಚು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಯುವಕರ ಕೊಲೆಯಾಗಿದ್ದನ್ನು ಜನ ಮರೆತಿಲ್ಲ. ಯಾರ ಉದ್ಧಾರಕ್ಕಾಗಿ ಅವರನ್ನು ಮುಖ್ಯಮಂತ್ರಿ ಮಾಡಬೇಕು? ಕರ್ನಾಟಕದ ಜನ ಜಾಗೃತರಾಗಿದ್ದಾರೆ” ಎಂದರು.

ಅಧಿಕಾರಕ್ಕಾಗಿ ರಾಜಕಾರಣ ಮಾಡುವ ಕಾಂಗ್ರೆಸ್

“ಎಸ್.ಸಿ.ಪಿ/ಟಿಎಸ್.ಪಿ ಯೋಜನೆಯಡಿ ಅನುದಾನ ಮೀಸಲಿಟ್ಟು ಒಂದು ವರ್ಷವಾದರೂ ಕಾಂಗ್ರೆಸ್ ಖರ್ಚು ಮಾಡಲಿಲ್ಲ. ಯಾರಿಗೂ ಅವರ ಅನುದಾನ ಮುಟ್ಟಲಿಲ್ಲ. ಇವರನ್ನು ಮತ್ತೊಮ್ಮೆ ಯಾರ ಹಿತಕ್ಕಾಗಿ ಆಯ್ಕೆ ಮಾಡಬೇಕು. ಅಧಿಕಾರಕ್ಕಾಗಿ ರಾಜಕಾರಣ ಮಾಡುವುದು ಕಾಂಗ್ರೆಸ್. ಬಿಜೆಪಿ ಜನರ ರಾಜಕಾರಣ ಮಾಡುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ನಾವು ಕೇಸರಿಯ ಮೇಲೆ ರಾಜಕಾರಣ ಮಾಡುತ್ತೇವೆ, ತಾಕತ್ತಿದ್ದರೆ ಎದುರಿಸಿ: ಸಿ ಟಿ ರವಿ ಸವಾಲು

ಸಿದ್ದರಾಮಯ್ಯರಿಗೆ ಹಳದಿ ಕಣ್ಣು

"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಳದಿ ಕಣ್ಣು. ಮಾಧ್ಯಮದವರು/ ಕ್ಯಾಮರಾಮನ್‍ಗಳು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ನೆರೆದಿರುವ ಜನರನ್ನು ತೋರಿಸಬೇಕು. ಸಿದ್ದರಾಮಯ್ಯ ಆತ್ಮವಂಚನೆಯ ಭಾಷಣ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ಸಂಕಲ್ಪವನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದೀರಿ” ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ .ರವಿ, ಜಿಲ್ಲಾ ಉಸ್ತುವಾರಿ ಸಚಿವ ಬಿ ಎ ಬಸವರಾಜ, ಶಾಸಕ ಬೆಳ್ಳಿ ಪ್ರಕಾಶ್ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app