ಮಾರ್ಗರೇಟ್ ಆಳ್ವಾ ಅವರಿಗೆ ಮೋದಿ ಪಕ್ಷ ಬೆಂಬಲಿಸಲಿ: ಮೋಟಮ್ಮ ಮನವಿ

Motamma
  • ʼಮಾರ್ಗರೇಟ್ ಆಳ್ವಾ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದೇ ಹೆಮ್ಮೆʼ
  • ʼಮಾರ್ಗರೇಟ್ ಆಳ್ವಾ ಬೆಂಬಲಿಸಲು ಮೋದಿ ಅವರನ್ನು ವಿನಂತಿಸಿಕೊಳ್ಳುತ್ತೇನೆʼ

"ದೇಶದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದು ಸಂತೋಷದ ವಿಷಯ. ಹಾಗೆಯೇ ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು ಎಂಬುದು ನಮ್ಮ ಆಶಯ" ಎಂದು ಮಾಜಿ ಸಚಿವೆ ಮೋಟಮ್ಮ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ರಾಜ್ಯದವರೇ ಆದ ನುರಿತ ಮತ್ತು ಮುತ್ಸದ್ದಿ ನಾಯಕಿ ಮಾರ್ಗರೇಟ್ ಆಳ್ವಾ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮೋದಿ ಅವರ ಪಕ್ಷ ಕೂಡ ಮಾರ್ಗರೇಟ್ ಅವರನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

“ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಸರಿಯಾದ ತೀರ್ಮಾನ ಕೈಗೊಂಡು ಆಳ್ವಾ ಅವರಿಗೆ ಬೆಂಬಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಎಲ್ಲ ಸಂಸದರಿಗೆ ನಾವೆಲ್ಲರೂ ಮನವಿ ಮಾಡುತ್ತೇವೆ” ಎಂದರು.

“ನಮ್ಮ ಕರ್ನಾಟಕದ ಹೆಣ್ಣುಮಗಳು ಸ್ಪರ್ಧಿಸಿದ್ದಾಳೆ. ನಾವೆಲ್ಲ ಅವರಿಗೆ ಬೆಂಬಲ ಸೂಚಿಸಿ ಅವರನ್ನು ಆಯ್ಕೆ ಮಾಡಬೇಕು. ಪ್ರಧಾನಿಯವರು ದೊಡ್ಡ ಮನಸ್ಸು ಮಾಡಬೇಕು ಎಂದು ಎಲ್ಲ ಮಹಿಳೆಯರ ಪರವಾಗಿ ನಾವು ವಿನಂತಿಸಿಕೊಳ್ಳುತ್ತೇನೆ" ಎಂದು ರಾಜ್ಯಸಭಾ ಸದಸ್ಯರಾದ ಬಿಂಬಾ ರಾಯ್ಕರ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿಯದು ʼಜನೋತ್ಸವʼವಲ್ಲ, 'ಭ್ರಷ್ಟೋತ್ಸವʼ: ಕಾಂಗ್ರೆಸ್‌ ಕಿಡಿ

"ರಾಜ್ಯದ ಹೆಣ್ಣುಮಗಳು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದೇ ಹೆಮ್ಮೆಯ ಸಂಗತಿ. ಅವರ ಸುದೀರ್ಘ ಸೇವೆ ನಂತರ ಅವರಿಗೆ ಈ ಅವಕಾಶ ಸಿಕ್ಕಿದ್ದು, ಎಲ್ಲ ಸಂಸದರು ಮಾರ್ಗರೇಟ್ ಅವರನ್ನು ಬೆಂಬಲಿಸಬೇಕು. ಆಳ್ವಾ ಅವರಿಗೆ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆಯರು ಆಯ್ಕೆಯಾಗಿ ದೇಶವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಆ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಮಾರ್ಗರೇಟ್ ಆಳ್ವಾ ಅವರಿಗೆ ಬೆಂಬಲಿಸಿ ಇತಿಹಾಸ ಬರೆಯಬೇಕು" ಎಂದು ಬಿ ಟಿ ಲಲಿತಾ ನಾಯಕ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್