
- ರಾಹುಲ್ ಬಚ್ಚಾ ಎಂಬ ಹೇಳಿಕೆ ವಿರುದ್ಧ ಕಾಂಗ್ರೆಸ್ ಟೀಕೆ
- ಯಡಿಯೂರಪ್ಪಗೆ ಬುದ್ಧಿಭ್ರಮಣೆ ಆಗಿದೆ ಎಂದ ಹರಿಪ್ರಸಾದ್
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಕರೆದಿರುವ ಬಗ್ಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
11ನೇ ದಿನದ ಭಾರತ್ ಜೋಡೋ ಯಾತ್ರಿ ವೇಳೆ ಹರಿಪ್ರಸಾದ್ ಮಾತನಾಡಿ, “ಯಡಿಯೂರಪ್ಪ ಬಿಜೆಪಿಯ ಮಾರ್ಗದರ್ಶಕ ಮಂಡಳಿಯಲ್ಲಿದ್ದಾರೆ. ಬಿಜೆಪಿಯಲ್ಲಿ ವಯಸ್ಸಾಗಿರೋರಿಗೆ ಈ ಮಾರ್ಗದರ್ಶಕ ಮಂಡಳಿ ಸೇರಿಸುತ್ತಾರೆ. ಯಡಿಯೂರಪ್ಪ ಸವಕಲು ನಾಣ್ಯ ಎಂದು ಇದರಿಂದಲೇ ಗೊತ್ತಾಗುತ್ತದೆ" ಎಂದು ಟೀಕಿಸಿದ್ದಾರೆ.
“ನೆಹರು ಬಗ್ಗೆ ಇವರು ಮಾತಾಡಿದಾಗ ನಾವು ಹಾಗೆ ಹೇಳಬಹುದು ಅಲ್ಲವಾ? ಯಡಿಯೂರಪ್ಪ ಅವರ ವಯಸ್ಸಿಗೆ ತಕ್ಕ ಹಾಗೆ ಹೇಳಿಕೆ ನೀಡಲಿ. ಮೋದಿಗೆ ಭಟ್ಟಂಗಿತನ ಮಾಡೋದು ಯಡಿಯೂರಪ್ಪ ನಿಲ್ಲಿಸಬೇಕು” ಎಂದು ಹರಿಹಾಯ್ದರು.
“ಚೆಕ್ ನಲ್ಲಿ ಲಂಚ ಪಡೆದು ವಿಶ್ವದಲ್ಲಿ ಖ್ಯಾತಿ ಪಡೆದವರು ಯಡಿಯೂರಪ್ಪ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಗೆ ಬುದ್ಧಿಭ್ರಮಣೆ ಆಗಿದೆ. ಹೀಗಾಗಿ ಹೀಗೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ” ಎಂದು ಜರಿದರು.
ಈ ಸುದ್ದಿ ಓದಿದ್ದೀರಾ? ಎಡವದೆ 4 ಕಿಮೀ ನಡೆದು ತೋರಿಸಿ, ನನ್ನ ಹೆಸರೆತ್ತದೆ 5 ನಿಮಿಷ ಭಾಷಣ ಮಾಡಿ ತೋರಿಸಿ; ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು
ಪ್ರಿಯಾಂಕ್ ಖರ್ಗೆ ಕಿಡಿ
“ಯಡಿಯೂರಪ್ಪ ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಇಂತಹ ಹಿರಿಯ ನಾಯಕ ಈ ಮಟ್ಟಕ್ಕೆ ಇಳಿಯಬೇಕಾ? ರಾಹುಲ್ 20 ವರ್ಷ ರಾಜಕೀಯ ಮಾಡಿದ್ದಾರೆ. ಎಂಪಿ ಆಗಿದ್ದಾರೆ. ಅಂತಹವರ ಬಗ್ಗೆ ಮಾತಾಡೋದು ಸರಿಯಲ್ಲ. ನಮಗೆ ಪಾಠ ಹೇಳೋದು ಬಿಟ್ಟು ನಿಮ್ಮ ಶಾಸಕರು, ಸಂಸದರಿಗೆ ಪಾಠ ಹೇಳಿ” ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.
“ರಾಹುಲ್ ಗಾಂಧಿ ಮೋದಿಗೆ ಪ್ರಶ್ನೆ ಕೇಳುತ್ತಿಲ್ಲ. ಪ್ರಧಾನಿ ಅವರಿಗೆ ಕೇಳಿರೋದು. ನಿಮ್ಮ ಶಾಸಕರು ನೆಹರು ಬಗ್ಗೆ ಮಾತಾಡ್ತಾರೆ. ರಾಹುಲ್ ಪ್ರಧಾನಿ ಬಗ್ಗೆ ಮಾತಾಡಿದ್ರೆ ತಪ್ಪಾ? ಬೆಂಗಳೂರು ದಕ್ಷಿಣ ಎಂಪಿ ಬಾಯಿಗೆ ಬಂದ ಹಾಗೆ ನೆಹರು ಬಗ್ಗೆ ಮಾತಾಡ್ತಾರೆ. ಸಿಟಿ ರವಿ ನೆಹರು ಬಗ್ಗೆ ಮಾತಾಡ್ತಾರೆ. ರಾಹುಲ್ ಬಚ್ಚಾ ಅನ್ನುವ ನೀವು ಅವರು ಕೇಳೋ ಪ್ರಶ್ನೆಗೆ ಉತ್ತರ ಕೊಡಿ ಸಾಕು” ಎಂದು ಸವಾಲು ಹಾಕಿದರು.