ಹಾಸನ | ಸಂವಿಧಾನ ಪುಸ್ತಕದ ಹಾಳೆ ತೆಗೆದು ನೋಡದಿದ್ದರೆ ಜೀವನ ಸಾರ್ಥಕವಾಗುವುದಿಲ್ಲ: ಶ್ರೀಧರ ಕಲಿವೀರ

Dalit Lives Matter
  • ‘ಪಿ.ಟಿ.ಸಿ.ಎಲ್ ವಿರುದ್ಧದ ಸುಪ್ರೀಂ ತೀರ್ಪು ಮರು ಪರಿಶೀಲನೆ ಅತ್ಯಗತ್ಯ’
  • ‘ಇಡಬ್ಲ್ಯೂಎಸ್ ಸುಪ್ರಿಂ ಕೋರ್ಟ್ ತೀರ್ಪು ಸಂವಿಧಾನ ವಿರೋಧಿ’

“ಸಂವಿಧಾನ ಪುಸ್ತಕದ ಹಾಳೆ ತೆಗೆದು ನೋಡದಿದ್ದರೆ ನಿಮ್ಮ ಜೀವನವೇ ಸಾರ್ಥಕವಾಗುವುದಿಲ್ಲ. ದಲಿತರಿಗೆ ಜ್ಞಾನ ಸಂಪಾದನೆ ಅತೀ ಮುಖ್ಯವಾಗಿದ್ದು, ಅಂಬೇಡ್ಕರ್ ರಚಿಸಿದ ಪುಸ್ತಕಗಳನ್ನು ಖರೀದಿಸಿ ಓದಿ” ಎಂದು ಎಸ್‌ಸಿ, ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶ್ರೀಧರ ಕಲಿವೀರ ಸಲಹೆ ನೀಡಿದರು.

ಹಾಸನ ನಗರದ 'ಸ್ವಾಭಿಮಾನ ಭವನ'ದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ “ಹಾಸನ ಜಿಲ್ಲೆಯ ಮೂಲ ನಿವಾಸಿ ಜನಾಂಗದ ಇತಿಹಾಸ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಪರಿಶಿಷ್ಟರ ಸಮಸ್ಯೆಗಳಿಗಿರುವ ಪರಿಹಾರಗಳು” ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Eedina App

“ಅಂಬೇಡ್ಕರ್ ಅವರು ಜಗತ್ತಿನ ಆರು ಜನ ಶ್ರೇಷ್ಠ ವಿದ್ಯಾವಂತರಲ್ಲಿ ಒಬ್ಬರಾಗಿದ್ದು, 32 ಗ್ರಂಥಗಳನ್ನು ರಚಿಸಿದ್ದಾರೆ. ವಿಪರ್ಯಾಸ ಎಂದರೆ ಬಹುತೇಕ ದಲಿತ ಸಂಘಟನೆಗಳ ಕಚೇರಿಗಳಲ್ಲಿ, ದಲಿತ ಮುಖಂಡರ ಮನೆಗಳಲ್ಲಿ ಅಂಬೇಡ್ಕರ್‌ ಅವರ ಯಾವ ಗ್ರಂಥಗಳೂ ಇರುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಭಾರತದ ಮೂಲ ನಿವಾಸಿಗಳು ತಮ್ಮ ಇತಿಹಾಸ ತಿಳಿಯಬೇಕಾದರೆ ಮುಖ್ಯವಾಗಿ ಅಂಬೇಡ್ಕರ್ ಗ್ರಂಥಗಳನ್ನು ಓದಬೇಕು. ನಾವು ಯಾರು, ನಮ್ಮ ಇತಿಹಾಸ ಏನು, ಆರ್ಯರಿಗೂ ನಮಗೂ ಇರುವ ಸಂಬಂಧವೇನು ಎಂಬ ಪ್ರಶ್ನೆಗಳಿಗೆ ಅಂಬೇಡ್ಕರ್ ಅವರ ಗ್ರಂಥಗಳಲ್ಲಿ ಉತ್ತರ ಸಿಗಲಿದೆ. ಭಾರತದ ಮೂಲ ನಿವಾಸಿಗಳ ಇತಿಹಾಸ ಅರಿತುಕೊಂಡರೆ ಮಾತ್ರ ಮುಂದೆ ಒಂದು ಭವ್ಯ ಇತಿಹಾಸ ಸೃಷ್ಠಿಸಬಹುದು” ಎಂದು ಅಭಿಪ್ರಾಯಪಟ್ಟರು.

AV Eye Hospital ad

“ಮನುವಾದಿಗಳು ಇಂದು ನೈಜ ಇತಿಹಾಸವನ್ನು ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತಕ್ಕೆ ಎರಡು ಇತಿಹಾಸವಿದ್ದು, ಮೊದಲನೆಯದು ವಿದೇಶದಿಂದ ಬಂದು ಆಕ್ರಮಣ ಮಾಡಿದಂತಹ ಆರ್ಯರ, ವೈದಿಕರ ಇತಿಹಾಸ. ಇನ್ನೊಂದು ಆರ್ಯರಿಗಿಂತ ಮೊದಲೇ ಇದ್ದ ಮೂಲ ನಿವಾಸಿಗಳಾದ ನಾಗ ಜನಾಂಗ ದೇಶವನ್ನು ಆಳಿದಂತಹ ಇತಿಹಾಸ" ಎಂದರು.

“ವೈದಿಕರು, ಆರ್ಯರು ನಮ್ಮ ಒಗ್ಗಟ್ಟನ್ನು ಒಡೆದು, ಜಾತಿ ಪದ್ಧತಿ ಜಾರಿಗೆ ತಂದರು. ಮೂಲ ನಿವಾಸಿ ನಾಗ ಜನಾಂಗ ಮತ್ತು ದ್ರಾವಿಡ ಜನಾಂಗವೇ ಮುಂದೆ ಪರಿಶಿಷ್ಠ ಜಾತಿ ಮತ್ತು ಪಂಗಡವಾಯಿತು. ಪ್ರಸ್ತುತ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಮತ್ತು ಪರಿಶಿಷ್ಠ ಪಂಗಡದಲ್ಲಿ 53 ಜಾತಿಗಳನ್ನು ಗುರುತಿಸಲಾಗಿದೆ” ಎಂದು ಹೇಳಿದರು.

“ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳವು ಜಾರಿಯಾಗಿದ್ದು, ಇದರಿಂದ ವಾರ್ಷಿಕ 10 ಸಾವಿರ ಕೋಟಿ ಅನುದಾನ ಬಿಡುಗಡೆ ಆಗುತ್ತದೆ. ಆದರೆ, ಈ ಅನುದಾನವನ್ನು ಉದ್ದೇಶಿತ ಯೋಜನೆಗೆ ಬಳಸದೇ, ಹೆದ್ದಾರಿ ಮತ್ತು ಇತರೆ ಅನ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಮುಂದಾಗಬೇಕು" ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ; ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ

"ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು ಮತ್ತು ನೀಡಿದವರಿಗೆ ಜೈಲು ಶಿಕ್ಷೆ ಆಗಬೇಕು. ಪಿ.ಟಿ.ಸಿ.ಎಲ್. ಕಾಯಿದೆ ವಿರುದ್ಧ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕು. ಮೇಲ್ಜಾತಿಯ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10 ರಷ್ಟು ಮೀಸಲಾತಿ ನೀಡಿರುವ ಸುಪ್ರಿಂ ಕೋರ್ಟ್ ಆದೇಶ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ" ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಶಾಂತಿಗ್ರಾಮ, ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಮುಖಂಡರಾದ ಕೃಷ್ಣ, ಕೆ ವೈ ಜಗದೀಶ್, ವಳಲಹಳ್ಳಿ ವಿರೇಶ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್, ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಮಹಿಳಾ ಹೋರಾಟಗಾರ್ತಿ ಪ್ರಮೀಳ ಹೆತ್ತೂರ್ ಹಾಗೂ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app